ನವದೆಹಲಿ(ಏ. 08): ಕೊರೋನಾ ವೈರಸ್‌ ಲಾಕ್‌ಡೌನ್‌ ಇಲ್ಲದೆ ಹೋದರೆ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಂಜಾಗ್ರತಾ ಕ್ರಮ ಅನುಸರಿಸದೆ ಹೋದರೆ, ಕೊರೋನಾ ಸೋಂಕಿತನೊಬ್ಬ 30 ದಿನಗಳ ಅವಧಿಯಲ್ಲಿ 406 ಮಂದಿಗೆ ಸೋಂಕು ಹಬ್ಬಿಸಬಲ್ಲ ಎಂಬ ಆತಂಕಕಾರಿ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಅಧ್ಯಯನ ವರದಿ ಹೇಳಿದೆ.

ಸರ್ಕಾರ ಈಗ ಸಾಮಾಜಿಕ ಅಂತರ ಕಾಯುವ ಹಾಗೂ ಲಾಕ್‌ಡೌನ್‌ನಂತಹ ಶೇ.70ರಷ್ಟುಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಕಾರಣ ಸೋಂಕಿತನೊಬ್ಬನಿಂದ ಗರಿಷ್ಠ ಸರಾಸರಿ 2.5 ಜನರಿಗೆ ಸೋಂಕು ತಗುಲಿದೆ. ಇಲ್ಲದೇ ಹೋದರೆ 406 ಮಂದಿಗೆ ಸೋಂಕು ಅಂಟುತ್ತಿತ್ತು ಎಂದು ವರದಿ ಹೇಳಿದೆ. ಈ ಮೂಲಕ ಲಾಕ್‌ಡೌನ್‌ ಮಹತ್ವ ಏನು ಎಂಬುದನ್ನು ವರದಿ ತೋರ್ಪಡಿಸಿದೆ.

ಸೋಂಕಿತರ ಸಂಖ್ಯೆ ಎಚ್ಚುತ್ತಿದೆ, ಲಾಕ್‌ಡೌನ್‌ ವಿಸ್ತ​ರಿಸಿ: ಕೇಂದ್ರಕ್ಕೆ ಒತ್ತಡ

ಮಂಗಳವಾರ ತಮ್ಮ ಕೊರೋನಾ ಪ್ರಕರಣಗಳ ವಿವರ ನೀಡುವ ದೈನಂದಿನ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಅವರು ಐಎಂಸಿಆರ್‌ನ ಈ ಅಧ್ಯಯನ ವರದಿಯ ಅಂಶಗಳನ್ನು ಬಹಿರಂಗಪಡಿಸಿ, ಸಾಮಾಜಿಕ ಅಂತರ ಹಾಗೂ ಲಾಕ್‌ಡೌನ್‌ನ ಮಹತ್ವವನ್ನು ಒತ್ತಿ ಹೇಳಿದರು.

‘ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ‘ಆರ್‌-ನಾಟ್‌’ ಅಥವಾ ‘ಆರ್‌-0’ ಎಂದು ಕರೆಯುತ್ತಾರೆ. ಇದು ವೈರಾಣುವಿನ ಪುನರುತ್ಪತ್ತಿ ಸಂಖ್ಯೆಯ ಸಂಕೇತಾಕ್ಷರವಾಗಿದೆ. ಸಾಮಾಜಿಕ ಅಂತರ ಹಾಗೂ ಲಾಕ್‌ಡೌನ್‌ ಪಾಲನೆ ಮಾಡದೇ ಹೋದರೆ 30 ದಿನಗಳಲ್ಲಿನ ಪ್ರತಿ ಸೋಂಕಿತನಿಂದ ಹರಡುವ ‘ಆರ್‌-ನಾಟ್‌’ ಪ್ರಮಾಣ 406 ಇರುತ್ತದೆ. ಪಾಲನೆ ಮಾಡಿದರೆ ಗರಿಷ್ಠ 2.5 ಇರುತ್ತದೆ’ ಎಂದು ಅಗರ್‌ವಾಲ್‌ ವಿವರಿಸಿದರು.

