Asianet Suvarna News Asianet Suvarna News

Skin Allergy: ಗುಟ್ಟು ಬಿಟ್ಟುಕೊಡದ ಚರ್ಮದ ಅಲರ್ಜಿ: ಈ ಐದು ಅಂಶಗಳೇ ಕಾರಣ

ಚರ್ಮದ ಅಲರ್ಜಿಗೆ ಹಲವು ಕಾರಣ. ಅದು ಹೇಗೆ ಉಂಟಾಗುತ್ತದೆ, ಹೇಗೆ ಶಾಶ್ವತವಾಗಿ ನಿವಾರಣೆ ಮಾಡಿಕೊಳ್ಳಬೇಕು ಎನ್ನುವುದೇ ಅರಿವಾಗುವುದಿಲ್ಲ. ಚರ್ಮದ ಅಲರ್ಜಿ ಉಂಟಾಗಲು ಮುಖ್ಯವಾಗಿ ಐದು ಅಂಶಗಳನ್ನು ಗುರುತಿಸಲಾಗಿದೆ.
 

Know about 5 main causes for skin allergies
Author
First Published Sep 17, 2022, 4:36 PM IST

ಸೂಕ್ಷ್ಮ ಚರ್ಮದವರು ಪ್ರತಿ ಕಾಲದಲ್ಲೂ ಸ್ವಲ್ಪ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ, ಚರ್ಮದ ಅಲರ್ಜಿ ತೊಂದರೆಯನ್ನು ನಿಭಾಯಿಸುವುದು ತುಸು ಕಷ್ಟ. ಚರ್ಮದ ಮೇಲೆ ಕೆಂಪು ದದ್ದು ಏಳುವುದು, ಅಪಾರ ತುರಿಕೆ ಅಥವಾ ನವೆಯಾಗುವುದು, ಉರಿಉರಿಯಾದಂತೆ ಅನಿಸುವುದು, ಕೆಂಪು ಗುಳ್ಳೆಗಳು ಕಂಡುಬರುವುದು ಇವೆಲ್ಲ ಕೆಲ ಬಾರಿ ಭಾರೀ ಹಿಂಸೆ ನೀಡುತ್ತವೆ. ಕೆಲವು ಅಲರ್ಜಿಗಳಿಗೆ ಕಾರಣವೇ ತಿಳಿದುಬರುವುದಿಲ್ಲ. ದೀರ್ಘಕಾಲ ಔಷಧ ಮಾಡುತ್ತಲೇ ಇರಬೇಕಾಗುತ್ತದೆ. ಇದು ನಿಜಕ್ಕೂ ಬೇಸರದ ಸಂಗತಿ. ಚರ್ಮದ ಈ ಅಲರ್ಜಿಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ನಾವು ಸೇವಿಸುವ ಆಹಾರದಿಂದ ಹಿಡಿದು, ಬಟ್ಟೆ, ವಾತಾವರಣದಲ್ಲಿರುವ ಫಂಗಸ್‌ ಕೂಡ ಅಲರ್ಜಿಗೆ ಕಾರಣವಾಗಬಹುದು. ಚರ್ಮದ ಅಲರ್ಜಿ ಕೆಲವೊಮ್ಮೆ ಇಡೀ ದೇಹಕ್ಕೂ ಇರಬೇಕೆಂದಿಲ್ಲ. ಮುಖ, ಕೈಕಾಲುಗಳ ಮೇಲೆ, ನಿರ್ದಿಷ್ಟ ಭಾಗದಲ್ಲೂ ಕಂಡುಬರಬಹುದು. ಚರ್ಮದ ಅಲರ್ಜಿಯ ಬಗ್ಗೆ ಆರಂಭಿಕ ಹಂತದಲ್ಲೇ ಗಮನಹರಿಸಬೇಕಾಗುತ್ತದೆ. ಸಮಯ ಕಳೆದಂತೆ ಇದು ಹೆಚ್ಚು ಕಾಡುವ ಸಮಸ್ಯೆಯಾಗಿ ಪರಿಣಮಿಸಬಹುದು. ಚರ್ಮ ರೋಗ ತಜ್ಞರ ಪ್ರಕಾರ, ಚರ್ಮದ ಯಾವುದೇ ರೀತಿಯ ಅಲರ್ಜಿಗೆ ಐದು ಮುಖ್ಯ ಕಾರಣಗಳಿವೆ. ಅವುಗಳ ಕುರಿತು ಗಮನ ನೀಡಿದರೆ ಅಲರ್ಜಿಯನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಿಕೊಳ್ಳಬಹುದು.

