ಭಾರೀ ಮಳೆಗೆ ಕಲ್ಲು ಕ್ವಾರಿ ಕುಸಿದು 13 ಜನರ ದಾರುಣ ಸಾವು: ಹಲವರು ನಾಪತ್ತೆ
ಕಲ್ಲು ಕ್ವಾರಿಯೊಂದು ಕುಸಿದ ಪರಿಣಾಮ 13 ಜನ ಸಾವನ್ನಪ್ಪಿ 16ಕ್ಕೂ ಹೆಚ್ಚು ಜನ ಮಣ್ಣಿನಡಿ ಸಿಲುಕಿಕೊಂಡ ಘಟನೆ ಈಶಾನ್ಯ ಭಾರತದ ಮಿಜೋರಾಂನ ರಾಜಧಾನಿ ಐಜವ್ಲ್‌ನಲ್ಲಿ ನಡೆದಿದೆ.
ಕಲ್ಲು ಕ್ವಾರಿಯೊಂದು ಕುಸಿದ ಪರಿಣಾಮ 13 ಜನ ಸಾವನ್ನಪ್ಪಿ 16ಕ್ಕೂ ಹೆಚ್ಚು ಜನ ಮಣ್ಣಿನಡಿ ಸಿಲುಕಿಕೊಂಡ ಘಟನೆ ಈಶಾನ್ಯ ಭಾರತದ ಮಿಜೋರಾಂನ ರಾಜಧಾನಿ ಐಜವ್ಲ್‌ನಲ್ಲಿ ನಡೆದಿದೆ. ಘಟನಾ ಸ್ಥಳದಿಂದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಜನರ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಮಿಜೋರಾಂನಲ್ಲಿ ಮೂರು ವರ್ಷದಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದೆ. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಮೆಲ್ತಮ್ ಹಾಗೂ ಹ್ಲಿಮೆನ್ ನಡುವಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ರಕ್ಷಣಾಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಬರೀ ಇಲ್ಲಿ ಮಾತ್ರವಲ್ಲದೇ ಮಿಜೋರಾಂ ರಾಜ್ಯದ ಹಲವೆಡೆ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ನದಿಯ ನೀರಿನ ಮಟ್ಟವೂ ಏರುತ್ತಲೇ ಇದೆ. ಹೀಗಾಗಿ ನದಿ ತೀರ ಸಮೀಪ ವಾಸ ಮಾಡುತ್ತಿದ್ದ ಹಲವರನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿದೆ ಎಂದು ಮಿಜೋರಾಂ ಡಿಜಿಪಿ ಅನಿಲ್ ಶುಕ್ಲಾ ಹೇಳಿದ್ದಾರೆ.
ಹಂತಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿಯೂ ಭೂಕುಸಿತ ಸಂಭವಿಸಿದ್ದು, ಇದರಿಂದ ಮಿಜೋರಾಂನ ರಾಜಧಾನಿ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಇದರ ಜೊತೆಗೆ ರಾಜ್ಯದ ಹಲವು ಅಂತಾರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ತೊಂದರೆಗೊಳಗಾಗಿವೆ. ಹೀಗಾಗಿ ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಅಸ್ಸಾಂನ ಹಫ್ಲಾಂಗ್-ಸಿಲ್ಚಾರ್ ನಡುವಣ ಸಂಪರ್ಕ ರಸ್ತೆಯು ನದಿಯ ನೀರಿನ ಏರಿಕೆಯಿಂದಾಗಿಮುಳುಗಿದೆ. ಭಾರಿ ಮಳೆಯ ಜೊತೆ ಗಾಳಿಯಿಂದ ಉಂಟಾದ ಅವಘಡದಲ್ಲಿ ರಾಜ್ಯದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 17 ಮಂದಿ ಗಾಯಗೊಂಡಿದ್ದಾರೆ ಎಂದು ದಿಮಾ ಹಸಾವೊ ಜಿಲ್ಲೆಯ ಜಿಲ್ಲಾಧಿಕಾರಿ ಸಿಮಂತ ಕುಮಾರ್ ದಾಸ್ ತಿಳಿಸಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.