Asianet Suvarna News Asianet Suvarna News

ಶಬರಿಮಲೆ ಯಾತ್ರೆ ಶುರು : 10 ಮಹಿಳೆಯರು ವಾಪಸ್‌

ಶಬರಿಮಲೆ ಅಯ್ಯಪ್ಪ ದೇವಾಲಯದ 2 ತಿಂಗಳ ವಾರ್ಷಿಕ ಯಾತ್ರೆಗೆ ಶನಿವಾರ ಸಂಜೆ 5 ಗಂಟೆಗೆ ಚಾಲನೆ ದೊರಕಿದೆ. ಮೊದಲ ದಿನವೇ ಸಾವಿರಾರು ಭಕ್ತರು ಶಬರಿಮಲೆಗೆ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. 

10 women from Andhra Pradesh sent back from Sabarimala
Author
Bengaluru, First Published Nov 17, 2019, 7:27 AM IST

ಶಬರಿಮಲೆ [ನ.17]:  10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕೇ, ಬೇಡವೇ ಎಂಬ ಗೊಂದಲದ ನಡುವೆಯೇ ಶಬರಿಮಲೆ ಅಯ್ಯಪ್ಪ ದೇವಾಲಯದ 2 ತಿಂಗಳ ವಾರ್ಷಿಕ ಯಾತ್ರೆಗೆ ಶನಿವಾರ ಸಂಜೆ 5 ಗಂಟೆಗೆ ಚಾಲನೆ ದೊರಕಿದೆ. ಮೊದಲ ದಿನವೇ ಸಾವಿರಾರು ಭಕ್ತರು ಶಬರಿಮಲೆಗೆ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಈ ನಡುವೆ ಶನಿವಾರ 10-50ರ ವಯೋಮಾನದ 10 ಮಹಿಳೆಯರ ತಂಡವೊಂದು ದೇವರ ದರ್ಶನಕ್ಕೆಂದು ಬಂದು ಕೊನೆಗೆ ಸ್ಥಳದಲ್ಲಿನ ಪರಿಸ್ಥಿತಿ ಅರಿತು, ದೇವರ ದರ್ಶನ ಮಾಡದೆಯೇ ಹಿಂದಕ್ಕೆ ಹೋಗಿದೆ.

‘ಆಂಧ್ರಪ್ರದೇಶದ ವಿಜಯವಾಡದಿಂದ ಈ ವಯೋಮಾನದ ಸುಮಾರು 10 ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ್ದರು. ಶಬರಿಮಲೆ ಕೆಳಗಿರುವ ಪಂಪಾದಲ್ಲಿ ಅವರ ಗುರುತಿನ ಚೀಟಿ ಪರಿಶೀಲಿಸಿದಾಗ ಅವರು 10ರಿಂದ 50 ವರ್ಷ ವಯಸ್ಸಿನ ನಡುವಿನವರು ಎಂಬುದು ದೃಢಪಟ್ಟಿತು. ಪಂಪಾದಲ್ಲೇ ಅವರನ್ನು ತಡೆದು ಶಬರಿಮಲೆಯಲ್ಲಿನ ಪರಿಸ್ಥಿತಿ ವಿವರಿಸಲಾಯಿತು. ಹೀಗಾಗಿ ಅವರು ಬೆಟ್ಟಏರದೇ ವಾಪಸು ಹೋದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಈ ನಡುವೆ, ‘ನವೆಂಬರ್‌ 20ರಂದು ಶಬರಿಮಲೆಗೆ ಬರುವೆ. ಸರ್ಕಾರ ರಕ್ಷಣೆ ನೀಡಲಿ, ಬಿಡಲಿ ನಾನಂತೂ ದೇವಾಲಯಕ್ಕೆ ಹೋಗುವೆ’ ಎಂದು ಮಹಾರಾಷ್ಟ್ರದ ಮಹಿಳಾವಾದಿ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.

