India@75: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿ ಈ ಬಾವಿ
ರಾಷ್ಟ್ರಪಿತ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಕುಂದಾನಗರಿ ಬೆಳಗಾವಿಯಲ್ಲಾದರೆ, ಅದಕ್ಕೆ ಸಾಕ್ಷಿಯಾಗಿ ನಿಂತಿರುವುದೇ ಅಂದು ತೋಡಿದ ಬೃಹತ್ತಾದ ಬಾವಿ. ಅದೀಗ ಕಾಂಗ್ರೆಸ್ ಬಾವಿಯೆಂದೇ ಜನಪ್ರಿಯವಾಗಿದೆ.
ರಾಷ್ಟ್ರಪಿತ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಕುಂದಾನಗರಿ ಬೆಳಗಾವಿಯಲ್ಲಾದರೆ, ಅದಕ್ಕೆ ಸಾಕ್ಷಿಯಾಗಿ ನಿಂತಿರುವುದೇ ಅಂದು ತೋಡಿದ ಬೃಹತ್ತಾದ ಬಾವಿ. ಅದೀಗ ಕಾಂಗ್ರೆಸ್ ಬಾವಿಯೆಂದೇ ಜನಪ್ರಿಯವಾಗಿದೆ.
1924ರ ಡಿಸೆಂಬರ್ 26ರಂದು ಕಾಂಗ್ರೆಸ್‌ನ 39ನೇ ಅಧಿವೇಶನ ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆದಿತ್ತು. ಕರ್ನಾಟಕ ಸಿಂಹ ಎಂದೇ ಖ್ಯಾತಿ ಹೊಂದಿದ್ದ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಆಗ ಕಾಂಗ್ರೆಸ್‌ನ ನಾಯಕರಾಗಿದ್ದರು. ಅವರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಅಧಿವೇಶನವನ್ನು ಬೆಳಗಾವಿಯ ಟಿಳಕವಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಜಯನಗರ ಸಾಮ್ರಾಜ್ಯದ ಸ್ಮರಣೆಗಾಗಿ ಅಧಿವೇಶನ ಸ್ಥಳಕ್ಕೆ ವಿಜಯನಗರವೆಂದು ನಾಮಕರಣ ಮಾಡಲಾಗಿತ್ತು. ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಜನರಿಗೆ ಕುಡಿಯುವ ನೀರು ಪೂರೈಸಲು ಹತ್ತಿರದಲ್ಲಿಯೇ 100 ಅಡಿ ಆಳದ ದೊಡ್ಡ ಬಾವಿ ಅಗೆಯಲಾಯಿತು. ಅದಕ್ಕೆ ಪಂಪಾ ಸರೋವರ ಎಂದು ಹೆಸರಿಸಲಾಗಿತ್ತು. ಅದೀಗ ಕಾಂಗ್ರೆಸ್ ಬಾವಿ ಎಂದೇ ಜನಪ್ರಿಯವಾಗಿದೆ.
India@75: ಗದಗದ ಜಕ್ಕಲಿಯಲ್ಲಿ ಮೊಳಗಿತ್ತು ಸ್ವಾತಂತ್ಯ್ರ ಹೋರಾಟದ ಕಹಳೆ
ಅಧಿವೇಶನಕ್ಕಾಗಿ ಆಗಮಿಸಿದ್ದ ಜನರಿಗೆ ಸ್ಥಳೀಯರು ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಸ್ವಚ್ಛತಾ ಕಾರ್ಯಕ್ಕಾಗಿ ಸ್ಥಳೀಯರೇ ಟೊಂಕಕಟ್ಟಿನಿಂತಿದ್ದರು. ಮುಖಂಡರಾದ ಡಾ.ಎನ್.ಎಸ್.ಹರ್ಡಿಕರ್, ಭೀಮರಾವ್ ಪೋದ್ದಾರ, ಆರ್.ಕೆಂಭಾವಿ, ಎಸ್.ಎಲ್.ವಾಮನ್, ಗೋವಿಂದರಾವ್ ಯಾಳಗಿ, ಜೀವನರಾವ್ ಯಾಳಗಿ ಸೇರಿದಂತೆ ಹಲವರು ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡರು. ಇಲ್ಲಿನ ಶಿಸ್ತುಬದ್ಧ ವ್ಯವಸ್ಥೆ ನೋಡಿದ ಗಾಂಧೀಜಿಯವರು ಮುಕ್ತಕಂಠದಿಂದ ಹೊಗಳಿದ್ದರು.
