ಭೋಪಾಲ್‌/ಮೊರೆನಾ(ಜ.13): ಕಳ್ಳಭಟ್ಟಿ ರೀತಿಯ ಮದ್ಯ ಸೇವಿಸಿ 12 ಮಂದಿ ಸಾವಿಗೀಡಾದ ಮತ್ತು 7ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ದುರಂತ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಉಜ್ಜೈನಿಯಲ್ಲಿ ಸಾವಿಗೀಡಾದ 16 ಮಂದಿ ಸೇರಿದಂತೆ 3 ತಿಂಗಳ ಅವಧಿಯಲ್ಲಿ ಶಂಕಿತ ಕಳ್ಳಭಟ್ಟಿ ಸೇವಿಸಿ ಸಾವಿಗೀಡಾದ 2ನೇ ಘಟನೆ ಇದಾಗಿದೆ.

ಸಾವಿಗೀಡಾದವರ ಮರಣೋತ್ತರ ಪರೀಕ್ಷೆ ವರದಿ ಕೈಸೇರಿದ ಬಳಿಕವಷ್ಟೇ ಗ್ರಾಮಸ್ಥರು ಸೇವಿಸಿದ ಮದ್ಯ ವಿಷಯುಕ್ತವಾಗಿತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರ ಅಸ್ವಸ್ಥರಾಗಿರುವವರಿಗೆ ಗ್ವಾಲಿಯರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಗೃಹ ಸಚಿವ ನರೋತ್ತಮ ಮಿಶ್ರಾ ಅವರು, ‘ಓರ್ವ ಪೊಲೀಸ್‌ ಅಧಿಕಾರಿ ಹಾಗೂ ಯನ್ನು ಅಮಾನತು ಮಾಡಿದ್ದಾರೆ. ಈ ಘಟನೆಯಿಂದ ಅತೀವ ದುಃಖವಾಗಿದೆ. ಪ್ರಕರಣದ ತನಿಖೆಗಾಗಿ ಪ್ರತ್ಯೇಕ ತಂಡ ರವಾನಿಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

ಮತ್ತೊಂದೆಡೆ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಮಾಜಿ ಸಿಎಂ ಕಮಲ್‌ನಾಥ್‌ ಅವರು ಕಿಡಿಕಾರಿದ್ದಾರೆ. ‘ಈ ಹಿಂದೆ ಉಜ್ಜೈನಿಯಲ್ಲಿ 16 ಜನರ ಹತ್ಯೆಗೈದಿದ್ದ ರಾಜ್ಯದ ಮದ್ಯ ಮಾಫಿಯಾ ಇದೀಗ 10 ಮಂದಿಯನ್ನು ಕೊಂದು ಹಾಕಿದೆ. ಮದ್ಯ ಮಾಫಿಯಾಕ್ಕೆ ಇನ್ನೆಷ್ಟು ಮಂದಿಯನ್ನು ಬಲಿಕೊಡಲು ನಿರ್ಧರಿಸಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.