ಸೋನ್‌ಭದ್ರ[ನ.30]: ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಸರ್ಕಾರ ಮಧ್ಯಾಹ್ನದ ವೇಳೆ ಬಿಸಿಯೂಟ ಯೋಜನೆ ತಂದಿದೆ. ಆದರೆ, ಉತ್ತರಪ್ರದೇಶದಲ್ಲಿ ಮಾತ್ರ ಇದು ಸಾಕಾರ ಕಾಣುತ್ತಿಲ್ಲವಾಗಿದೆ.

ಚೋಪನ್‌ ಬ್ಲಾಕ್‌ನಲ್ಲಿನ ಸರ್ಕಾರಿ ಶಾಲೆಯೊಂದು 1 ಲೀಟರ್‌ ಹಾಲನ್ನು, 1 ಬಕೆಟ್‌ ನೀರಿಗೆ ಬೆರೆಸಿ ಅದನ್ನು 81 ವಿದ್ಯಾರ್ಥಿಗಳಿಗೆ ನೀಡಿ ವಿವಾದಕ್ಕೀಡಾಗಿದೆ. ಮಕ್ಕಳಿಗೆ ‘ನೀರಿನ ಹಾಲು’ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಬಾಣಸಿಗ 1 ಲೀಟರ್‌ ಹಾಲನ್ನು ಒಂದು ದೊಡ್ಡ ಬಕೆಟ್‌ನಲ್ಲಿನ ನೀರಿನಲ್ಲಿ ಬೆರೆಸಿ ಅದನ್ನು ಶಾಲಾ ಮಕ್ಕಳಿಗೆ ನೀಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿ, ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್‌.ರಾಜಲಿಂಗನ್‌ ಅವರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು ಆದೇಶಿಸಿದ್ದಾರೆ.

ಅಲ್ಲದೇ, ಓರ್ವ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಈ ಹಿಂದೆ ಮಿರ್ಜಾಪುರ ಜಿಲ್ಲೆಯ ಸಿಯೂರ್‌ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಚಪಾತಿ ಜತೆಯಲ್ಲಿ ತರಕಾರಿ(ಪಲ್ಯ) ಬದಲಾಗಿ ‘ಉಪ್ಪು’ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.