ಪತಿ ಕಣ್ಣಿಗೆ ಕಾಣದಿದ್ರೂ ವಾಸನೆಯಿಂದಲೇ ಅವರೆಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಲೆ ಕೆಲವು ಪತ್ನಿಯರಿಗೆ ತಿಳಿದಿದೆ. ಅರೇ,ಇದು ಹೇಗೆ ಸಾಧ್ಯವಪ್ಪ? ಅವರದೇನು ನಾಯಿ ಮೂಗೇ ಎಂದು ನೀವು ಪ್ರಶ್ನಿಸಬಹುದು.ಈ ಕೆಲಸಕ್ಕೆ ನಾಯಿ ಮೂಗೇ ಬೇಕೆಂದಿಲ್ಲ,ಪತಿಯ ಶರ್ಟ್ ವಾಸನೆ ತಿಳಿದಿದ್ರೆ ಸಾಕು.ಅರ್ಥವಾಗಿಲ್ವ ಪತಿ ಬಳಸುವ ಪಫ್ರ್ಯೂಮ್ ಪರಿಮಳದೊಂದಿಗೆ ಬೆರೆತ ಆತನ ಬೆವರಿನ ವಾಸನೆಯ ಪರಿಚಯವಿದ್ರೆ ಇದು ತನ್ನ ಪತಿಯದೇ ಶರ್ಟ್ ಅಥವಾ ಆತ ಇಲ್ಲಿಯೇ ಎಲ್ಲೋ ಇದ್ದಾನೆ ಎಂಬುದನ್ನು ಸುಲಭವಾಗಿ ಗ್ರಹಿಸಬಹುದು. ಕೆಲವು ಮಹಿಳೆಯರಿಗೆ ಗಂಡ ಒಗೆಯಲು ಹಾಕಿರುವ ಶರ್ಟ್ ಅನ್ನು ಮತ್ತೆ ಮತ್ತೆ ಮೂಸಿ ನೋಡುವ ಅಭ್ಯಾಸವಿದೆ. ಕೆಲವರಿಗೆ ಶರ್ಟ್‍ನ ವಾಸನೆ ಗ್ರಹಿಸಿದ್ರೇನೆ ಒಂಥರಾ ನೆಮ್ಮದಿ, ಖುಷಿ.ಅಷ್ಟೇ ಅಲ್ಲ ರ್ರೀ, ಸಂಗಾತಿಯ ಶರೀರದ ವಾಸನೆ ಕಣ್ತುಂಬಾ ನಿದ್ರೆಯನ್ನೂ ಹೊತ್ತು ತರುತ್ತದೆ ಎನ್ನುವುದು ಅಧ್ಯಯನವೊಂದರಲ್ಲಿ ದೃಢಪಟ್ಟಿದೆ.

ಸೈಕಲಾಜಿಕಲ್ ಸೈನ್ಸ್ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ರೊಮ್ಯಾಂಟಿಕ್ ಸಂಗಾತಿಯ ಶರೀರದ ವಾಸನೆ ವ್ಯಕ್ತಿಯ ನಿದ್ರೆಯ ಗುಣಮಟ್ಟ ಹೆಚ್ಚಿಸಲು ನೆರವು ನೀಡುತ್ತದೆ.ಮಲಗುವಾಗ ಸಂಗಾತಿಯ ಶರೀರದ ವಾಸನೆಯನ್ನೊಳಗೊಂಡಿರುವ ಟೀ-ಶರ್ಟ್ ಅಥವಾ ಬಟ್ಟೆಯನ್ನು ದಿಂಬಿಗೆ ಸುತ್ತಿ ತಲೆ ಕೆಳಗಿಟ್ಟು ಮಲಗಿದರೆ ಸುದೀರ್ಘ ಹಾಗೂ ನೆಮ್ಮದಿಯ ನಿದ್ರೆ ಆವರಿಸುತ್ತದೆ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ.

ನಿಮ್ಮ ವ್ಯಕ್ತಿತ್ವಕ್ಕೂ, ಬೀಳೋ ಕನಸಿಗೂ ಇದೆ ಚೆಂದದ ನಂಟು!