ಸುಪ್ರೀಂ ತೀರ್ಪಿನ ಗೊಂದಲ:  ಶಬರಿಮಲೆಗೆ ಈ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡಬೇಕೇ ಬೇಡವೇ ಎಂಬ ಕುರಿತಾದ ಮರುಪರಿಶೀಲನಾ ಅರ್ಜಿಗಳ ತೀರ್ಪನ್ನು ಪ್ರಕಟಿಸದೇ, ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ವಹಿಸಿತ್ತು. ಆದರೆ 2018ರಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದ ತನ್ನದೇ ತೀರ್ಪಿಗೆ ಅದು ತಡೆ ನೀಡಿರಲಿಲ್ಲ. ಹೀಗಾಗಿ ಈ ಬಾರಿಯೂ ಮಹಿಳೆಯರಿಗೆ ಅವಕಾಶ ಸಿಗಲಿದೆ ಎಂದು ಭಾವಿಸಲಾಗಿತ್ತು.

ಆದರೆ ಹೋದ ವರ್ಷ ಸಂಭವಿಸಿದ ಗಲಾಟೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಜ್ಯದ ಎಡರಂಗ ಸರ್ಕಾರ, ‘ಪ್ರಚಾರಕ್ಕೋಸ್ಕರ ಬರುವ ಮಹಿಳೆಯರಿಗೆ ಶಬರಿಮಲೆ ಪ್ರವೇಶಿಸಲು ಬಿಡುವುದಿಲ್ಲ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ಗೊಂದಲವಿದ್ದು, ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿತ್ತು. ಇದರ ಬೆನ್ನಲ್ಲೇ 10 ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ವಿಷಯವು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ದರ್ಶನ ಆರಂಭ:  ಶಬರಿಮಲೆ ಅಯ್ಯಪ್ಪನ 2 ತಿಂಗಳ ವಾರ್ಷಿಕ ದರ್ಶನಕ್ಕೆ ಶನಿವಾರ ಸಂಜೆ 5 ಗಂಟೆಗೆ ಚಾಲನೆ ದೊರಕಿತು. ಮುಖ್ಯ ಅರ್ಚಕ ಕಾಂಡರಾರು ಮಹೇಶ್‌ ಮೋಹನರಾರು ಅವರು ಭಾರೀ ಭದ್ರತೆಯ ನಡುವೆ ದೇವಾಲಯದ ಗರ್ಭಗುಡಿಯನ್ನು ತೆರೆದರು. ಈ ವರ್ಷದ ಪೂಜೆಯ ಅಧಿಕಾರವನ್ನು ಅವರು ಎ.ಕೆ. ಸುಧೀರ್‌ ನಂಬೂದರಿ ಹಾಗೂ ಎಂ.ಎಸ್‌. ಪರಮೇಶ್ವರನ್‌ ನಂಬೂದರಿ ಅವರಿಗೆ ವಹಿಸಿದರು. ಬಳಿಕ ಪೂಜೆಗಳು ಆರಂಭವಾದವು. ಮೊದಲ ದಿನವೇ ಕೇರಳ ಹಾಗೂ ಸುತ್ತಲಿನ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶಬರಿಮಲೆ ಕೆಳಗಿರುವ ಪಂಪಾ ಹಾಗೂ ನೀಲಕ್ಕಲ್‌ನಲ್ಲಿ ನೆರೆದಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆ ನಂತರ ಅವರಿಗೆ ಮಲೆ ಏರಲು ಅವಕಾಶ ನೀಡಲಾಯಿತು. ಸಂಜೆ ನಂತರ ಅವರು 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪನ ದರ್ಶನ ಪಡೆದು, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷ ಕೂಗಿದರು. ಶಾಂತಿ ಕಾಪಾಡುವ ಉದ್ದೇಶದಿಂದ 10 ಸಾವಿರ ಪೊಲೀಸರನ್ನು ಅಯ್ಯಪ್ಪ ದೇವಾಲಯದ ಸುತ್ತ ಭದ್ರತೆಗೆ ಹಾಕಲಾಗಿದೆ.

Follow Us:
Download App:
  • android
  • ios