ಜೈಪುರ(ಏ.02): ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಜನರಿಗೆ ಕೊರೋನಾ ಸೋಂಕು ತಗುಲಿದ ಘಟನೆ ಇನ್ನೂ ದೇಶದಲ್ಲಿ ಜನರಲ್ಲಿ ಅರಿವು ಮೂಡಿಸಿದಂತೆ ಕಾಣಿಸುತ್ತಿಲ್ಲ. ಏಕೆಂದರೆ ಈ ಘಟನೆಯ ಬೆನ್ನಲ್ಲೇ, ರಾಜಸ್ಥಾನದ ಅಜ್ಮೇರ್‌ ಜಿಲ್ಲೆಯ ಸರವಾರ್‌ ಪಟ್ಟಣ ದರ್ಗಾವೊಂದರಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯೊಂದರಲ್ಲಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.

ಬಳಿಕ ಪೊಲೀಸರು ಬಂದು ಗುಂಪನ್ನು ಚದುರಿಸಿದ್ದು, ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಸಭೆ ಆಯೋಜಿಸಿದ ಕಾರಣಕ್ಕಾಗಿ ಆರು ಮಂದಿಯನ್ನು ಬಂಧಿಸಿದ್ದಾರೆ.

ತಬ್ಲೀಘಿ ಸದಸ್ಯರಿಗಾಗಿ ತೀವ್ರ ಶೋಧ, ವಿದೇಶಿಗರ ಗಡೀಪಾರು!

ಸಂಪ್ರದಾಯದಂತೆ ಪ್ರತಿವರ್ಷ ಸರವಾರ್‌ ದರ್ಗಾಕ್ಕೆ ಅಜ್ಮೇರ್‌ನ ಸೂಫಿ ಸಂತ ಮೊಹಿಮುದ್ದೀನ್‌ ಚಿಸ್ತಿ ದರ್ಗಾದ ಧಾರ್ಮಿಕ ಮುಖಂಡರು ಚಾದರ ಅರ್ಪಿಸುತ್ತಾರೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದರೂ ದರ್ಗಾದ ಧಾರ್ಮಿಕ ಸಭೆಯಲ್ಲಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.