ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಯಲ್ಲಿ 12 ವರ್ಷದ ಬಾಲಕ ಶಾಲಾ ಬಸ್‌ನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದಾನೆ. ಬಾಲಕ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ, ಹೃದಯಾಘಾತ ಸಂಭವಿಸಿದ ಅತಿ ಕಿರಿಯ ವಯಸ್ಸಿನ ಬಾಲಕ ಎನ್ನಲಾಗಿದೆ.

ಭಿಂಡ್‌(ಮಧ್ಯಪ್ರದೇಶ): ಇಲ್ಲಿನ ಶಾಲಾ ಬಸ್‌ವೊಂದರಲ್ಲಿ 12 ವರ್ಷದ ಬಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಗುರುವಾರ ನಡೆದಿದೆ. ಮನೀಶ್‌ ಜಾತವ್‌ ಎಂಬ ಬಾಲಕ ಮಧ್ಯಾಹ್ನದ ವೇಳೆ ಆಹಾರ ಸೇವಿಸಿ ಎಂದಿನಂತೆ ಶಾಲೆ ಬಸ್‌ನಲ್ಲಿ ಮನೆಗೆ ತೆರಳುವ ವೇಳೆ ಬಸ್‌ನಲ್ಲಿ ಕುಸಿದು ಬಿದ್ದಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆತರುವ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮನೀಶ್‌ ಮಧ್ಯಪ್ರದೇಶದಲ್ಲಿ ಹೃದಯಾಘಾತಕ್ಕೆ ಬಲಿಯಾದ ಅತಿ ಕಿರಿಯ ವಯಸ್ಸಿನ ಬಾಲಕ. ಮೃತ ಬಾಲಕನಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಆತನ ಪಾಲಕರು ತಿಳಿಸಿದ್ದಾರೆ. ಕೋವಿಡ್‌-19 ಬಳಿಕ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಇದೇ ಹಿನ್ನೆಲೆಯಲ್ಲಿ 12ರ ಬಾಲಕ ಮನೀಶ್‌ ಬಲಿಯಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆತನಿಗೆ ಚಿಕಿತ್ಸೆ ನೀಡಿರುವ ವೈದ್ಯರೂ ಕೂಡ, ಬಹುಶಃ ಈತ ಹೃದಯಾಘಾತಕ್ಕೆ ಒಳಗಾಗಿರುವ ದೇಶದ ಅತ್ಯಂತ ಕಿರಿಯ ವಯಸ್ಸಿನ ಯುವಕ ಇರಬಹುದು ಎಂದು ಹೇಳಿದ್ದಾರೆ.

4ನೇ ತರಗತಿಯಲ್ಲಿ ಓದುತ್ತಿದ್ದ ಮನೀಶ್‌ ಜಾತವ್‌ ಶಾಲೆಯಲ್ಲಿ ತನ್ನ ಸಹೋದರನೊಂದಿಗೆ ಊಟ ಮಾಡಿದ್ದರು. ಅದಾದ ಬಳಿಕ ಮನೆಗೆ ಬರುವ ಸಲುವಾಗಿ ಶಾಲೆಯ ಬಸ್‌ ಏರಿದ್ದರು. ಈ ವೇಳೆ ಆತನಿಗೆ ಹೃದಯಾಘಾತವಾಗಿದ್ದರಿಂದ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲರ್ಟ್‌ ಆದ ಬಸ್‌ನ ಚಾಲಕ, ಅಧಿಕಾರಿಗಳಿಗೆ ಮಾಹಿತಿ ನೀಡಿದ ಮನೀಶ್‌ನಲ್ಲಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ವೈದ್ಯರು ಬದುಕಿಸುವ ಪ್ರಯತ್ನ ಮಾಡಿದರೂ, ಸಫಲವಾಗಲಿಲ್ಲ.

ಗುರುವಾರ ಮಧ್ಯಾಹ್ನದ ವೇಳೆಗೆ ಮನೀಶ್‌ ತೀರಿಹೋಗಿರುವ ವಿಚಾರವನ್ನು ವೈದ್ಯರು ಖಚಿತಪಡಿಸಿದ್ದರು. ಆತನಿಗೆ ನಾವು ಸಿಪಿಆರ್‌ ಚಿಕಿತ್ಸೆಯನ್ನು ನೀಡಿದರಾದರೂ, ಬದುಕಿಸಲು ಸಾಧ್ಯವಾಗಲಲ್ಲ. ಬಹುಶಃ ಕಾರ್ಡಿಯಾಕ್‌ ಅರೆಸ್ಟ್‌ನಿಂದ ಸಾವು ಸಂಭವಿಸಿರುವ ಸಾಧ್ಯತೆ ಅಧಿಕವಾಗಿದೆ ಎಂದು ಜಿಲ್ಲಾ ಅಸ್ಪತ್ರೆಯ ಸರ್ಜನ್‌ ಡಾ. ಅನಿಲ್‌ ಗೋಯಲ್‌ ತಿಳಿಸಿದ್ದಾರೆ. "ಅಧ್ಯಯನದ ಪ್ರಕಾರ ಕೋವಿಡ್ -19 ರ ನಂತರ ಇಂತಹ ಘಟನೆಗಳು ಹೆಚ್ಚಿವೆ. ಮಧ್ಯಪ್ರದೇಶ ರಾಜ್ಯದಲ್ಲಿ ಹೃದಯಾಘಾತದಿಂದಾಗಿ ಇಷ್ಟು ಚಿಕ್ಕ ವಯಸ್ಸಿನ ಹುಡುಗ ಸಾವು ಕಂಡಿರುವುದು ಇದೇ ಮೊದಲ ಬಾರಿ ಎಂದು ಅವರು ಹೇಳಿದ್ದಾರೆ.