ಹೀಗೆಲ್ಲ ನಡೆಯಿತು ಅಧ್ಯಯನ: ನಿದ್ರೆಯ ಗುಣಮಟ್ಟ ಹಾಗೂ ಸಂಗಾತಿಯ ದೇಹದ ವಾಸನೆ ನಡುವಿನ ಸಂಬಂಧವನ್ನು ಅರಿಯಲು ಸಂಶೋಧಕರು ಕೈಗೊಂಡ ಪ್ರಯೋಗ ಆಸಕ್ತಿಕರ ಹಾಗೂ ವಿನೋದಮಯವಾಗಿತ್ತು.ಪ್ರಯೋಗದಲ್ಲಿ ಪಾಲ್ಗೊಂಡ ಪ್ರತಿ ಜೋಡಿಯ ಒಬ್ಬ ಸದಸ್ಯರಿಗೆ ಒಂದು ಟೀ ಶರ್ಟ್ ಅನ್ನು ನಿರಂತರ 24 ಗಂಟೆ ಧರಿಸುವಂತೆ ತಿಳಿಸಲಾಯಿತು. ಜೊತೆಗೆ ಟೀ ಶರ್ಟ್ ಧರಿಸಿರುವ ಸಮಯದಲ್ಲಿ ತುಂಬಾ ವಾಸನೆಯಿಂದ ಕೂಡಿರುವ ಮಸಾಲ ಪದಾರ್ಥಗಳನ್ನು ಸೇವಿಸಬಾರದು ಎಂಬುದು ಸೇರಿದಂತೆ ಕೆಲವೊಂದು ನಿರ್ದೇಶನಗಳನ್ನು ನೀಡಲಾಯಿತು.24 ಗಂಟೆಗಳ ಬಳಿಕ ಟೀ ಶರ್ಟ್ ಧರಿಸಿದ್ದ ವ್ಯಕ್ತಿಯ ಸಂಗಾತಿಗೆ 2 ಟೀ-ಶರ್ಟ್‍ಗಳನ್ನು ನೀಡಲಾಯಿತು.ಅದರಲ್ಲಿ ಒಂದು ಅವರ ಸಂಗಾತಿ ಧರಿಸಿದ್ದ ಟೀ ಶರ್ಟ್,ಇನ್ನೊಂದು ಬೇರೆ ವ್ಯಕ್ತಿಯ ಟೀ ಶರ್ಟ್. ಆತ ಅಥವಾ ಆಕೆ ತಾನು ಬಳಸುವ ದಿಂಬಿಗೆ ಈ ಎರಡರಲ್ಲಿ ಯಾವುದಾದರೂ ಒಂದು ಟೀ ಶರ್ಟ್ ಅನ್ನು ಸುತ್ತಿ ತಲೆಯ ಕೆಳಗಿರಿಸಿಕೊಂಡು ಮಲಗುವಂತೆ ತಿಳಿಸಲಾಯಿತು.ಮರುದಿನ ಪರೀಕ್ಷಿಸಿದಾಗ ಸಂಗಾತಿ ಟೀ-ಶರ್ಟ್ ಅನ್ನು ದಿಂಬಿಗೆ ಸುತ್ತಿಕೊಂಡು ಮಲಗಿದ ವ್ಯಕ್ತಿಗಳು ಇತರರಿಗೆ ಹೋಲಿಸಿದರೆ ಹೆಚ್ಚುವರಿ 9 ನಿಮಿಷಗಳ ಕಾಲ ಮಲಗಿರುವುದು ಕಂಡುಬಂದಿದೆ.ಪ್ರಯೋಗದಲ್ಲಿ ಪಾಲ್ಗೊಂಡವರು ಕೂಡ ಪ್ರತಿದಿನ ಬೆಳಗ್ಗೆ ರಾತ್ರಿಯ ತಮ್ಮ ನಿದ್ರೆಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು.ಸಂಗಾತಿಯ ಶರೀರದ ವಾಸನೆಯಿಂದಾಗಿ ದೀರ್ಘಾವಧಿ ನೆಮ್ಮದಿಯ ನಿದ್ರೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ಪತ್ತೆಯಾದ ಅಂಶಗಳು ನಮ್ಮ ಪ್ರೀತಿಪಾತ್ರರ ಶರೀರದ ವಾಸನೆ ನಮ್ಮ ಆರೋಗ್ಯದ ಮೇಲೆ ಬಲವಾದ ಪ್ರಭಾವ ಬೀರುತ್ತದೆ ಎಂಬುದನ್ನು ದೃಢಪಡಿಸಿದೆ. 

ದಿಂಬು ಬದಲಾಯಿಸುವ ಟೈಮ್ ಆಯ್ತಾ?

ಸಂಬಂಧಗಳು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ.ಆದರೆ,ಸಂಗಾತಿ ದೇಹದ ವಾಸನೆ ಕೂಡ ವ್ಯಕ್ತಿಯ ಮನಸ್ಸಿನ ಮೇಲೆ ಪ್ರಭಾವ ಬೀರಬಲ್ಲದು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯೇನೂ ಇರಲಿಲ್ಲ. ಆದರೆ, ಈ ಅಧ್ಯಯನ ಅದನ್ನು ದೃಢಪಡಿಸಿದ್ದು,ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಯಾವುದೇ ಔಷಧಿಯ ಸಹಾಯವಿಲ್ಲದೆ ಕಣ್ತುಂಬಾ ನಿದ್ರಿಸಲು ಸಾಧ್ಯವಾಗುವ ಮಾರ್ಗವೊಂದನ್ನು ತೋರಿಸಿದೆ. ಪ್ರವಾಸಕ್ಕೆ ಹೋದಂತಹ ಸಂದರ್ಭದಲ್ಲಿ ಕೆಲವೊಮ್ಮೆ ನಿದ್ರೆ ಬಳಿ ಸುಳಿಯದೆ ನಮ್ಮನ್ನು ಸಿಕ್ಕಾಪಟ್ಟೆ ಆಟವಾಡಿಸುತ್ತದೆ.ನಿದ್ರೆಯ ಇಂಥ ಕಣ್ಣುಮುಚ್ಚಾಲೆ ಆಟಕ್ಕೆ ಬ್ರೇಕ್ ಹಾಕಲು ಪ್ರವಾಸಕ್ಕೆ ಹೋಗುವಾಗ ಮರೆಯದೆ ನಿಮ್ಮ ಸಂಗಾತಿ ಬಳಸಿರುವ ಟೀ-ಶರ್ಟ್ ತೆಗೆದುಕೊಂಡು ಹೋಗಿ. ಮಲಗುವಾಗ ಟೀ ಶರ್ಟ್ ಮೇಲೆ ತಲೆಯಿರಿಸಿಕೊಂಡರೆ ನಿದ್ರಾದೇವತೆ ಯಾವುದೇ ತಂಟೆತಕರಾರಿಲ್ಲದೆ ನಿಮ್ಮನ್ನು ಆವರಿಸುತ್ತಾಳೆ.