ಸಾಂಧರ್ಭಿಕ ಚಿತ್ರ

ಪುಡುಕೊಟ್ಟೈ(ನ.13): ಅವರವರ ಭಾವಕ್ಕೆ ತಕ್ಕಂತೆ ಪ್ರೀತಿಯ ವಿಶ್ಲೇಷಣೆ ನಡೆಯುತ್ತದೆ. ಪ್ರೀತಿ ಎರಡು ಹೃದಯಗಳ ಪಿಸುಮಾತು. ಅದು ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಸಾವಿನ ಬಳಿಕವೂ ಈ ಪ್ರೀತಿ ಮುಮದುವರೆಯುತ್ತದೆ.

ಅಂತ್ಯದವರೆಗೂ ಒಂದಾಗಿ ಬಾಳಿ, ಸಾವಿನಲ್ಲೂ ಒಂದಾಗುವ ಜೋಡಿ ಅತೀ ವಿರಳ. ಅದರಂತೆ ತಮಿಳುನಾಡಿನ ಪುಡುಕೊಟ್ಟೈಯಲ್ಲಿ 104 ವರ್ಷದ ಪತಿ ಸಾವಿನ ಕೇವಲ 1 ಗಂಟೆಯಲ್ಲಿ 100 ವರ್ಷದ ಪತ್ನಿ ಅಸುನೀಗಿದ ಘಟನೆ ನಡೆದಿದೆ.

ಇಲ್ಲಿನ ವೆಟ್ರಿವೆಲ್ ಎಂಬ 104 ವರ್ಷದ ವ್ಯಕ್ತಿ ವಯೋಸಹಜ ಅನಾರೋಗ್ಯದಿಂದ ಅಸುನೀಗಿದ್ದು, ಪತಿಯ ಸಾವಿನ ಆಘಾತ ತಡೆಯಲಾರದೇ 100 ವರ್ಷದ ಪಿಚಾಯಿ ಕೂಡ ಹೃದಯಾಘಾತದಿಂದ ಅಸುನೀಗಿದ್ದಾರೆ.

ಕಳೆದ 75 ವರ್ಷದಿಂದ ಸಹಬಾಳ್ವೆಯ ಜೀವನ ನಡೆಸಿದ್ದ ವೆಟ್ರಿವೆಲ್ ಹಾಗೂ ಪಿಚಾಯಿ, ಪರಸ್ಪರರನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಎದೆನೋವು ಕಾರಣದಿಂದ ವೆಟ್ರಿವೆಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೆಟ್ರಿವೆಲ್ ಅಸುನೀಗಿದ್ದರು. ವೆಟ್ರಿವೆಲ್ ಅವರ ಪ್ರಾರ್ಥೀವ ಶರೀರ ಕಂಡೊಡನೆ ಆಘಾತಗೊಂಡ ಪಿಚಾಯಿ ಕೂಡ ಹೃದಯಾಘಾತದಿಂದ ಅಸುನೀಗಿದ್ದಾರೆ.