ನೀವು ಕಾಲ ಮೇಲೆ ಕಾಲು ಹಾಕಿ ಕೂರೋದ್ರಿಂದ ಪುರುಷತ್ವಕ್ಕೆ ಹಾನಿಯಾ?
ಆರಾಮಾಗಿ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಹೆಚ್ಚಿನವರ ಅಭ್ಯಾಸ. ಪುರುಷರು ಸದಾ ಕಾಲ ಹೀಗೆ ಮಾಡಿದರೆ ಅದರಿಂದ ಪುರುಷತ್ವಕ್ಕೆ ಹಾನಿ ಎನ್ನುತ್ತಾರೆ ನಿಜವೇ?
ನೀವು ಕಚೇರಿಯಲ್ಲಿರುವಾಗ, ಮನೆಯಲ್ಲಿ ಆರಾಮಾಸನದಲ್ಲಿ ಇರುವಾಗ ಹೇಗೆ ಕುಳಿತುಕೊಳ್ತೀರಿ? ಕೆಲವರು ಸೆಲೆಬ್ರಿಟಿಗಳು ಟಿವಿ ಇಂಟರ್‌ವ್ಯೂನಲ್ಲೂ ಕಾಲು ಮೇಲೆ ಕಾಲು ಹಾಕಿ ಜರ್ಬಾಗಿ ಕುಳಿತುಕೊಳ್ಳುವುದನ್ನು ನೀವು ನೋಡಬಹುದು. ಇದು ಒಂದು ಅಭ್ಯಾಸವೂ ಹೌದು; ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಕೂಡ ಹೌದು. ಕೆಲವೊಮ್ಮೆ ಇದು ಆರಾಮದಾಯಕ ಎನಿಸುತ್ತದೆ. ಆದರೆ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬ ಅನುಮಾನವೂ ನಿಮಗೆ ಇರಬಹುದು. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕೆಟ್ಟದು ಎಂದು ಹಿರಿಯರಿಂದ ನೀವು ಬೈಸಿಕೊಂಡಿರಬಹುದು. ಹಾಗಿದ್ದರೆ ಇದರಲ್ಲಿ ಸತ್ಯವೇನು?
ಗರ್ಭಧಾರಣೆ ಸಂದರ್ಭದಲ್ಲಿ
ನೀವು ಪ್ರೆಗ್ನೆಂಟ್ ಆಗಿರುವಾಗ ಹಲವಾರು ದೈಹಿಕ ಬದಲಾವಣೆಗಳು ಆಗುತ್ತವೆ. ಗರ್ಭಾಶಯ ವಿಸ್ತರಿಸುತ್ತದೆ. ನಿಮ್ಮ ದೇಹದ ಗುರುತ್ವ ಕೇಂದ್ರ ಬದಲಾಗುತ್ತದೆ. ವಿಭಿನ್ನವಾಗಿ ನಡೆಯುತ್ತೀರಿ, ಕುಳಿತುಕೊಳ್ಳುತ್ತೀರಿ, ನಿಲ್ಲುತ್ತೀರಿ. ಕಾಲು ಅಡ್ಡ ಹಾಕಿ ಕುಳಿತುಕೊಳ್ಳುವುದರಿಂಧ ಕೆಳಹೊಟ್ಟೆಯ ಮೇಲೆ ಸ್ವಲ್ಪ ಒತ್ತಡ ಬೀಳಬಹುದು. ಆದರೂ ಇದೇನೂ ಆತಂಕಕಾರಿಯಲ್ಲ.
