ಮುಂಬೈ(ಆ.11): ಕರ್ನಾಟಕ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಬಳಿಕ ಮಹಾರಾಷ್ಟ್ರ ರಾಜಕೀಯದಲ್ಲೂ ಬೃಹನ್ನಾಟಕ ಸಂಭವಿಸುವ ಸಾಧ್ಯತೆ ಇದೆ. ಆಡಳಿತಾರೂಢ ಮಿತ್ರಕೂಟದ ಎನ್‌ಸಿಪಿಯ 12 ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ. ಅವರು ಆಗಸ್ಟ್‌ ಅಂತ್ಯದ ವೇಳೆಗೆ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಈ ಶಾಸಕರು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಗುಂಪಿನವರು ಎನ್ನಲಾಗಿದೆ. ಇದೇ ಶಾಸಕರು ಕಳೆದ ವರ್ಷ ಅಜಿತ್‌ ಪವಾರ್‌ ಅವರು ಕೆಲವು ದಿನ ದೇವೇಂದ್ರ ಫಡ್ನವೀಸ್‌ ಅವರ ಜತೆ ಸೇರಿ ಸರ್ಕಾರ ರಚಿಸಿದಾಗ ಅಜಿತ್‌ ಬೆನ್ನಿಗೆ ನಿಂತಿದ್ದರು ಎಂದು ಮೂಲಗಳು ಹೇಳಿವೆ.

ಶೈಕ್ಷಣಿಕ ಸಮಾವೇಶದಲ್ಲಿಂದು ಪ್ರಧಾನಿ ಮೋದಿ ಭಾಷಣ

ಈ ಶಾಸಕರು ಉದ್ಧವ್‌ ಠಾಕ್ರೆ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಜೆಪಿಯವರೇ ಎನ್‌ಸಿಪಿ ಸೇರಲಿದ್ದಾರೆ!:

ಆದರೆ ಇದು ಕೇವಲ ವದಂತಿ ಎಂದು ಎನ್‌ಸಿಪಿ ಮುಖಂಡ ಹಾಗೂ ಸಚಿವ ನವಾಬ್‌ ಮಲಿಕ್‌ ಸ್ಪಷ್ಟಪಡಿಸಿದ್ದಾರೆ. ‘12 ಎನ್‌ಸಿಪಿ ಶಾಸಕರು ಬಿಜೆಪಿ ಸೇರುವರು ಎಂಬುದು ಸುಳ್ಳು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎನ್‌ಸಿಪಿ ಬಿಟ್ಟು ಬಿಜೆಪಿ ಸೇರಿದ ಶಾಸಕರು ಅಸಂತುಷ್ಟರಾಗಿದ್ದು, ಅವರು ಶೀಘ್ರವೇ ಎನ್‌ಸಿಪಿಗೆ ಮರಳಲಿದ್ದಾರೆ’ ಎಂದು ‘ಬಾಂಬ್‌’ ಸಿಡಿಸಿದ್ದಾರೆ.

ಕಳೆದ ತಿಂಗಳಷ್ಟೇ, ಉದ್ಧವ್‌ ಠಾಕ್ರೆ ಅವರು, ‘ದಮ್ಮಿದ್ದರೆ ನಮ್ಮ ಸರ್ಕಾರ ಬೀಳಿಸಿ’ ಎಂದು ಬಿಜೆಪಿಗೆ ಸವಾಲು ಹಾಕಿದ್ದರು.