ಗುವಾಹಟಿ [ಜ.31]:  ಕೇಂದ್ರ ಸರ್ಕಾರದ ಜತೆ ಶಾಂತಿ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ, ಅಸ್ಸಾಂನ 1615 ಬೋಡೋ ಉಗ್ರರು ಗುರುವಾರ ಶಸ್ತ್ರಾಸ್ತ್ರ ತ್ಯಜಿಸಿ ಸರ್ಕಾರದ ಮುಂದೆ ಶರಣಾಗಿದ್ದಾರೆ. ಪ್ರತ್ಯೇಕ ರಾಷ್ಟ್ರ ಸೇರಿದಂತೆ ಅನೇಕ ಬೇಡಿಕೆ ಮುಂದಿಟ್ಟುಕೊಂಡು ಅನೇಕ ವರ್ಷಗಳಿಂದ ಬೋಡೋ ಸಂಘಟನೆ ಹೋರಾಟ ನಡೆಸಿತ್ತು.

ಆದರೆ ಮುಖ್ಯವಾಹಿನಿಗೆ ಬರಲು ಒಪ್ಪಿ ಇತ್ತೀಚೆಗೆ ಈ ಸಂಘಟನೆಯು ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಕಾರ, ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಬೋಡೋಲ್ಯಾಂಡ್‌ (ಎನ್‌ಡಿಎಫ್‌ಬಿ) ಸಂಘಟನೆಗೆ ಸೇರಿದ 1615 ಸದಸ್ಯರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್‌ ಮತ್ತು ವಿತ್ತ ಸಚಿವ ಹಿಮಾಂತ ಬಿಸ್ವಾ ಶರ್ಮಾ ಸಮ್ಮುಖದಲ್ಲಿ ಶರಣಾದರು.

CCB ಯಿಂದ ಅರೆಸ್ಟ್ ಆಗಿದ್ದ ಉಗ್ರರು ಇಂದು NIA ವಶಕ್ಕೆ...

ಈ ವೇಳೆ ಎಕೆ ರೈಫಲ್ಸ್‌, ಸ್ಟೆನ್‌ ಗನ್‌ಗಳು, ಲೈಟ್‌ ಮಷಿನ್‌ ಗನ್‌ಗಳು ಸೇರಿ 4,800ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿದರು. ಬಳಿಕ ಅಸ್ಸಾಂನ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಪ್ರಮಾಣ ಮಾಡಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಸೊನೋವಾಲ್‌, ಅಸ್ಸಾಂ ಅಭಿವೃದ್ಧಿಗೆ ನಾವೆಲ್ಲ ಒಂದುಗೂಡಿ ಹೋರಾಡೋಣ. ಅಸ್ಸಾಂ ಅನ್ನು ದೇಶದ ಅಗ್ರಪಂಕ್ತಿಯ ರಾಜ್ಯವಾಗಿ ಬೆಳೆಸೋಣ ಎಂದರು.

ಮೋದಿ ಸ್ವಾಗತ:

1615 ಉಗ್ರರ ಶರಣಾಗತಿಯನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಹಿಂಸೆಯನ್ನು ತ್ಯಜಿಸಿ, ಸಂವಿಧಾನ ಹಾಗೂ ಪ್ರಜಾಸತ್ತೆಯ ಮೇಲೆ ನಂಬಿಕೆ ಇರಿಸಿದರೆ ಯಾವುದೇ ವಿವಾದಗಳನ್ನು ಇತ್ಯರ್ಥ ಮಾಡಬಲ್ಲುದಾಗಿದೆ ಎಂಬ ಸಂದೇಶ ಇದರಿಂದ ರವಾನೆಯಾಗಿದೆ’ ಎಂದಿದ್ದಾರೆ.