ಗರ್ಭಾವಸ್ಥೆಯಲ್ಲಿದ್ದಾಗ ಸ್ನಾಯುಗಳ ಸೆಳೆತ, ಬೆನ್ನು ನೋವು ಎಲ್ಲವೂ ಸಾಮಾನ್ಯ. ಹೀಗಾಗಿ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕೂಡ ಕಾಲಿನ ಸೆಳೆತಕ್ಕೆ ಕಾರಣವಾಗಬಹುದು. ಕಾಲುಗಳನ್ನು ನೆಲಕ್ಕೆ ಇಳಿಬಿಟ್ಟುಕೊಂಡು ಕುಳಿತುಕೊಳ್ಳುವುದಕ್ಕಿಂತಲೂ ಸೋಫಾ, ಮಂಚ ಅಥವಾ ಸ್ಟೂಲ್ ಮೇಲೆ ಉದ್ದವಾಗಿ ಇಡಲು ಯತ್ನಿಸಿ.
ಪುರುಷರ ಲೈಂಗಿಕ ಸಮಸ್ಯೆ ದೂರ ಮಾಡೋ ಮೂರು ಆಹಾರಗಳು
ತೀವ್ರ ರಕ್ತದೊತ್ತಡ
ಸಾಮಾನ್ಯವಾಗಿ ನೀವು ಒಂದು ಕಾಲಿನ ಮೇಲೆ ಇನ್ನೊಂದನ್ನು ಹಾಕಿ ಕುಳಿತುಕೊಂಡಾಗ ರಕ್ತದ ಒತ್ತಡದಲ್ಲಿ ಸಣ್ಣ ಪ್ರಮಾಣದ ತಾತ್ಕಾಲಿಕ ಏರಿಕೆ ಉಂಟಾಗುತ್ತದೆ. ಆದ್ದರಿಂದ ರಕ್ತದೊತ್ತಡದ ಪರೀಕ್ಷೆಯ ಸಂದರ್ಭದಲ್ಲಿ ಕಾಲು ಕ್ರಾಸ್ ಮಾಡದಿರಲು ಹೇಳುತ್ತಾರೆ. ಮೊಣಕಾಲು ಮಟ್ಟದಲ್ಲಿ ಕಾಲು ಮೇಲೆ ಕಾಲು ಹಾಕಿದಾಗ ರಕ್ತದೊತ್ತಡದಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಪಾದದ ಬಳಿ ಕಾಲು ಕ್ರಾಸ್ ಮಾಡಿದಾಗ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಆದರೂ, ಬಿಪಿ ಸಮಸ್ಯೆ ಇರುವವರು ಆರೋಗ್ಯದ ದೃಷ್ಟಿಯಿಂದ, ಹೆಚ್ಚು ಎತ್ತರದಲ್ಲಿ ಕಾಲು ಕ್ರಾಸ್ ಮಾಡದೆ ಕುಳಿತುಕೊಳ್ಳುವುದು ಒಳ್ಳೆಯದು.
ವೇರಿಕೋಸ್ ವೇನ್ಸ್
ಸದಾ ಕಾಲು ಕ್ರಾಸ್ ಮಾಡಿ ಕುಳಿತುಕೊಂಡರೆ ಕಾಲಿನಲ್ಲಿ ಉಬ್ಬಿದ ರಕ್ತನಾಳಗಳು (ವೇರಿಕೋಸ್ ವೇನ್ಸ್) ಉಂಟಾಗಬಹುದು ಎಂದು ಹೇಳಲಾಗುತ್ತದೆ. ಇದು ನಿಜವಲ್ಲ. ವೇರಿಕೋಸ್ ವೇನ್ಸ್ ಯಾರಿಗೆ ಬೇಕಿದ್ದರೂ ಉಂಟಾಗಬಹುದು. ಅದಕ್ಕೆ ಕಾಲು ಕ್ರಾಸ್ ಮಾಡುವುದೇ ಕಾರಣವಲ್ಲ. ಸಾಮಾನ್ಯವಾಗಿ ಕಾಲುಗಳಲ್ಲಿ ನೀಲಿ ರಕ್ತನಾಳಗಳು ಉಬ್ಬಿದಂತೆ ಹೊಮ್ಮುವುದೇ ವೇರಿಕೋಸ್ ವೇನ್ಸ್. ವಯಸ್ಸಾದ ಮಹಿಳೆಯರು ಮತ್ತು ಗರ್ಣಿಣಿಯರಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಇದು ರಕ್ತನಾಳಗಳಲ್ಲಿನ ಕವಾಟಗಳ ಸಮಸ್ಯೆಯಿಂದಾಗಿ ಆಗುವುದು. ಕಾಲು ಕ್ರಾಸ್ ಮಾಡುವುದರಿಂದ ಇದು ಉಂಟಾಗುತ್ತದೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಆದರೂ, ಈ ಬಗ್ಗೆ ಆತಂಕವಿದ್ದರೆ, ಕುಳಿತುಕೊಳ್ಳುವ ಭಂಗಿಯನ್ನು ಆಗಾಗ ಬದಲಾಯಿಸಿಕೊಳ್ಳಿ.
