Asianet Suvarna News Asianet Suvarna News

India@75: ವಿಮೋಚನಾ ಹೋರಾಟ ನಡೆದ ಕಲಬುರಗಿಯ ‘ಕುರಿಕೋಟಾ ಸೇತುವೆ’

ಸ್ವತಂತ್ರ ಹೋರಾಟಕ್ಕೆ ಸಾಕ್ಷಿಯಾದ ಹಲವು ಸ್ಥಳಗಳಲ್ಲಿ ಕಲಬುರಗಿ ಬಳಿಯ ಕುರಿಕೋಟಾ ಸೇತುವೆ ಅತ್ಯಂತ ಪ್ರಮುಖವಾದದ್ದು.ಹೈದ್ರಾಬಾದ್ ನಿಜಾಮರ ವಿರುದ್ಧ ಅಂದಿನ ಗೃಹ ಸಚಿವ ಸರ್ದಾರ್ ಪಟೇಲರ ಮಾತುಕತೆ ವಿಫಲಗೊಂಡಾಗ 1948 ರ ಸೆ.12 ರಂದು ಜನರಲ್ ಚೌಧರಿ ನೇತೃತ್ವದಲ್ಲಿ ಆಪರೇಷನ್ ಪೋಲೋ ಕಾರ್ಯಾಚರಣೆ ಪ್ರಾರಂಭಿಸಲಾಯಿತು. 

Azadi ki Amrith Mahothsav Know about kalaburgi Kurikota Bridge History hls
Author
Bengaluru, First Published Jun 18, 2022, 3:05 PM IST

1947 ರ ಆಗಸ್ಟ್ 15 ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ದೇಶ ಸ್ವಾತಂತ್ರ್ಯಗೊಂಡರೂ, ಹೈದ್ರಾಬಾದ್ ನಿಜಾಮ ಅರಸರ ಕಪಿಮುಷ್ಟಿಯಲ್ಲಿದ್ದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್ ಭಾಗದ ಜನ ಮಾತ್ರ ಸ್ವಾತಂತ್ರ್ಯದ ಗಾಳಿ ಉಸಿರಾಡಲು ಮತ್ತೆ 13 ತಿಂಗಳು ಕಾಯಬೇಕಾಯ್ತು. ಈ ಅವಧಿಯಲ್ಲಿ ಘನಘೋರ ಕದನವನ್ನೇ ನಡೆಸಬೇಕಾಯ್ತು. ಹೈದ್ರಾಬಾದ್ ವಿಮೋಚನೆ ಹೋರಾಟವೆಂದೇ ಹೆಸರಾದ ಈ ಬೆಳವಣಿಗೆಯಲ್ಲಿ ಹಲವರು ಹುತಾತ್ಮರಾದರು. ಈ ಹೋರಾಟಕ್ಕೆ ಸಾಕ್ಷಿಯಾದ ಹಲವು ಸ್ಥಳಗಳಲ್ಲಿ ಕಲಬುರಗಿ ಬಳಿಯ ಕುರಿಕೋಟಾ ಸೇತುವೆ ಅತ್ಯಂತ ಪ್ರಮುಖವಾದದ್ದು.

ಹೈದ್ರಾಬಾದ್ ನಿಜಾಮರ ವಿರುದ್ಧ ಅಂದಿನ ಗೃಹ ಸಚಿವ ಸರ್ದಾರ್ ಪಟೇಲರ ಮಾತುಕತೆ ವಿಫಲಗೊಂಡಾಗ 1948 ರ ಸೆ.12 ರಂದು ಜನರಲ್ ಚೌಧರಿ ನೇತೃತ್ವದಲ್ಲಿ ಆಪರೇಷನ್ ಪೋಲೋ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಈ ವೇಳೆ ಶತ್ರುಗಳ ಮದ್ದುಗುಂಡು, ಅಡಗುದಾಣ ಇತ್ಯಾದಿಗಳನ್ನೆಲ್ಲ ಗುರುತಿಸಿ ಅವರನ್ನು ಸದೆ ಬಡೆವಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದವರಲ್ಲಿ ಹವಾಲ್ದಾರ್ ಬಚತ್ತರ್ ಸಿಂಗ್, ಸಿದ್ರಾಮಪ್ಪ, ಅಪ್ಪಾರಾವ ಪಾಟೀಲ್ ಮಹಾಗಾಂವ್, ನಾಯಕ್ ಸರ್ ಬಹದ್ದೂರ್ ಥಾಪಾ ಸ್ಮರಿಸಲೇಬೇಕಾದ ಹೆಸರುಗಳು.

