ಅಪಘಾತದಲ್ಲಿ ಪೋಷಕರು ನಿಧನ, ದೇಶದಲ್ಲೇ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ!
- ದೇಶದಲ್ಲಿ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ
- ಮಗುವಿನ ಪೋಷಕರು ಅಪಘಾತದಲ್ಲಿ ನಿಧನ
- ಬದುಕುಳಿದ ಮಗುವಿಗೆ ರೈಲ್ವೇ ಉದ್ಯೋಗ
ನವದೆಹಲಿ(ಜು.08): ಹತ್ತು ತಿಂಗಳ ಹೆಣ್ಣು ಮಗುವಿಗೆ ರೈಲ್ವೇ ಇಲಾಖೆ ಉದ್ಯೋಗ ನೀಡಿದೆ. ಇದು ದೇಶದಲ್ಲೇ ಮೊದಲು. ಆದರೆ ಈ ನೇಮಕಾತಿ ಹಿಂದೆ ಒಂದು ಬಲವಾದ ಕಾರಣವಿದೆ. ಹೌದು. ರೈಲ್ವೇ ಇಲಾಖೆಯ ಈ ನಡೆಯನ್ನು ಮೆಚ್ಚಲೇಬೇಕು. ಈ ಮಗುವಿನ ಪೋಷಕರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಹೀಗಾಗಿ ಅನುಕಂಪದ ಆಧಾರದಲ್ಲಿ ಮಗುವಿಗೆ ಉದ್ಯೋಗ ನೀಡಲಾಗಿದೆ. ಇದು ಚತ್ತೀಸಘಡದಲ್ಲಿ ನಡೆದ ಅಪರೂಪದ ಘಟನೆ.
ಸಹಾನುಭೂತಿ ಆಧಾರದಲ್ಲಿ 10 ತಿಂಗಳ ಮಗುವನ್ನು ರೈಲ್ವೇ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಜುಲೈ 4 ರಂದು ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಸ್ (SECR), ರಾಯ್‌ಪುರ ರೈಲ್ವೆ ವಿಭಾಗದ ಸಿಬ್ಬಂದಿ ಇಲಾಖೆಯಲ್ಲಿ ನೇಮಕಾತಿ ನೋಂದಣಿ ಆಗಿದೆ. ಈ ಹೆಣ್ಣು ಮಗು 18 ವರ್ಷ ತುಂಬಿದಾಗ ರೈಲ್ವೇ ನ್ಯಾಷನಲ್ ಟ್ರಾನ್ಸ್‌ಪೋರ್ಟರ್ ಆಗಿ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಅನಾರೋಗ್ಯ ಪೀಡಿತ ಮಗುವಿಗೆ ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ
ಪೋಷಕರ ನಿಧನದಿಂದ ಹೆಣ್ಣು ಮಗುವಿನ ಶಿಕ್ಷಣ ಹಾಗೂ ಇತರ ವೆಚ್ಚಗಳನ್ನು ಕುಟಂಬ ಇತರ ಸದಸ್ಯರು ಭರಿಸಬೇಕಾಗುತ್ತದೆ. ಮಗುವಿನ ಪಾಲನೆ ಕೂಡ ಕಷ್ಟವಾಗಲಿದೆ. ಹೀಗಾಗಿ 10 ತಿಂಗಳ ಮಗುವಿಗೆ ನೌಕರಿ ನೀಡಲಾಗಿದೆ. ಪ್ರತಿ ತಿಂಗಳ ವೇತನವನ್ನು ಮಗುವಿನ ಹೆಸರಲ್ಲಿ ಜಮಾ ಆಗಲಿದೆ. ಈ ಹಣ ಮಗುವಿನ ಪಾಲನೆಗೆ, ಶಿಕ್ಷಣ ಹಾಗೂ ಇತರ ವೆಚ್ಚಕ್ಕೆ ಖರ್ಚು ಮಾಡಲಾಗುತ್ತದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಮಗುವಿನ ತಂದೆ ರಾಜೇಂದ್ರ ಕುಮಾರ್ ರೈಲ್ವೇ ಯಾರ್ಡ್‌ನ ಅಸಿಸ್ಟೆಂಟ್ ಆಗಿ ಚತ್ತೀಸಘಡದ ಬಿಲಾಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜೂನ್ 1 ರಂದು ನಡೆದ ರಸ್ತೆ ಅಪಘಾತದಲ್ಲಿ ರಾಜೇಂದ್ರ ಕುಮಾರ್ ಹಾಗೂ ಪತ್ನಿ ಸ್ಥಳದಲ್ಲೆ ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಇವರ 10 ತಿಂಗಳ ಹೆಣ್ಣು ಮಗು ಪವಾಡ ಸದೃಶ್ಯವಾಗಿ ಬದುಕುಳಿದಿತ್ತು.
ಪೋಷಕರ ನಿಧನದಿಂದ ಹೆಣ್ಣು ಮಗು ಅನಾಥವಾಗಿದೆ. ಆದರೆ ರೈಲ್ವೇ ಇಲಾಖೆ ಹೆಣ್ಣು ಮಗುವಿಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದೆ. ರಾಜೇಂದ್ರ ಕುಮಾರ್‌ಗೆ ಇಲಾಖೆಯಿಂದ ಬರಬೇಕಿರುವ ಎಲ್ಲಾ ಸೌಲಭ್ಯಗಳನ್ನು ಮಗುವಿನ ಹೆಸರಿಗೆ ಮಾಡುವುದಾಗಿ ಇಲಾಖೆ ಹೇಳಿದೆ. ಇದರ ಜೊತೆಗೆ ನೌಕರಿಯನ್ನು ನೀಡಿದೆ.
ಬಾಲ್ಯದಲ್ಲಿ ಭಿಕ್ಷುಕನಾಗಿದ್ದ Uttar Pradeshದ ಹುಡುಗನಿಗೆ ಅಗ್ನಿವೀರನಾಗುವ ಕನಸು
ರೈಲ್ವೇ ಇಲಾಖೆ ಜುಲೈ 4 ರಂದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದೇ ವೇಳೆ ಮಗುವಿನ ಥಂಬ್ ಇಂಪ್ರೆಶನ್ ಕೂಡ ಮಾಡಿಸಲಾಗಿದೆ.
ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಇದಕ್ಕೆ ವಯಸ್ಸು, ಅರ್ಹತೆ, ಶಿಕ್ಷಣ ಸೇರಿದಂತೆ ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಿ ಸೂಕ್ತ ಉದ್ಯೋಗ ನೀಡಲಾಗುತ್ತದೆ. ಹೀಗೆ ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕನಿಷ್ಠ 18 ವರ್ಷ ತುಂಬಿರಬೇಕು. ಆದರೆ ಈ ಎಲ್ಲಾ ನಿಯಮಗಳನ್ನು ಪಕ್ಕಕ್ಕಿಟ್ಟು ಹೆಣ್ಣು ಮಗುವಗೆ ಆಸರೆಯಾಗಲು ರೈಲ್ವೇ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.