ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಹಲವಾರು ಕೆಲಸಗಳು ದಿನಚರಿಯಾಗಿರುತ್ತವೆ. ಅವನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತೇವೆ. ನಮ್ಮ ಜೀವನಶೈಲಿಯ ಭಾಗವಾಗಿ ಹೋಗುವ ಇಂಥ ಕೆಲ ಕೆಲಸಗಳು, ಅಭ್ಯಾಸಗಳು ನಮ್ಮ ಒಳಿತು ಕೆಡುಕುಗಳನ್ನು ನಿರ್ಧರಿಸುವಷ್ಟು ಶಕ್ತರಾಗಿರುತ್ತವೆ. ಹಾಗೆ ನಮ್ಮ ಕೆಡುಕಿಗೆ ಕಾರಣವಾಗುವ ಒಂದಿಷ್ಟು ಸಾಮಾನ್ಯ ಅಭ್ಯಾಸಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳ ಬಗ್ಗೆ ತಿಳಿದುಕೊಂಡರೆ ಅಂಥ ಅಭ್ಯಾಸಗಳಿಂದ ಮುಕ್ತರಾಗುವತ್ತ ಗಮನ ಹರಿಸಬಹುದು. 

ಅತಿಯಾಗಿ ಟಿವಿ ನೋಡುವುದು
ಅತಿಯಾಗಿ ಟಿವಿ ನೋಡುವುದರಿಂದ ವಯಸ್ಸಿಗೆ ಮುಂಚೆ ಸಾಯುವ ಸಾಧ್ಯತೆ ಡಬಲ್ ಆಗುತ್ತದೆ ಎಂಬುದು ನಿಮಗೆ ಗೊತ್ತೇ? 'ಇಡೀ ದಿನ ಗಂಟೆಗಟ್ಟಲೆ ಟಿವಿ ನೋಡುವುದರಿಂದ ಜನರಿಗೆ ಅವರ ಡಯಟ್ ಮೇಲಾಗಲೀ, ಲೈಫ್‌ಸ್ಟೈಲ್ ಮೇಲಾಗಲೀ ಗಮನವಿರುವುದಿಲ್ಲ. ಕಣ್ಣುಗಳು ಕೂಡಾ ನೋಯುತ್ತವೆ. ಹೀಗೆ ಕುಳಿತೇ ಇರುವ ಜೀವನಶೈಲಿಯಿಂದ ರಕ್ತನಾಳಗಳು ಸ್ಟಿಫ್ ಆಗುತ್ತಾ, ಕೊಲೆಸ್ಟೆರಾಲ್ ಕಟ್ಟಿಕೊಳ್ಳಲು ದಾರಿ ಮಾಡಿಕೊಡುತ್ತವೆ,' ಎನ್ನುತ್ತಾರೆ ಅಮೆರಿಕನ್ ಹಾರ್ಟ್ ಅಸೋಸಿಯೇಶನ್‌ನ ಹೃದಯತಜ್ಞೆ ನಿಸಾ ಗೋಲ್ಡ್‌ಬರ್ಗ್. 

ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಹೀಗೆ ಕಾಪಾಡಿ.

ಹಸಿವಾಗದಿದ್ದರೂ ತಿನ್ನುವುದು
ದೇಹವು ಪ್ರತಿ ಕ್ಷಣವೂ ತನ್ನ ಬೇಕು ಬೇಡಗಳನ್ನು ಹೇಳುತ್ತಲೇ ಇರುತ್ತದೆ. ದೇಹ ಕೊಡುವ ಸೂಚನೆಗಳನ್ನು ಎಂದಿಗೂ ಕಡೆಗಣಿಸಬಾರದು. ತನಗೆ ಹಸಿವಾದಾಗ ಅದನ್ನು ದೇಹ ಹೇಳುತ್ತದೆ. ಅದು ಹೇಳದಿದ್ದರೂ ಸುಮ್ಮನೆ ಕಂಡಿದ್ದೆಲ್ಲ, ಕೈಗೆಟುಕಿದ್ದೆಲ್ಲ ತಿನ್ನುತ್ತಿದ್ದರೆ ಅದರಿಂದ ಬೊಜ್ಜು, ಸೋಮಾರಿತನ, ಕಾಯಿಲೆಗಳು ಸಾಲಾಗಿ ನಿಮ್ಮದಾಗುತ್ತಾ ಹೋಗುತ್ತವೆ. 