India@75: ಗದಗದ ಜಕ್ಕಲಿಯಲ್ಲಿ ಮೊಳಗಿತ್ತು ಸ್ವಾತಂತ್ರ ಹೋರಾಟದ ಕಹಳೆ

ಬಾಂಬ್ ಜತೆ ನದಿಗೆ ಹಾರಿದ್ದ ಸಿದ್ರಾಮಪ್ಪ:

ಅಪ್ಪಾರಾವ ಪಾಟೀಲರ ಬಲಗೈ ಬಂಟ ಸಿದ್ರಾಮಪ್ಪ ಆಪರೇಷನ್ ಪೋಲೋ ಕಾರ್ಯಾಚರಣೆ ಕಾಲದಲ್ಲಿ ಭಾರತದ ಸೇನೆ ಟ್ಯಾಂಕರ್ ಪ್ರವೇಶಕ್ಕೆ ಮುಖ್ಯವಾಗಿದ್ದ ಕುರಿಕೋಟಾ ಸೇತುವೆಗೆ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದರು. ಸೆ.14 ರಂದು ರಾತ್ರಿ ನಿಜಾಂ ಪೊಲೀಸನೊಬ್ಬ ಶಕ್ತಿಶಾಲಿ ಬಾಂಬೊಂದನ್ನ ಕುರಿಕೋಟಾ ಸೇತುವೆ ಗುರಿಯಾಗಿಸಿ ಇಟ್ಟಿದ್ದನ್ನು ಸಿದ್ರಾಮಪ್ಪ ನೋಡಿದ್ದಲ್ಲದೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿ ಆತನನ್ನು ಕೊಂದರು. ಮರುಕ್ಷಣವೇ ಆತ ಇಟ್ಟ ಬಾಂಬನ್ನು ಹಿಡಿದು ನದಿಗೆ ಹಾರಿದಾಗ ಬಾಂಬ್ ಸಮೇತ ಸಿದ್ರಾಮಪ್ಪ ದೇಹವೂ ಸ್ಫೋಟಗೊಂಡು ನೀರಲ್ಲಿ ವಿಲೀನವಾಗಿತ್ತು.

ಇತ್ತ ನೇತಾಜಿ ಅಜಾದ್ ಹಿಂದ ಸೇನೆಯಲ್ಲಿ ಸೇವೆ ಸಲಿಸಿದ್ದ ಖ್ಯಾತಿಯ ಅಪ್ಪಾರಾವ ಪಾಟೀಲ್ ಮುಂಚೂಣಿಯಲ್ಲಿ ನಿಂತು ಭಾರತೀಯ ಸೇನೆ ಹುಮಾನಾಬಾದ್ ಮಾರ್ಗದಿಂದ ಕಮಲಾಪುರ, ಮಹಾಗಾಂವ್ ಮಾರ್ಗವಾಗಿ ಕುರಿಕೋಟಾ ಸೇತುವೆ ಬಳಸಿ ಸಾಗುವಂತೆ ಮಾಡಿದರು. ಆದರೂ ಹೆಬ್ಬಾಳೆ, ಕಮಲಾಪುರ ಹಾಗೂ ತುರ್ಕ ಚಿಂಚೋಳಿಯಲ್ಲಿ ರಜಾಕರರ ದಬ್ಬಾಳಿಕೆ  ಮುಂದುವರಿದಿತ್ತು. ಪ್ರತಿರೋಧ ಒಡ್ಡುವ ಸಂದರ್ಭದಲ್ಲಿ ಅಪ್ಪಾರಾವ ಪಾಟೀಲ್ ದೇಹದೊಳಗೆ ಎರಡು ಗುಂಡು ಹೊಕ್ಕರೂ ಎದೆಗುಂದದೆ ಹೋರಾಡಿ ಹುತಾತ್ಮರಾದರು. ಒಂದುವೇಳೆ ಸಿದ್ರಾಮಪ್ಪ ಹಾಗೂ ಅಪ್ಪಾರಾವ ಪಾಟೀಲ್ ಶೌರ್ಯ ಮೆರೆಯದೆ ಹೋಗಿದ್ದರೆ ಕುರಿಕೋಟಾ ಸೇತುವೆ ಛಿದ್ರವಾಗುತ್ತಿತ್ತಲ್ಲದೆ ಆಪರೇಷನ್ ಪೋಲೋ ವಿಫಲವಾಗುತ್ತಿತ್ತು.

India@75:ರಾಣಿ ಚನ್ನಮ್ಮನಿಗೆ ಗುರಿಯಿಟ್ಟಿದ್ದ ಗುಂಡಿಗೆ ಎದೆಕೊಟ್ಟ ವೀರ ಅಮಟೂರು ಬಾಳಪ್ಪ

ತಲುಪುವುದು ಹೇಗೆ?:

ಕಲಬುರಗಿಯಿಂದ ಬೀದರ್ ಹೆದ್ದಾರಿಯಲ್ಲಿ ೧೫ ಕಿ.ಮೀ. ದೂರದಲ್ಲಿದೆ ಕುರಿಕೋಟಾ ಸೇತುವೆ. ಸಾರಿಗೆ ಸಂಸ್ಥೆಯ ಬಸ್ಸುಗಳೆಲ್ಲವೂ ಕುರಿಕೋಟಾ ಸೇತುವೆ ಬಲಿ ರಿಕ್ವೆಸ್ಟ್ ಸ್ಟಾಪ್ ನೀಡುತ್ತವೆ.

- ಶೇಷಮೂರ್ತಿ ಅವಧಾನಿ

Follow Us:
Download App:
  • android
  • ios