ವಿಟಮಿನ್ ಡಿ ನಿಮ್ಮಲ್ಲಿ ಸಾಕಷ್ಟಿದೆಯಾ? ತಿಳಿಯೋದು ಹೇಗೆ?
ಭಂಗಿಯಲ್ಲಿ ವಕ್ರತೆ
ಬೇರೆ ಏನೇ ಇಲ್ಲವಾದರೂ ಒಂದನ್ನಂತೂ ಕಾಲು ಕ್ರಾಸ್ ಮಾಡುತ್ತದೆ- ಅದೇನೆಂದರೆ ದೇಹದ ಭಂಗಿಯಲ್ಲಿ ಒಂದು ಬಗೆಯ ವಕ್ರತೆ ಉಂಟಾಗಬಹುದು. ಮೊಣಕಾಲ ಬಳಿ ಕಾಲ ಮೇಲೆ ಕಾಳು ಹಾಕಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ಸೊಂಟ ಸ್ವಲ್ಪ ತಿರುಗಲು ಮತ್ತು ಓರೆಯಾಗಲು ಕಾರಣ ಆಗಬಹುದು. ಇದು ಕೆಳ ಬೆನ್ನಿನಲ್ಲಿ ಉಂಟಾಗುವ ನೋವಿನಿಂದ ಆಗುತ್ತದೆ. ಕಾಲಾನಂತರದಲ್ಲಿ ಇದರಿಂದ ಬೆನ್ನು ಮೂಳೆ ಕೂಡ ಸ್ವಲ್ಪ ವಕ್ರವಾಗಬಹುದು. ಕ್ರಾಸ್ ಮಾಡಿ ಕುಳಿತುಕೊಳ್ಳುವುದರಿಂದ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಇದನ್ನು ಸರಿದೂಗಿಸುವಾಗ ಕೆಳಬೆನ್ನಿನ ನೋವು ಉಂಟಾಗಬಹುದು.
ಪುರುಷತ್ವಕ್ಕೆ ಅಪಾಯವೇ?
ಪುರುಷರು ದೀರ್ಘ ಕಾಲ ತೊಡೆಯ ಮಟ್ಟದಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಅದರಿಂದ ವೃಷಣಗಳ ಮೇಲೆ ಒತ್ತಡ ಬೀಳುತ್ತದೆ, ಇದರಿಂದ ಪುರುಷತ್ವ ನಷ್ಟವಾಗುವ ಅಪಾಯವಿದೆ- ಎಂದು ಹೇಳಲಾಗುತ್ತದೆ. ಆದರೆ ಇದನ್ನೂ ರುಜುವಾತುಪಡಿಸುವ ಯಾವುದೇ ಸಾಕ್ಷಿಗಳು ಇಲ್ಲ. ಸಂಶೋಧನೆಯೂ ಆಗಿಲ್ಲ. ಹೀಗಾಗಿ ಆ ಬಗ್ಗೆ ಅಂಜಿಕೆ ಬೇಡ.
ಕಂಪ್ಯೂಟರ್ ನೋಡಿ ಕಣ್ಣು ಬಳಲುತ್ತಿದೆಯೇ? ಪರಿಹಾರ ಇಲ್ಲಿದೆ