ಅಸಹಕಾರಕ್ಕೆ ಬೆಳಗಾವಿಯಿಂದಲೇ ಕರೆ: ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯ ಹೋರಾಟ ಮುಂದುವರಿಸಬೇಕು. ಹಿಂಸೆಗೆ ಅವಕಾಶ ಮಾಡಿಕೊಡಬಾರದು. ಅಸಹಕಾರ ಮಾಡುವ ಮೂಲಕ ಬ್ರಿಟಿಷರೇ ದೇಶ ಬಿಟ್ಟು ಹೋಗುವಂತೆ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನದಲ್ಲಿ ಕರೆ ನೀಡಿದ್ದರು. ಅಸಹಕಾರ ಆಂದೋಲನದ ಬೀಜ ಮೊದಲು ಬಿತ್ತಿದ್ದೇ ಬೆಳಗಾವಿಯಲ್ಲಿ ಎಂದು ಹೇಳಲಾಗುತ್ತಿದೆ. ಪಂ.ಜವಾಹರಲಾಲ್ ನೆಹರೂ, ಪಟ್ಟಾಭಿರಾಮ ಸೀತಾರಾಮಯ್ಯ, ಸರೋಜಿನಿ ನಾಯ್ಡು, ಅನಿಬೆಸೆಂಟ್, ಮೌಲಾನಾ ಮೊಹಮ್ಮದ್ ಅಲಿ ಸೇರಿದಂತೆ ಹಲವು ನಾಯಕರು ಅಧಿವೇಶನದಲ್ಲಿ ಭಾಗವಹಿಸಿದ್ದರು.
ನೆನಪಿಗಿರುವುದೊಂದೇ ಬಾವಿ: ಅಂದು ಅಧಿವೇಶನ ನಡೆದ ಸ್ಥಳದಲ್ಲಿ ಇಂದು ಹತ್ತು ಹಲವು ಕಟ್ಟಡಗಳು ತಲೆ ಎತ್ತಿವೆ. ಅಧಿವೇಶನದ ನೆನಪಿನ ರೂಪದಲ್ಲಿ ಪಂಪಾ ಸರೋವರ (ಕಾಂಗ್ರೆಸ್ ಬಾವಿ) ಮಾತ್ರ ಉಳಿದುಕೊಂಡಿದೆ. ಈಗ ಈ ಬಾವಿಯ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. 2001-02ರಲ್ಲಿ ಇದನ್ನು ಪುನರುಜ್ಜೀವನಗೊಳಿಸಲಾಗಿದ್ದು ಯಾವುದೇ ಅನಾಹುತಕ್ಕೆ ಅವಕಾಶ ಆಗಬಾರದು ಎಂಬ ಕಾರಣಕ್ಕೆ ಬಾವಿಯನ್ನು ಸುತ್ತಲೂ ಕಬ್ಬಿಣದ ಸೆಳೆಗಳಿಂದ ಅದರತ್ತ ಸುಳಿಯದಂತೆ ಮಾಡಿದ್ದಾರೆ. ಸುತ್ತಲೂ ಉದ್ಯಾನ ನಿರ್ಮಿಸಲಾಗಿದೆ. ಮಹಾತ್ಮ ಗಾಂಧೀಜಿಯ ಪ್ರತಿಮೆಯನ್ನೊಳಗೊಂಡ ಸ್ಮಾರಕ ಭವನವನ್ನೂ ಇಲ್ಲಿ ನಿರ್ಮಿಸಲಾಗಿದೆ. ಗಾಂಧೀಜಿಯ ಅಪರೂಪದ ಭಾವಚಿತ್ರಗಳನ್ನೂಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಗಾಂಧೀಜಿಗೆ ಸಂಬಂಧಿಸಿದ ಕೃತಿಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನೂ ಪಕ್ಕದಲ್ಲಿಯೇ ತೆರೆಯಲಾಗಿದೆ.
India@75:ರಾಣಿ ಚನ್ನಮ್ಮನಿಗೆ ಗುರಿಯಿಟ್ಟಿದ್ದ ಗುಂಡಿಗೆ ಎದೆಕೊಟ್ಟ ವೀರ ಅಮಟೂರು ಬಾಳಪ್ಪ
ತಲುಪುವುದು ಹೇಗೆ?
ಟಿಳಕವಾಡಿಯ ಐತಿಹಾಸಿಕ ಕಾಂಗ್ರೆಸ್ ಬಾವಿ ಉದ್ಯಾನ ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದಿಂದ 6 ಕಿ.ಮೀ ಹಾಗೂ ಬೆಳಗಾವಿ ರೈಲ್ವೆ ನಿಲ್ದಾಣದಿಂದ ಕೇವಲ 1 ಕಿ.ಮೀ. ಅಂತರದಲ್ಲಿದೆ. ಇಲ್ಲಿಗೆ ತೆರಳಲು ನಗರ ಸಾರಿಗೆ ಬಸ್ ಸೌಲಭ್ಯವೂ ಇದೆ. ನಿತ್ಯ ಈ ಉದ್ಯಾನಕ್ಕೆ ನಾಗರಿಕರು ಭೇಟಿಕೊಡುತ್ತಾರೆ.
- ಶ್ರೀಶೈಲ ಮಠದ ಬೆಳಗಾವಿ