Watermelon Side Effect: ಕಲ್ಲಂಗಡಿ ಹಣ್ಣಿನ ಅಡ್ಡಪರಿಣಾಮಗಳ ಬಗ್ಗೆ ಹುಷಾರು
Summer Health Tips: ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು ಕಲ್ಲಂಗಡಿ. ರಸಭರಿತ ಕಲ್ಲಂಗಡಿ ಹಣ್ಣು ಡಿಹೈಡ್ರೇಷನ್ ಆಗದಂತೆ ನೋಡಿಕೊಳ್ಳುತ್ತದೆ. ಆದರೆ, ಇದರ ಅಧಿಕ ಸೇವನೆಯಿಂದ ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಕಲ್ಲಂಗಡಿ ಹಣ್ಣು ಕೆಲವರಲ್ಲಿ ಏನು ಸಮಸ್ಯೆ ಉಂಟುಮಾಡಬಲ್ಲದು ಎಂದು ನೋಡಿಕೊಳ್ಳಿ.
ಬೇಸಿಗೆಯಲ್ಲಿ ಎಲ್ಲರೂ ಬಯಸಿ ಸೇವಿಸುವ ಹಣ್ಣು ಕಲ್ಲಂಗಡಿ (Watermelon). ನೀರಿನಿಂದ ಕೂಡಿರುವ ಕಲ್ಲಂಗಡಿ ಹಣ್ಣು ದೇಹ ಡಿಹೈಡ್ರೇಟ್ (Dehydrate) ಆಗದಂತೆ ನೋಡಿಕೊಳ್ಳುತ್ತದೆ. ಗರ್ಭಿಣಿಯರು ಹಾಗೂ ಬೊಜ್ಜಿನ ಸಮಸ್ಯೆ ಉಳ್ಳವರು ದಿನವೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಇದೊಂದು ಆರೋಗ್ಯಕರ (Healthy) ಹಾಗೂ ಟೇಸ್ಟಿ (Tasty) ಹಣ್ಣೆನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೂ ಕೆಲವರಿಗೆ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಹಾನಿ ತರಬಹುದು ಎಂದರೆ ಅಚ್ಚರಿಯಾದೀತು.
ಅಧಿಕಾಂಶ ನೀರಿನಿಂದ ಕೂಡಿದ್ದರೂ ಕಲ್ಲಂಗಡಿ ಹಣ್ಣು ಉಷ್ಣ(Heat)ವನ್ನು ಉಂಟುಮಾಡುವಂಥ ಗುಣ ಹೊಂದಿದೆ. ಇದೇ ಗುಣದಿಂದ ಕೆಲವು ಆರೋಗ್ಯ ಸಮಸ್ಯೆ ಉಳ್ಳವರಿಗೆ ಇದು ಹಾನಿಕಾರಿ ಆಗಬಲ್ಲದು. ಕಲ್ಲಂಗಡಿ ಹಣ್ಣು ಯಾರಿಗೆಲ್ಲ ಸಮಸ್ಯೆ ತರಬಹುದು ನೋಡಿಕೊಳ್ಳಿ. ಪೌಷ್ಟಿಕತೆಯುಳ್ಳ ಹಣ್ಣಾದರೂ ಎಲ್ಲ ರೀತಿಯ ದೇಹ ಪ್ರಕೃತಿಯವರಿಗೂ ಇದು ಒಗ್ಗುವುದಿಲ್ಲ. ಅದನ್ನು ಅರಿತು ಸೇವಿಸಿ.
• ಜೀರ್ಣಕ್ಕೆ (Digestion) ಸಂಬಂಧಿಸಿದ ಸಮಸ್ಯೆ ಉಳ್ಳವರು
ವರದಿಯೊಂದರ ಪ್ರಕಾರ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಉಳ್ಳವರಿಗೆ ಕಲ್ಲಂಗಡಿ ಉತ್ತಮವಲ್ಲ. ಅಲ್ಪಸ್ವಲ್ಪ ಸೇವನೆ ಮಾಡಿದರೆ ಪರವಾಗಿಲ್ಲ. ಆದರೆ, ಹೆಚ್ಚು ಹಣ್ಣು ತಿಂದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಆಗಬಹುದು, ಡಯೇರಿಯಾ ಹಾಗೂ ಊತ ಕೂಡ ಉಂಟಾಗಬಹುದು. ಕಲ್ಲಂಗಡಿ ಹಣ್ಣಿನಲ್ಲಿರುವ ಅಧಿಕ ಫ್ರಕ್ಟೋಸ್ (Fructose) ಅಂಶದಿಂದಾಗಿ ಇದನ್ನು FODMAP ಆಹಾರವನ್ನಾಗಿ ಪರಿಗಣಿಸಲಾಗುತ್ತದೆ. ಅಂದರೆ, ಫರ್ಮಂಟೆಬಲ್, ಒಲಿಗೊಸ್ಯಾಕರೈಡ್, ಮೊನೊಸ್ಯಾಕರೈಡ್ ಮತ್ತು ಪಾಲಿಯೊಲ್ ಗಳನ್ನು ಹೊಂದಿರುವ ಆಹಾರ. ಈ ರೀತಿಯ ಆಹಾರ ಕಾರ್ಬೋಹೈಡ್ರೇಟ್ ಸರಪಳಿಯನ್ನು ಹೊಂದಿದ್ದು, ಸಣ್ಣ ಕರುಳು ಅತಿ ಕಡಿಮೆ ಪ್ರಮಾಣದಲ್ಲಿ ಇವುಗಳನ್ನು ಸ್ವೀಕಾರ ಮಾಡುತ್ತದೆ. ಅಂದರೆ, ಸಣ್ಣ ಕರುಳಿನ (Small Intestine) ಆರೋಗ್ಯಕ್ಕೆ ಇದು ಪೂರಕವಲ್ಲ. ಇಂತಹ ಆಹಾರ ಸೇವನೆ ಮಾಡುವುದರಿಂದ ಅನೇಕರಿಗೆ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ ಅಥವಾ ಹೆಚ್ಚಾಗುತ್ತದೆ. ಇದರಲ್ಲಿರುವ ಫ್ರಕ್ಟೋಸ್ ಒಂದು ಮೊನೊಸ್ಯಾಕರೈಡ್ ಆಗಿದ್ದು, ಹೊಟ್ಟೆಗೆ ತೊಂದರೆ ನೀಡಬಲ್ಲದು. ಹೀಗಾಗಿ, ಕಲ್ಲಂಗಡಿಯನ್ನು ರಾತ್ರಿ ಸಮಯದಲ್ಲಿ ಸೇವನೆ ಮಾಡಬಾರದು.