ಯುವಕರಲ್ಲಿ ಹೆಚ್ಚುತ್ತಿದೆ ದಿಢೀರ್‌ ಹೃದಯಾಘಾತ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದಿಢೀರ್‌ ಹೃದಯಾಘಾತ ವಿಪರೀತವಾಗಿ ಹೆಚ್ಚಾಗುತ್ತಿದೆ. ಯಾವುದೇ ಸೂಚನೆಯೂ ಇಲ್ಲದೆ ಹೃದಯಾಘಾತವಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಯುವಕರಲ್ಲಿ ಹಠಾತ್ ಕಾರ್ಡಿಯಾಕ್ ಅರೆಸ್ಟ್ ಅಥವಾ ಎಸ್‌ಸಿಎ ಘಟನೆಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಹೆಚ್ಚಾಗಿ ಜಡ ಜೀವನಶೈಲಿ, ಮಧುಮೇಹ, ಹೆಚ್ಚುತ್ತಿರುವ ಮದ್ಯ ಸೇವನೆ, ಧೂಮಪಾನ ಮತ್ತು ಅಧಿಕ ರಕ್ತದೊತ್ತಡ ಇವುಗಳಿಗೆ ಕಾರಣವಾಗಿದೆ ಎಂದಿದ್ದಾರೆ. ಕೆಲವು ರೋಗಿಗಳು ಈ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ, ಹೃದಯಾಘಾತವಾಗಿರುವ ಘಟನೆ ನಡೆದಿದೆ.

ಸಾಕು ನಾಯಿ ಜೊತೆ ಜಾಗಿಂಗ್ ವೇಳೆ ಥಾಯ್ಲೆಂಡ್ ರಾಣಿಗೆ ತೀವ್ರ ಹೃದಯಾಘಾತ, ಫಲಿಸಲಿಲ್ಲ ಪ್ರಾರ್ಥನೆ!

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ನಡೆಸಿದ ಇತ್ತೀಚಿನ ಸಂಶೋಧನೆಯ ಪ್ರಕಾರ, SCA ಯಲ್ಲಿನ 13 ಪ್ರತಿಶತದಷ್ಟು ಪ್ರಕರಣಗಳು ಮಧ್ಯ-20 ರಿಂದ 40 ರ ನಡುವಿನ ವಯಸ್ಸಿನವರಲ್ಲಿವೆ. ಇದಲ್ಲದೆ, ಇಂಡಿಯನ್ ಹಾರ್ಟ್ ಅಸೋಸಿಯೇಷನ್‌ನ ಪ್ರಕಾರ, ಭಾರತದಲ್ಲಿ ಯುವಕರಲ್ಲಿಯೇ ಹೆಚ್ಚಿನ ಹೃದಯಾಘಾತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಯಾವ ಮುನ್ಸೂಚನೆಯೂ ಇಲ್ಲದೆ ಹೃದಯಾಘಾತವಾಗುತ್ತಿದೆ ಎಂದು ಹೇಳಿದೆ.

6 ಪತ್ನಿ 54 ಮಕ್ಕಳ ತಂದೆ ಅಬ್ದುಲ್ಲಾಗೆ ಹೃದಯಾಘಾತ, ಗಂಡುಗಲಿಗೆ 150 ಕುಟುಂಬ ಸದಸ್ಯರ ಸಂತಾಪ!

ಮಾಯೊ ಕ್ಲಿನಿಕ್ ಹೇಳುವಂತೆ SCA ಹೆಚ್ಚಾಗಿ ಅನಿಯಮಿತ ಹೃದಯ ಬಡಿತಗಳಿಂದ ಉಂಟಾಗುತ್ತದೆ, ಅದು ದೇಹದಲ್ಲಿನ ಅಸಮರ್ಪಕ ಕ್ರಿಯೆಯಿಂದ ಪ್ರಚೋದಿಸಲ್ಪಡುತ್ತದೆ, ಹೃದಯವು ದೇಹಕ್ಕೆ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ ಆಗ ಕಾರ್ಡಿಯಾಕ್‌ ಅರೆಸ್ಟ್‌ ಸಂಭವಿಸುತ್ತದೆ ಎಂದಿದೆ.