•    ಫಂಗಲ್‌ ಸೋಂಕು (Fungal Infection)
ಚರ್ಮದ ಅಲರ್ಜಿಗೆ (Skin Allergy) ಮುಖ್ಯವಾದ ಕಾರಣವೆಂದರೆ ಫಂಗಸ್. ಕೆಂಪು ಗುಳ್ಳೆ (Red Rash), ತುರಿಕೆ (Itchy) ಆಗುವುದು ಇದರ ಪ್ರಮುಖ ಲಕ್ಷಣ. ವೃತ್ತಾಕಾರವಾಗಿ, ಉದ್ದುದ್ದ ಗೆರೆಗಳಾಗಿ ಕೆಂಪು ಕಲೆಗಳು ಏಳಬಹುದು. ಫಂಗಲ್‌ ಸೋಂಕು ಸಿಕ್ಕಾಪಟ್ಟೆ ಹಿಂಸೆ ನೀಡಿದರೂ ಅದನ್ನು ಚಿಕಿತ್ಸೆಯ (Treatment) ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ಚರ್ಮಕ್ಕೆ ಅಲರ್ಜಿ ಉಂಟುಮಾಡುವ ಇಂತಹ ಫಂಗಸ್‌ ಗಳು ಮನೆಯ ನೆಲದ ಮೇಲೆ, ಧೂಳಿನಲ್ಲಿ, ಗಿಡಗಳಲ್ಲೂ ಇರಬಹುದು. ರಿಂಗ್‌ ವರ್ಮ್‌ ಹಾಗೂ ಅಥ್ಲೀಟ್ಸ್‌ ಫೂಟ್‌ ಎಂದು ಕರೆಯಲ್ಪಡುವ ಅಲರ್ಜಿಗಳು ಇದಕ್ಕೆ ಉದಾಹರಣೆ. ಇಂತಹ ಸೋಂಕಿನಿಂದ ದೂರವಿರಲು ಸ್ವಚ್ಛತೆ ಕಾಪಾಡಿಕೊಳ್ಳುವುದೊಂದೇ ಪರಿಹಾರ.

ಇದನ್ನೂ ಓದಿ: ಪೆಟ್ರೋಲಿಯಂ ಜೆಲ್ಲಿ ಬ್ಯಾನ್‌ ಬಗ್ಗೆ ಚಿಂತೇನಾ ? ತ್ವಚೆಗೆ ಹಾಲಿನ ಕೆನೆ, ತುಪ್ಪ ಬಳಸ್ಬೋದು ಬಿಡಿ

•    ಬಟ್ಟೆಗೆ ಬಳಸುವ ವಸ್ತು (Harmful Clothing Material)
ನಾವು ಧರಿಸುವ ಬಟ್ಟೆ ತಯಾರಿಸಲು ಹಲವು ರೀತಿಯ ವಸ್ತು, ಕೆಮಿಕಲ್‌ (Chemical)ಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿಯೇ ಹೊಸ ಬಟ್ಟೆ ಹಲವರಿಗೆ ಅಲರ್ಜಿ ಉಂಟುಮಾಡುತ್ತದೆ. ಸೂಕ್ಷ್ಮ ಚರ್ಮ (Skin) ನಿಮ್ಮದಾಗಿದ್ದರೆ ಬಟ್ಟೆಯಲ್ಲಿರುವ ಲ್ಯಾಟೆಕ್ಸ್‌ (Latex) ಎನ್ನುವ ಅಂಶದಿಂದಲೂ ಅಲರ್ಜಿ ಉಂಟಾಗಬಲ್ಲದು. ಚರ್ಮದ ಅಲರ್ಜಿ ತಡೆಯಲು ಲ್ಯಾಟೆಕ್ಸ್‌ ಅಂಶವಿರುವ ಬಟ್ಟೆಗಳನ್ನು ಧರಿಸಬಾರದು. ಆದರೆ, ಇದನ್ನು ಗುರ್ತಿಸುವುದು ಸುಲಭವಲ್ಲ. ಹೀಗಾಗಿ, ಸದಾಕಾಲ ಹತ್ತಿ (Cotton), ಖಾದಿ (Khadi) ಬಟ್ಟೆಗಳನ್ನು ಬಳಸುವುದರಿಂದ ಚರ್ಮದ ಅಲರ್ಜಿಯನ್ನು ದೂರ ಇಡಬಹುದು.