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

‘ಈಗ ಕೊರೋನಾ ವೈರಸ್‌ನ ‘ಆರ್‌-ನಾಟ್‌’ 1.4 ಹಾಗೂ 1.5ರ ನಡುವೆ ಇದೆ. ಅಂದರೆ ಪ್ರತಿ ಸೋಂಕಿತನಿಂದ 1.4ರಿಂದ 1.5 ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ’ ಎಂದು ಅವರು ಹೇಳಿದರು. ಜನರು ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಲಾಕ್‌ಡೌನ್‌ ವಿಸ್ತರಣೆ ನಿರ್ಧಾರ ಆಗಿಲ್ಲ:

ಈ ನಡುವೆ, ಲಾಕ್‌ಡೌನ್‌ ವಿಸ್ತರಣೆ ಆಗಬಹುದು ಎಂಬ ಗುಸುಗುಸು ಎದ್ದಿರುವ ಬಗ್ಗೆ ಚರ್ಚೆ ನಡೆಸಿರುವ ಅವರು ಪ್ರತಿಕ್ರಿಯಿಸಿ, ‘ಇಂತಹ ಯಾವುದೇ ನಿರ್ಧಾರ ಆಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಚರ್ಚೆ ನಡೆದಿದೆ. ವದಂತಿ ಹರಡಿಸುವ ವಿರುದ್ಧ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಲಾಕ್‌ಡೌನ್‌ ವಿಸ್ತರಣೆ ನಿರ್ಧಾರ ಆಗುವುದಿದ್ದರೆ ನಾವು ನಿಮಗೆ ಹೇಳುತ್ತೇವೆ’ ಎಂದು ಉತ್ತರಿಸಿದರು.

ತುಮಕೂರು, ಬೆಂಗಳೂರಲ್ಲಿ ಯಶಸ್ವಿ:

ಸ್ಮಾರ್ಟ್‌ ಸಿಟಿಗಳಾದ ಕರ್ನಾಟಕದ ಬೆಂಗಳೂರು, ತುಮಕೂರು ಸೇರಿದಂತೆ ‘ಹೋಮ್‌ ಕ್ವಾರಂಟೈನ್‌’ನಲ್ಲಿ ಇದ್ದವರ ಮೇಲೆ ನಿಗಾ ವಹಿಸಲು ಯಶಸ್ವಿಯಾಗಿ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಟೆಲಿಮೆಡಿಸಿನ್‌ ವಿಧಾನವನ್ನೂ ಅನುಸರಿಸಲಾಗಿದೆ ಎಂದು ಅಗರ್‌ವಾಲ್‌ ಹೇಳಿದರು.

ಕೊರೋನಾ ಚಿಕಿತ್ಸೆಗಾಗಿ ಸರ್ಕಾರ 3 ಥರದ ಕೇಂದ್ರಗಳನ್ನು ತೆರೆದಿದೆ. ಶಂಕಿತರನ್ನು ಇರಿಸಲು ಶಾಲೆ, ಕಾಲೇಜು, ಹೋಟೆಲ್‌ಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿಸುವುದು ಮೊದಲ ರೀತಿಯ ಕೇಂದ್ರ. ಸೋಂಕಿತರ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಗಳನ್ನು ಸಿದ್ಧಗೊಳಿಸುವುದು ಎರಡನೇ ರೀತಿಯ ಕೇಂದ್ರ. ಸೋಂಕಿತರಿಗಾಗಿ ಆಸ್ಪತ್ರೆಯನ್ನೇ ಮೀಸಲು ಇಡುವುದು ಮೂರನೇ ರೀತಿಯ ಕೇಂದ್ರ ಎಂದರು.

ಮಾಸ್ಕ್‌ ಮೇಲೆ ವಾರ, ನೋಟ್‌ನಲ್ಲಿ 2 ದಿನ ಇರುತ್ತೆ ಕೊರೋನಾ!

ಕ್ಲಸ್ಟರ್‌ ನಿಯಂತ್ರಣದಿಂದ ಉತ್ತಮ ಫಲಿತಾಂಶ

ಸರ್ಕಾರ ಕೊರೋನಾ ನಿಗ್ರಹಕ್ಕೆ ಅನುಸರಿಸುತ್ತಿರುವ ‘ಕ್ಲಸ್ಟರ್‌ (ಜಿಲ್ಲೆ) ನಿಯಂತ್ರಣ’ ದಿಂದ ಉತ್ತಮ ಫಲಿತಾಂಶ ಬಂದಿದೆ. ನೋಯ್ಡಾ, ಭಿಲ್ವಾರಾ, ಆಗ್ರಾ, ಪಟ್ಟಣಂತಿಟ್ಟಹಾಗೂ ಪೂರ್ವ ದಿಲ್ಲಿಯಲ್ಲಿ ಅನುಸರಿಸಿರುವ ಈ ಕ್ರಮವು ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಕೊರೋನಾ ಪೀಡಿತ ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಜನರ ಸಂಚಾರ ನಿರ್ಬಂಧಿಸುವುದಕ್ಕೆ ‘ಕ್ಲಸ್ಟರ್‌ ನಿಯಂತ್ರಣ’ ಎನ್ನುತ್ತಾರೆ.

"