ಪದೇ ಪದೆ ಕತ್ತು ಲಟಿಕೆ ತೆಗೆಯುವುದು
ಇಡೀ ದಿನ ಟಿವಿ ಪರದೆ, ಕಂಪ್ಯೂಟರ್ ಪರದೆ ಅಥವಾ ಮೊಬೈಲ್ ನೋಡುವಾಗ ಕತ್ತುಗಳು ನೋಯುವುದು ಸಾಮಾನ್ಯ. ಹಾಗಂಥ ಪದೇ ಪದೆ ಕುತ್ತಿಗೆಯ ಲಟಿಕೆ ಮುರಿಯುತ್ತಿದ್ದರೆ ಅದರಿಂದ ಗಂಭೀರವಾಗಿ ಪೆಟ್ಟಾಗುವ ಸಾಧ್ಯತೆಯಿದೆ. ಇದು ಸ್ಟ್ರೋಕ್‌ಗೆ ಕೂಡಾ ಎಡೆ ಮಾಡಿಕೊಡಬಹುದು. 

ಹೆಚ್ಚು ಸಮಯ ಒಬ್ಬರೇ ಇರುವುದು
ಸೋಷ್ಯಲ್ ಡಿಸ್ಟೆನ್ಸಿಂಗ್ ಸಧ್ಯದ ಅಗತ್ಯ ನಿಜ. ಹಾಗಂಥ ಇದು ಅತಿಯಾದರೆ ಸಾವು ಬೇಗ ಹುಡುಕಿಕೊಂಡು ಬರುತ್ತದೆ ಎನ್ನುತ್ತದೆ ಪರ್ಸ್‌ಪೆಕ್ಟಿವ್ಸ್ ಆನ್ ಸೈಕಾಲಜಿಕಲ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ. ಅದೂ ಅಲ್ಲದೆ ಈಗ ಕೂಡಾ ಜನರೊಂದಿಗೆ ಮಾತನಾಡಲು,ಬೆರೆಯಲು ಹಲವು ಮಾಧ್ಯಮಗಳಿವೆ. ಅದಿಲ್ಲದೆಯೂ ಕುಟುಂಬ ಸದಸ್ಯರಂತೂ ಜೊತೆಯಲ್ಲೇ ಇದ್ದಾರೆ. ಅಕ್ಕಪಕ್ಕದಲ್ಲಿ ಮನೆಗಳಿವೆ. ಟೆರೇಸ್ ಮೇಲೆ ನಿಂತು ಮಾತನಾಡಬಹುದಲ್ಲ. ಅವರೆಲ್ಲರೊಂದಿಗೆ ಸಾಧ್ಯವಾದಷ್ಟು ಬೆರೆಯಿರಿ. ಕ್ವಾರಂಟೈನ್ ಇಲ್ಲದಾಗ ಕೂಡಾ ಒಬ್ಬರೇ ಅತಿಯಾಗಿ ಸಮಯ ಕಳೆಯುವುದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. 

ಡ್ರಗ್ಸ್‌ನಿಂದ ಗನ್‌ವರೆಗೆ, ಇಲ್ಲಿ ಬದುಕೋ 'ಅತ್ಯಗತ್ಯ'ಗಳಲ್ಲಿ ಏನುಂಟು ...

ಉಗುರು ಕಚ್ಚುವುದು
ಉಗುರು ಕಚ್ಚುವ ಅಭ್ಯಾಸ ಹಲವರಲ್ಲಿರುತ್ತದೆ. ಯೋಚಿಸುವಾಗ, ಚಿಂತೆಯಲ್ಲಿದ್ದಾಗ, ಏನನ್ನಾದರೂ ನೋಡುವಾಗ ಉಗುರು ಕಚ್ಚುತ್ತಲೇ ಇರುತ್ತಾರೆ. ಆದರೆ, ಆ ಉಗುರಿನಲ್ಲಿ ಅದೆಷ್ಟು ಬ್ಯಾಕ್ಟೀರಿಯಾಗಳಿರಬಹುದೆಂದು ಒಮ್ಮೆಯಾದರೂ ಯೋಚಿಸಿದ್ದೀರಾ? ಒಂದೇ ಒಂದು ಬಾರಿ ಮೈಕ್ರೋಸ್ಕೋಪ್ ಅಡಿಗೆ ಬೆರಳಿಟ್ಟು ನೋಡಿಕೊಂಡರೆ ಮತ್ತಿನ್ನೆಂದು ಉಗುರು ಕಚ್ಚಲು ನೀವು ಧೈರ್ಯ ಮಾಡಲಾರಿರಿ. 

