ತಿರುವನಂತಪುರಂ (ಡಿ. 24):  ಕೇರಳಕ್ಕೆ ಸೋಮವಾರ ಸಂಜೆ ಆಗಮಿಸಿದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ 13 ವಿದ್ಯಾರ್ಥಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀ ಪದ್ಮನಾಭಸ್ವಾಮಿ ದೇವಾಲಯಕ್ಕೆ ದರ್ಶನಕ್ಕೆಂದು ಯಡಿಯೂರಪ್ಪ ಸಂಜೆ ಇಲ್ಲಿಗೆ ಆಗಮಿಸಿದರು. ಆಗ 13 ಕಾರ್ಯಕರ್ತರು ಇಲ್ಲಿನ ತಂಪನೂರ್‌ ಪ್ರದೇಶದಲ್ಲಿ ಕಪ್ಪುಧ್ವಜ ಹಿಡಿದು ಆಗಮಿಸಿ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಇವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.

ಕರ್ನಾಟಕದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಬಿಎಸ್‌ವೈ ನೀಡಿದ ಹೇಳಿಕೆ ಖಂಡಿಸಿ ಹಾಗೂ ಇತ್ತೀಚೆಗೆ ಮಂಗಳೂರಿನಲ್ಲಿ ಕೇರಳ ಮೂಲದ ಪತ್ರಕರ್ತರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರ ಕ್ರಮ ವಿರೋಧಿಸಿ ಅವರು ಈ ಪ್ರತಿಭಟನೆ ನಡೆಸಿದರು.

ಮುಸ್ಲಿಂ ಮುಖಂಡರಿಗೆ ಪೌರತ್ವ ಕಾಯ್ದೆಯ ಪಾಠ ಮಾಡಿದ ಸಿಎಂ..

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಕಾಂಗ್ರೆಸ್‌ ಮುಖಂಡ ರಾಹುಲ್‌, ‘ದೇವಾಲಯಕ್ಕೆ ಪೊಲೀಸರು ಭದ್ರತೆ ಏರ್ಪಡಿಸಿದ್ದರಿಂದ ಬಿಎಸ್‌ವೈ ಉಳಿದಿದ್ದ ಹೋಟೆಲ್‌ ಸುತ್ತ ಪ್ರತಿಭಟಿಸಲು ನಿರ್ಧರಿಸಿದ್ದೆವು. ಅವರು ಕಣ್ಣೂರಿನ ಇನ್ನೊಂದು ದೇಗುಲಕ್ಕೂ ಭೇಟಿ ನೀಡಲಿದ್ದು, ಅಲ್ಲಿ ಕೂಡ ಕಪ್ಪು ಬಾವುಟ ಪ್ರದರ್ಶಿಸಲಿದ್ದೇವೆ’ ಎಂದರು.