ಇದನ್ನೂ ಓದಿ: ದಿನಕ್ಕೊಂದು ಆವಕಾಡೊ ತಿಂದರೆ ಹೃದಯದ ಆರೋಗ್ಯದ ಬಗ್ಗೆ ಭಯ ಬೇಕಿಲ್ಲ
• ರಕ್ತದಲ್ಲಿ ಸಕ್ಕರೆ ಮಟ್ಟ (Blood Sugar Level) ನೋಡಿಕೊಳ್ಳಿ
ಕಲ್ಲಂಗಡಿ ಹಣ್ಣು ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಇರುವ ಆಹಾರವಾಗಿದೆ. ಅಂದರೆ, ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಬಹಳ ವೇಗವಾಗಿ ಹೆಚ್ಚಾಗುತ್ತದೆ. ನಿಮಗೆ ಮಧುಮೇಹವಿದ್ದರೆ ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಉತ್ತಮವಲ್ಲ. ತಿಂದರೂ ಅತಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.
• ಚರ್ಮದಲ್ಲಿ ಬದಲಾವಣೆ (Change in Skin)
ಒಂದು ಅಧ್ಯಯನದ ಪ್ರಕಾರ ಕಲ್ಲಂಗಡಿ ಹಣ್ಣನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನುವುದರಿಂದ ಚರ್ಮ ಹಳದಿ-ಕಿತ್ತಳೆ ಬಣ್ಣಕ್ಕೆ ತಿರುಗುವ ಸಮಸ್ಯೆಗೆ ಕಾರಣವಾಗಬಲ್ಲದು. ಇದನ್ನು ಲೈಕೋಪೆನೀಮಿಯಾ ಎಂದೂ ಕರೆಯಲಾಗುತ್ತದೆ. ಇದು ಕೆರೊಟೆನೀಮಿಯಾದ ಒಂದು ಪ್ರಕಾರವಾಗಿದೆ. ಲೈಕೋಪೀನ್ ಒಂದು ಆಂಟಿಆಕ್ಸಿಡಂಟ್ ಹಾಗೂ ಪಿಗ್ನೆಂಟ್ ಆಗಿದ್ದು ಹಣ್ಣಿಗೆ ಕೆಂಪು ಬಣ್ಣ ಬರಲು ಇದು ಕಾರಣವಾಗಿದೆ. ಸೂಕ್ಷ್ಮದೇಹಿಗಳು ಈ ಹಣ್ಣನ್ನು ಸೇವನೆ ಮಾಡಿದರೆ ಚರ್ಮದ ಬಣ್ಣದಲ್ಲಿ ಬದಲಾವಣೆಯಾಗಬಹುದು.
ಇದನ್ನೂ ಓದಿ: ಹೃದಯ ರಕ್ತನಾಳದ ಕಾಯಿಲೆಗೆ ಕಾರಣವಾಗುವ ಅಪಾಯಕಾರಿ ಆಹಾರಗಳಿವು
• ತೂಕದಲ್ಲಿ ಹೆಚ್ಚಳ (Weight Gain)
ಕಲ್ಲಂಗಡಿ ಹಣ್ಣು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ, ಇದರಲ್ಲಿ ನೈಸರ್ಗಿಕ ಸಕ್ಕರೆ (Natural Sugar) ಅಂಶ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ತಜ್ಞರ ಪ್ರಕಾರ, ಹೆಚ್ಚು ಸಕ್ಕರೆಯುಕ್ತ ಆಹಾರ ಸೇವನೆಯಿಂದ ತೂಕದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ, ರಾತ್ರಿ ಸಮಯದಲ್ಲಿ ಕಲ್ಲಂಗಡಿ ಸೇವನೆ ಮಾಡದಂತೆ ಸಲಹೆ ನೀಡಲಾಗುತ್ತದೆ. ದಿನದ ವೇಳೆಯಲ್ಲಿ ಅಲ್ಪ ಪ್ರಮಾಣದ ಸೇವನೆ ಮಾಡಿದರೆ ಯಾವುದೇ ಹಾನಿಯಿಲ್ಲ.