•    ಆಹಾರದ ಬಗ್ಗೆ ಎಚ್ಚರ (Some Foods)
ಆಹಾರವೂ ಚರ್ಮದ ಅಲರ್ಜಿ ಉಂಟುಮಾಡಬಲ್ಲದು. ಹಾಲು (Milk), ಮೀನು (Fish), ಪೀನಟ್‌, ಮೊಟ್ಟೆ (Egg), ಸೋಯಾ, ಗೋಧಿ (Wheat) ಇತ್ಯಾದಿ ಆಹಾರ ಪದಾರ್ಥಗಳು ಕೆಲವರಿಗೆ ಚರ್ಮದ ಅಲರ್ಜಿ ತರಬಲ್ಲವು. ಚರ್ಮದ ತುರಿಕೆಗೆ ಕಾರಣವಾಗಬಲ್ಲವು. ನವೆ, ಕೆಂಪಾಗಿ ಚರ್ಮ ಊದಿಕೊಂಡಂತೆ ಆಗುವುದು ಆಹಾರದಿಂದಾಗುವ ಅಲರ್ಜಿಯ ಲಕ್ಷನ. ಯಾವುದಾದರೂ ಆಹಾರ (Food) ಸೇವನೆ ಮಾಡಿದ ಬಳಿಕ ಇಂತಹ ಲಕ್ಷಣ ಹೆಚ್ಚಾದರೆ ಎಚ್ಚರ ವಹಿಸಿ ಅಂತಹ ಆಹಾರವನ್ನು ಸಂಪೂರ್ಣವಾಗಿ ವರ್ಜಿಸಬೇಕು ಅಥವಾ ಮಿತಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಕರಿದ ತಿಂಡಿಗಳ ಸೇವನೆಯಿಂದಲೂ ಮೈ ನವೆ ಕಾಣಿಸಿಕೊಳ್ಳುತ್ತದೆ. 

ಇದನ್ನೂ ಓದಿ: Russian ಮಹಿಳೆಯರ ಸೌಂದರ್ಯದ ಗುಟ್ಟು ಇಲ್ಲಿದೆ

•    ನಿಕ್ಕೆಲ್‌ (Nickel)
ನಾವು ಬಳಕೆ ಮಾಡುವ ಹಲವಾರು ವಸ್ತುಗಳಲ್ಲಿ ನಿಕ್ಕೆಲ್‌ ಇರುತ್ತದೆ. ಇದು ಸಹ ಅಲರ್ಜಿ ಉಂಟುಮಾಡಬಲ್ಲದು. ಕೃತಕ ಆಭರಣ, ಸೆಲ್‌ ಫೋನ್‌, ಬೆಲ್ಟ್‌, ಕಾಯಿನ್‌, ಕೀ, ಮೆಟಲ್‌ ವಸ್ತು ಸೇರಿದಂತೆ ಹಲವು ವಸ್ತುಗಳಲ್ಲಿ ನಿಕ್ಕೆಲ್‌ ಇರುತ್ತದೆ. ಇಂತಹ ವಸ್ತುಗಳಿಂದ ಅಲರ್ಜಿ ಉಂಟಾಗುತ್ತಿರುವುದು ಗಮನಕ್ಕೆ ಬಂದರೆ ಅವುಗಳನ್ನು ವರ್ಜಿಸಿ.

•    ಔಷಧ (Medicines)
ಕೆಲವು ಔಷಧಗಳಿಂದಲೂ ಚರ್ಮದ ಅಲರ್ಜಿ ಉಂಟಾಗುತ್ತದೆ. ಈ ಬಗ್ಗೆ ಗಮನಕ್ಕೆ ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.  
 

Follow Us:
Download App:
  • android
  • ios