ಕಂದಕಕ್ಕೆ ಉರುಳಿದ ಬಸ್ 9 ಶಾಲಾ ಮಕ್ಕಳು ಸೇರಿ 16 ಸಾವು!
* ಕುಲ್ಲೂ ಜಿಲ್ಲೆಯ ಸೈಂಜ್ ಕಣಿವೆಯಲ್ಲಿ ಭೀಕರ ಬಸ್ ಅಪಘಾತ
* ಕಂದಕಕ್ಕೆ ಉರುಳಿದ ಬಸ್, ಮಕ್ಕಳು ಸೇರಿ ಹಲವರು ಸಾವು
* ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ
ಕುಲ್ಲೂ(ಜು.04): ಕುಲ್ಲೂ ಜಿಲ್ಲೆಯ ಸೈಂಜ್ ಕಣಿವೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಶಂಶಾರ್‌ನಿಂದ ಸೈಂಜ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಜಂಗ್ಲಾ ಗ್ರಾಮದ ಬಳಿ ರಸ್ತೆಯ ಬದಿ ಕಂದಕಕ್ಕೆ ಉರುಳಿದೆ. ಬೆಳಗ್ಗೆ 8.30ಕ್ಕೆ ಸಂಭವಿಸಿದ ಅಪಘಾತದಲ್ಲಿ 6 ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದೂ ವರದಿಗಳು ಉಲ್ಲೇಖಿಸಿವೆ. ಘಟನಾ ಸ್ಥಳದ ದೃಶ್ಯಗಳಲ್ಲಿ ಬಸ್ ಸಂಪೂರ್ಣ ಹಾನಿಗೊಳಗಾಗಿರುವುದನ್ನು ನೊಡಬಹುದಾಗಿದೆ. ಅಧಿಕಾರಿಗಳ ಪ್ರಕಾರ, ಬಸ್‌ನಲ್ಲಿ ಕನಿಷ್ಠ 40 ವಿದ್ಯಾರ್ಥಿಗಳು ಇದ್ದರು. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಯುತ್ತಿದೆ.
ಮಾಧ್ಯಮಗಳ ವರದಿಯನ್ವಯ, ಹಿಮಾಚಲ ಪ್ರದೇಶದ ಕುಲ್ಲೂ ಜಿಲ್ಲೆಯಲ್ಲಿ ಖಾಸಗಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಕೆಲವು ಶಾಲಾ ಮಕ್ಕಳು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 8.30ರ ಸುಮಾರಿಗೆ ಸೈಂಜ್‌ಗೆ ತೆರಳುತ್ತಿದ್ದ ಬಸ್ ಜಂಗ್ಲಾ ಗ್ರಾಮದ ಬಳಿ ಕಂದಕಕ್ಕೆ ಬಿದ್ದಿದೆ ಎಂದು ಕುಲ್ಲೂ ಉಪ ಆಯುಕ್ತ ಅಶುತೋಷ್ ಗರ್ಗ್ ತಿಳಿಸಿದ್ದಾರೆ. ಜಿಲ್ಲಾ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಿ ಕಾರ್ಯಾಲಯದ ಟ್ವೀಟ್‌ನಲ್ಲಿ ಪ್ರಧಾನಿ ಮೋದಿ, “ಹಿಮಾಚಲ ಪ್ರದೇಶದ ಕುಲ್ಲೂವಿನಲ್ಲಿ ಸಂಭವಿಸಿದ ಬಸ್ ಅಪಘಾತ ಹೃದಯವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ ದುಃಖತಪ್ತ ಕುಟುಂಬಗಳೊಂದಿಗೆ ನನ್ನ ಸಂತಾಪವಿದೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಿಂದ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ.2 ಲಕ್ಷ ಪರಿಹಾರವನ್ನು ಪ್ರಧಾನಿ ಮೋದಿ ಅನುಮೋದಿಸಿದ್ದಾರೆ. ಗಾಯಗೊಂಡ ಪ್ರತಿಯೊಬ್ಬರಿಗೂ 50 ಸಾವಿರ ರೂ. ಘೋಚಿಸಿದ್ದಾರೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಟ್ವೀಟ್ ಮಾಡಿ, “ಕುಲ್ಲೂವಿನ ಸೈಂಜ್ ಕಣಿವೆಯಲ್ಲಿ ಖಾಸಗಿ ಬಸ್ ಅಪಘಾತ ನಡೆದಿರುವುದು ದುಃಖದ ಸುದ್ದಿ. ಇಡೀ ಆಡಳಿತ ಸ್ಥಳದಲ್ಲೇ ಇದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಈ ಘಟನೆಯಲ್ಲಿ ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಮತ್ತು ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡಲಿ. ಕನಿಷ್ಠ ಪ್ರಾಣಹಾನಿ ಕಡಿಮೆಯಾಘಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಹಿಮಾಚಲ ಪ್ರದೇಶದ ಕುಲ್ಲೂವಿನಲ್ಲಿ ನಡೆದ ಅಪಘಾತಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿರ್ಲಾ ಅವರು ಟ್ವೀಟ್ ಮಾಡಿ ಘಟನೆಯನ್ನು ಹೃದಯ ವಿದ್ರಾವಕ ಎಂದು ವಿವರಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.