Gujarat ಸೇತುವೆ ಕುಸಿತ: ರಾಜ್‌ಕೋಟ್ ಬಿಜೆಪಿ ಸಂಸದನ ಕುಟುಂಬದ 12 ಜನ ದುರ್ಮರಣ..!
ನಾನು ನನ್ನ ಕುಟುಂಬದ 12 ಜನರನ್ನು ಕಳೆದುಕೊಂಡಿದ್ದೇನೆ. ಈ ಪೈಕಿ ಐವರು ಮಕ್ಕಳು ಸಹ ಮೃತಪಟ್ಟಿದ್ದಾರೆ. ನನ್ನ ಸಹೋದರಿಯ ಕುಟುಂಬದ ಕುಟುಂಬ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ ಎಂದು ಬಿಜೆಪಿಯ ರಾಜ್‌ಕೋಟ್ ಂಸದ ಹೇಳಿದ್ದಾರೆ.
ಗುಜರಾತ್‌ನ (Gujarat) ಮೊರ್ಬಿ (Morbi) ತೂಗು ಸೇತುವೆ ಕುಸಿತ ಪ್ರಕರಣದಲ್ಲಿ (Bridge Collapse) ಕನಿಷ್ಠ 132 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ. ಈ ಪ್ರಕರಣದಲ್ಲಿ ಹಲವು ಮಕ್ಕಳು (Children), ಮಹಿಳೆಯರು (Women) ಹಾಗೂ ವೃದ್ಧರು ಸೇರಿ ನೂರಾರು ಜನ ಬಲಿಯಾಗಿದ್ದಾರೆ. ಹಲವರು ತಮ್ಮ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ರಾಜ್‌ಕೋಟ್‌ನ (Rajkot) ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ (Mohanbhai Kalyanji Kundariya) ಕುಟುಂಬದ 12 ಜನರು ಸಹ ಭಾನುವಾರ ಸಂಜೆ ನಡೆದ ಮೊರ್ಬಿ ಸೇತುವೆ ಕುಸಿತ ಪ್ರಕರಣದಲ್ಲಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ, ‘’ನಾನು ನನ್ನ ಕುಟುಂಬದ 12 ಜನರನ್ನು ಕಳೆದುಕೊಂಡಿದ್ದೇನೆ. ಈ ಪೈಕಿ ಐವರು ಮಕ್ಕಳು ಸಹ ಮೃತಪಟ್ಟಿದ್ದಾರೆ. ನನ್ನ ಸಹೋದರಿಯ ಕುಟುಂಬದ ಕುಟುಂಬ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: Gujarat ತೂಗು ಸೇತುವೆ ಕುಸಿತ: 132 ಜನರ ಬಲಿ; ಮುಂದುವರಿದ ರಕ್ಷಣಾ ಕಾರ್ಯ
ಒಟ್ಟಾರೆ, ಘಟನೆ ಬಗ್ಗೆ ಮಾತನಾಡಿದ ಸಂಸದರು, ಎನ್‌ಡಿಆರ್‌ಎಫ್(NDRF), ಎಸ್‌ಡಿಆರ್‌ಎಫ್ (SDRF) ಮತ್ತು ಸ್ಥಳೀಯ ಆಡಳಿತ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಸುತ್ತಿದೆ. ಈ ಅವಘಡದಲ್ಲಿ ಬದುಕುಳಿದವರನ್ನು ರಕ್ಷಿಸಲಾಗಿದ್ದು, ಮಚ್ಚು ನದಿಗೆ ಬಿದ್ದಿರುವ ಮೃತದೇಹಗಳನ್ನು ಹೊರಕ್ಕೆ ತೆಗೆಯುವ ಯತ್ನ ನಡೆಸಲಾಗುತ್ತಿದೆ. ಹಾಗೂ ರಕ್ಷಣಾ ಬೋಟ್‌ಗಳು ಸಹ ಸ್ಥಳದಲ್ಲಿವೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತವಾಗಿ ಮಚ್ಚು ನದಿಗೆ ಬಿದ್ದು ಹೆಚ್ಚು ಮಹಿಳೆ ಹಾಗೂ ಮಕ್ಕಳು ಸೇರಿ 132 ಜನರು ಬಲಿಯಾಗಿದ್ದಾರೆ. ಎನ್‌ಡಿಆರ್‌ಎಫ್, ಸೇನೆ, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಆಡಳಿತದ ಐದು ತಂಡಗಳು ಯುದ್ಧೋಪಾದಿಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ ಎಂದೂ ಅವರು ಹೇಳಿದರು.
ಸೇತುವೆ ತೆರೆಯಲು ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಸಂಸದರು, "ಈ ದುರಂತ ಹೇಗೆ ಸಂಭವಿಸಿತು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು. ಸತ್ತವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಸ್ಥಳೀಯರು ಮತ್ತು ಎನ್‌ಜಿಒಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: Gujaratನಲ್ಲಿ ಕುಸಿದ ತೂಗು ಸೇತುವೆ: 60ಕ್ಕೂ ಹೆಚ್ಚು ಮೃತದೇಹಗಳು ಹೊರಕ್ಕೆ; ಇನ್ನೂ ಹಲವರು ಅಪಾಯದಲ್ಲಿ ಸಿಲುಕಿರುವ ಶಂಕೆ..!
ಘಟನೆಯ ತನಿಖೆಗೆ ಸಮಿತಿ ರಚನೆ
ಗುಜರಾತ್ ರಾಜ್ಯ ರಾಜಧಾನಿಯಿಂದ ಸುಮಾರು 300 ಕಿಮೀ ದೂರದಲ್ಲಿರುವ ಮೊರ್ಬಿಯಲ್ಲಿ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಂಘವಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಸೇತುವೆ ಕುಸಿತದ ತನಿಖೆಗಾಗಿ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು.
ಘಟನೆಯ ತನಿಖೆಗಾಗಿ ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಸೇತುವೆ ಕುಸಿತ ಘಟನೆಗೆ ಯಾರು ಜವಾಬ್ದಾರರೋ ಅವರ ವಿರುದ್ಧ ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ), 308 (ಸಾವಿಗೆ ಕಾರಣವಾಗುವ ಉದ್ದೇಶಪೂರ್ವಕ ಕೃತ್ಯ) ಮತ್ತು 114 (ಅಪರಾಧ ನಡೆದಾಗ ಕುಮ್ಮಕ್ಕು ನೀಡುವವರು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದೂ ಗೃಹ ಸಚಿವ ಹರ್ಷ್ ಸಂಘವಿ ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹರ್ಷ್ ಸಂಘವಿ, ‘ಘಟನೆಯಲ್ಲಿ ಇಲ್ಲಿಯವರೆಗೆ 132 ಜನರು ಮೃತಪಟ್ಟಿದ್ದಾರೆ. ಭಾನುವಾರ ಸಂಜೆ 6.30 ರ ಸುಮಾರಿಗೆ ಸೇತುವೆ ಕುಸಿದಿದೆ. ದೀಪಾವಳಿ ರಜೆ ಮತ್ತು ಭಾನುವಾರದ ಕಾರಣ ಪ್ರವಾಸಿಗರ ನೂಕುನುಗ್ಗಲು ಇತ್ತು. ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಸೇತುವೆ, ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಮತ್ತು ಪ್ರಧಾನಿ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೃತರಿಗೆ ಮತ್ತು ಗಾಯಗೊಂಡವರಿಗೆ ತಕ್ಷಣದ ಪರಿಹಾರ ಘೋಷಿಸಿದ್ದಾರೆ.