ಅತಿಯಾಗಿ ಪೇನ್ ಕಿಲ್ಲರ್ಸ್ ತೆಗೆದುಕೊಳ್ಳುವುದು
ನಮ್ಮ ಈಗಿನ ಲೈಫ್‌ಸ್ಟೈಲ್ ಹೇಗಿದೆ ಎಂದರೆ, ಗಡಿಬಿಡಿಯ ನಡುವೆ ಯಾವ ನೋವಿಗೂ ಕುಳಿತು ವಿಶ್ರಾಂತಿ ಪಡೆಯಲು ಸಮಯವಿಲ್ಲ. ಹಾಗಾಗಿ, ಸಣ್ಣಪುಟ್ಟದ್ದಕ್ಕೂ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡು ಕೆಲಸ ಮುಂದುವರಿಸುವ ಅಭ್ಯಾಸ ಬಹುತೇಕರದು. ಆದರೆ, ಇಬುಪ್ರೋಫಿನ್, ಆಸ್ಪಿರಿನ್‌ನಂಥ ಮಾತ್ರೆಗಳು ಅಲ್ಸರ್, ಹೈ ಬಿಪಿ, ಹಾರ್ಟ್ ಅಟ್ಯಾಕ್, ಗ್ಯಾಸ್ಟ್ರೋ ಇಂಟಸ್ಟೈನಲ್ ಬ್ಲೀಡಿಂಗ್‌ನಂಥ ಸಮಸ್ಯೆಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂಬುದು ನಿಮಗೆ ಗೊತ್ತೇ?

ಉಪಾಹಾರಕ್ಕೆ ಉಪವಾಸ
ಕಚೇರಿಗೆ ಹೋಗುವ ಸಮಯದಲ್ಲಿ ಲೇಟ್ ಆಯಿತೆಂದು, ಮನೆಯಲ್ಲಿದ್ದಾಗ, ಏಳುವುದು ತಡವಾಯಿತೆಂದು ಬೆಳಗಿನ ತಿಂಡಿ ತಿನ್ನದೆ ನೇರ ಮಧ್ಯಾಹ್ನ ಊಟವನ್ನೇ ನೆಚ್ಚಿಕೊಂಡಿರುವವರು ಹಲವಾರು ಮಂದಿ. ಆದರೆ ಉಪಾಹಾರ ಬಿಡುವುದರಿಂದ ಹಲವು ಅಡ್ಡ ಪರಿಣಾಮಗಳಿವೆ. ಬೆಳಗಿನ ಉಪಾಹಾರ ಬಿಟ್ಟವರು ಮಧ್ಯಾಹ್ನ ಹಾಗೂ ರಾತ್ರಿ ಅತಿ ಹೆಚ್ಚು ತಿಂದು, ಹೆಚ್ಚು ಒತ್ತಡ ಅನುಭವಿಸುತ್ತಾರೆ. 

ಇರುವುದಕ್ಕಿಂತ ಹೆಚ್ಚು ಹಣ ವ್ಯಯಿಸುವುದು
ಈಗಿನ ಯುವಪೀಳಿಗೆಗೆ ಹಣದ ವಿಷಯದಲ್ಲಿ ಶಿಸ್ತು ಕಡಿಮೆ. ಕ್ರೆಡಿಟ್ ಕಾರ್ಡ್ ಇದೆ ಎಂದು ತಮ್ಮ ಬಳಿ ಇರುವುದಕ್ಕಿಂತ ಹೆಚ್ಚನ್ನು ಖರ್ಚು ಮಾಡಿ ಶೋಕಿ ಮಾಡುತ್ತಾರೆ. ಆದರೆ, ಈ ಅಭ್ಯಾಸ ನಿಧಾನವಾಗಿ ಒತ್ತಡಕ್ಕೆ ತಳ್ಳಿ, ವಯಸ್ಸಾಗುವ ಕ್ರಿಯೆಯನ್ನು ವೇಗಗೊಳಿಸುತ್ತದೆ. 

ಅತಿಯಾದ ಕಾಫಿ ಸೇವನೆ
ಕಾಫಿ ಬಗ್ಗೆ ನೀವು ನೂರಾರು ಲೇಖನಗಳನ್ನು ಓದಿರಬಹುದು. ಆದರೆ, ಯಾವುದು ಏನೇ ಹೇಳಲಿ, ಕಾಫಿಯಲ್ಲಿರುವ ಕೆಫಿನ್ ವ್ಯಕ್ತಿಯ ಆತಂಕ ಹಾಗೂ ನಿದ್ರಾಹೀನತೆ ಹೆಚ್ಚಿಸುತ್ತದೆ ಎಂಬುದೇ ಸತ್ಯ. ಹಾಗಾಗಿ, ಕಾಫಿ ಸೇವನೆ ಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. 

"