ನವದೆಹಲಿ(ಏ.03): ದೇಶಾದ್ಯಂತ ಕೊರೋನಾ ಸೋಂಕು ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ವ್ಯಾಪಿಸುತ್ತಿರುವಾಗಲೇ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಬಿಕ್ಕಟ್ಟು ತೀವ್ರ ಗಂಭೀರ ಸ್ಥಿತಿ ತಲುಪಿದೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅತೀವ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಂಕು ನಿಯಂತ್ರಣಕ್ಕಾಗಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಶುಕ್ರವಾರ ಸಭೆ ನಡೆಸಿದ ಅವರು, ಮಾ.30ರವರೆಗಿನ 14 ದಿನಗಳ ಅವಧಿಯಲ್ಲಿ ಈ 11 ರಾಜ್ಯಗಳಲ್ಲೇ ಶೇ.90ರಷ್ಟುಹೊಸ ಸೋಂಕು ಹಾಗೂ ಶೇ.90.05ರಷ್ಟುಸಾವಿನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ರಾಜ್ಯಗಳು ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕನ್ನು ನಿಗ್ರಹಿಸಬೇಕು ಎಂದು ಸೂಚನೆ ನೀಡಿದರು. ಸೋಂಕು ಹೆಚ್ಚಳ ವೇಗಕ್ಕೆ ಅನುಗುಣವಾಗಿ ರಾಜ್ಯಗಳು ನಿಗ್ರಹ ಕ್ರಮಗಳನ್ನು ಜರುಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2021ರ ಮಾಚ್‌ರ್‍ನಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ ಶೇ.6.8ರಷ್ಟಿದೆ. ಆದರೆ ಕಳೆದ ವರ್ಷದ ಜೂನ್‌ ಅವಧಿಯಲ್ಲಿ ಈ ಪ್ರಮಾಣವು ಕೇವಲ 5.5ರಷ್ಟಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಗಳು ಸೋಂಕಿತರ ನಿಯಂತ್ರಣಕ್ಕಾಗಿ ಕೇವಲ ಆರೋಗ್ಯ ಇಲಾಖೆ ಮೇಲೆ ಅವಲಂಬಿತವಾಗದೆಯೇ ಎಲ್ಲಾ ಇಲಾಖೆಗಳ ಸಂಪನ್ಮೂಲ ಮತ್ತು ನೆರವಿನ ಮೂಲಕ ಕೊರೋನಾ ವಿರುದ್ಧ ಯುದ್ಧೋಪಾದಿಯಲ್ಲಿ ಹೋರಾಟ ಮಾಡಬೇಕು. ಅಲ್ಲದೆ ರಾಜ್ಯಗಳ ಕೊರೋನಾ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಎಲ್ಲಾ ಸಂಪನ್ಮೂಲದ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. ಆದರೆ ರಾಜ್ಯಗಳು ಈಗಲೂ ವೈರಸ್‌ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟುಭೀಕರವಾಗಿರಲಿದೆ ಎಂದು ಗೌಬಾ ಅವರು ರಾಜ್ಯಗಳಿಗೆ ಎಚ್ಚರಿಕೆ ನೀಡಿದರು.