ನವದೆಹಲಿ(ಡಿ.31): ಬ್ರಿಟನ್‌ನಿಂದ ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಮತ್ತೆ 14 ಮಂದಿಯಲ್ಲಿ ಬುಧವಾರ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಅದರೊಂದಿಗೆ, ಮಂಗಳವಾರ ಹೊಸ ತಳಿಯ ಸೋಂಕು ಪತ್ತೆಯಾಗಿದ್ದ 6 ಮಂದಿಯೂ ಸೇರಿದಂತೆ ಬ್ರಿಟನ್‌ನ ‘ವೇಗವಾಗಿ ಹರಡುವ ವೈರಸ್‌’ ಸೋಂಕು ತಗಲಿದವರ ಸಂಖ್ಯೆ ಭಾರತದಲ್ಲಿ 20ಕ್ಕೆ ಏರಿಕೆಯಾಗಿದೆ.

ಡಿ.23ರವರೆಗೆ ಅದರ ಹಿಂದಿನ 14 ದಿನಗಳ ಕಾಲ ಬ್ರಿಟನ್‌ನಿಂದ ಬಂದ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರಗಳು ತೀವ್ರ ನಿಗಾ ಇರಿಸಿವೆ. ಈ ಪೈಕಿ ಕೊರೋನಾ ಪಾಸಿಟಿವ್‌ ಬಂದವರನ್ನು ದೇಶದ 10 ಪ್ರಯೋಗಾಲಯಗಳಲ್ಲಿ ಜೀನೋಮ್‌ ಸೀಕ್ವೆನ್ಸಿಂಗ್‌ಗೆ (ಬ್ರಿಟನ್‌ನ ರೂಪಾಂತರಿ ವೈರಸ್‌ ಪತ್ತೆ) ಒಳಪಡಿಸಲಾಗುತ್ತಿದೆ. ಅಲ್ಲಿ ಬುಧವಾರ 14 ಜನರ ಸ್ಯಾಂಪಲ್‌ನಲ್ಲಿ ಬ್ರಿಟನ್‌ನ ರೂಪಾಂತರಿ ವೈರಸ್‌ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದೆರಡು ದಿನಗಳಲ್ಲಿ ನ್ಯಾಷನಲ್‌ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ (ಎನ್‌ಸಿಡಿಸಿ)ಯಲ್ಲಿ ಎಂಟು, ಕೋಲ್ಕತಾದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಮೆಡಿಕಲ್‌ ಜೀನಾಮಿಕ್ಸ್‌ (ಎನ್‌ಐಬಿಎಂಜಿ)ಯಲ್ಲಿ ಒಂದು, ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ (ಎನ್‌ಐವಿ)ಯಲ್ಲಿ ಒಂದು, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಏಳು, ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮಾಲಿಕ್ಯುಲರ್‌ ಬಯಾಲಜಿ (ಸಿಸಿಎಂಬಿ)ಯಲ್ಲಿ ಎರಡು ಹಾಗೂ ದೆಹಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಜೀನಾಮಿಕ್ಸ್‌ ಅಂಡ್‌ ಇಂಟಿಗ್ರೇಟಿವ್‌ ಬಯಾಲಜಿ (ಐಜಿಐಬಿ)ಯಲ್ಲಿ ಒಂದು ಮಾದರಿಯಲ್ಲಿ ಬ್ರಿಟನ್‌ನ ರೂಪಾಂತರಿ ವೈರಸ್‌ ಪತ್ತೆಯಾದಂತಾಗಿದೆ.

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮಂಗಳವಾರ ಮೂವರಲ್ಲಿ ಈ ವೈರಸ್‌ ಪತ್ತೆಯಾಗಿತ್ತು. ಬುಧವಾರ ಮತ್ತೆ ನಾಲ್ವರಲ್ಲಿ ಪತ್ತೆಯಾಗಿದೆ.