ಗ್ವಾಲಿಯರ್‌(ಸೆ.05): ಜಾರ್ಖಂಡ್‌ನ ಈ ಗುಡ್ಡಗಾಡು ಯುವಕ ಓದಿದ್ದು 8ನೇ ಕ್ಲಾಸು. ಮಾಡುತ್ತಿದ್ದುದು ಅಡುಗೆ ಕೆಲಸ. ಕೊರೋನಾ ಲಾಕ್‌ಡೌನ್‌ನಿಂದಾಗಿ ಆ ಕೆಲಸವೂ ಹೋಗಿದೆ. ಕಳೆದ ಡಿಸೆಂಬರ್‌ನಲ್ಲಷ್ಟೇ ಮದುವೆಯಾಗಿತ್ತು. ಪತ್ನಿಯೀಗ ಗರ್ಭಿಣಿ. ಆಕೆಗೆ ಶಿಕ್ಷಕಿಯಾಗುವ ಕನಸು. ಗಂಡನಿಗೂ ಆಕೆಯನ್ನು ಶಿಕ್ಷಕಿಯನ್ನಾಗಿ ನೋಡುವ ಆಸೆ. ದಂಪತಿಯ ಈ ಕನಸು ಇವರನ್ನೀಗ 1200 ಕಿ.ಮೀ. ಸ್ಕೂಟರ್‌ ಸವಾರಿ ಮಾಡಿಸಿ ಮಧ್ಯಪ್ರದೇಶದ ಗ್ವಾಲಿಯರ್‌ಗೆ ತಂದು ನಿಲ್ಲಿಸಿದೆ!

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಹಳ್ಳಿಯೊಂದರ 27 ವರ್ಷದ ಯುವಕ ಧನಂಜಯ ಕುಮಾರ್‌ ತನ್ನ 22 ವರ್ಷದ ಗರ್ಭಿಣಿ ಪತ್ನಿ ಸೋನಿ ಹೆಂಬ್ರಮ್‌ಳನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ನಾಲ್ಕು ರಾಜ್ಯ ದಾಟಿ ಮಧ್ಯಪ್ರದೇಶಕ್ಕೆ ಆಗಮಿಸಿದ್ದಾನೆ. ಇಲ್ಲಿ ಸೋನಿ ಡಿಇಡಿ ಪರೀಕ್ಷೆ ಬರೆಯಲಿದ್ದು, ಅದರಲ್ಲಿ ಪಾಸಾದರೆ ಶಿಕ್ಷಕಿಯಾಗಲಿದ್ದಾಳೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಬಸ್‌ ಹಾಗೂ ರೈಲ್ವೆ ಸಂಚಾರಗಳು ರದ್ದಾಗಿವೆ. ಈ ನಡುವೆಯೇ ಮಧ್ಯಪ್ರದೇಶದಲ್ಲಿ ಡಿಇಡಿ ಪರೀಕ್ಷೆ ನಿಗದಿಯಾಗಿದೆ. ಜಾರ್ಖಂಡ್‌ನಿಂದ ಅಲ್ಲಿಗೆ ಬರುವುದು ಹೇಗೆಂದು ಚಿಂತೆಗೆ ಬಿದ್ದ ಧನಂಜಯ್‌, ಟ್ಯಾಕ್ಸಿಗೆ ಬೇಕಾದ 30,000 ರು. ಹೊಂದಿಸಲಾಗದೆ, ತನ್ನಲ್ಲಿದ್ದ ಅಷ್ಟಿಷ್ಟುಚಿನ್ನ ಅಡವಿಟ್ಟು 10,000 ರು. ಹೊಂದಿಸಿ ಸ್ಕೂಟರ್‌ನಲ್ಲೇ ಪತ್ನಿಯನ್ನು ಕರೆತಂದಿದ್ದಾನೆ. ಸುರಿಯುವ ಮಳೆ ಹಾಗೂ ಹೊಂಡದ ರಸ್ತೆಗಳಲ್ಲಿ ಈ ದಂಪತಿ ನಡೆಸಿದ ಸಾಹಸದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ಜಾರ್ಖಂಡ್‌ನಿಂದ ಹೊರಟು ಬಿಹಾರ ಮತ್ತು ಉತ್ತರ ಪ್ರದೇಶವನ್ನು ದಾಟಿ ಇವರು ಮಧ್ಯಪ್ರದೇಶಕ್ಕೆ ಆಗಮಿಸಿದ್ದಾರೆ. ಒಟ್ಟು ನಾಲ್ಕು ರಾಜ್ಯಗಳಲ್ಲಿ ಇವರ ಸ್ಕೂಟರ್‌ ಸಂಚರಿಸಿದೆ. ದಾರಿಮಧ್ಯೆ ಸೋನಿಗೆ ಜ್ವರ ಬಂದಿತ್ತು. ನಂತರ ಚೇತರಿಸಿಕೊಂಡಿದ್ದಾಳೆ. ಆ.28ಕ್ಕೆ ಹೊರಟು ಆ.30ರಂದು ಇವರು ಗ್ವಾಲಿಯರ್‌ಗೆ ಆಗಮಿಸಿದ್ದು, ಬಾಡಿಗೆ ರೂಂ ಪಡೆದು ವಾಸ್ತವ್ಯ ಹೂಡಿದ್ದಾರೆ. ಸೆ.11ರವರೆಗೂ ಸೋನಿಗೆ ಪರೀಕ್ಷೆಗಳಿವೆ.

ಇವರ ಸಾಹಸಗಾಥೆ ಗ್ವಾಲಿಯರ್‌ ಜಿಲ್ಲಾಧಿಕಾರಿಯ ಕಿವಿಗೆ ಬಿದ್ದಿದ್ದರಿಂದ ಅವರು ತಕ್ಷಣ ದಂಪತಿಗೆ 5000 ರು. ನೀಡಿ, ಉಳಿದುಕೊಳ್ಳಲು, ವೈದ್ಯಕೀಯ ತಪಾಸಣೆ, ಊಟ-ತಿಂಡಿ ಹಾಗೂ ಪರೀಕ್ಷೆ ಬರೆಯಲು ನೆರವು ಒದಗಿಸಿದ್ದಾರೆ. ದಂಪತಿಯನ್ನು ಸುರಕ್ಷಿತವಾಗಿ ಜಾರ್ಖಂಡ್‌ಗೆ ಕಳುಹಿಸಿಕೊಡುವುದಕ್ಕೂ ಅವರು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.