ತೆಳ್ಳಗಾಗಲು ಹರ್ಬಲ್ ಹೆಸರಿನ ಜ್ಯೂಸ್ ಕುಡಿತಿದ್ದೀರಾ? ಕಿಡ್ನಿ-ಲೀವರ್ ದಾನಿಗಳನ್ನು ಈಗ್ಲೇ ಹುಡುಕಿಕೊಳ್ಳಿ! ವೈದ್ಯೆ ಹೇಳಿದ್ದೇನು?
ತೆಳ್ಳಗೆ-ದಪ್ಪಗಾಗಲು ಹರ್ಬಲ್ ಹೆಸರಿನ ಜ್ಯೂಸ್ ಕುಡಿತಿದ್ದೀರಾ? ಇದರಿಂದ ರಿಸಲ್ಟ್ ಕಂಡುಕೊಂಡಿರೋ ಖುಷಿಯಲ್ಲಿದ್ದೀರಾ? ಆದರೆ ನೀವು ಯಾವ ಹಾದಿ ತುಳಿಯುತ್ತಿದ್ದೀರಿ ಎನ್ನುವ ಬಗ್ಗೆ ಡಾ.ಮಾಲಿನಿ ಸುತ್ತೂರು ಹೇಳಿರುವುದನ್ನೊಮ್ಮೆ ಕೇಳಿ.
ಈಗ ಜನರಿಗೆ ಕಷ್ಟಪಡದೇ ಎಲ್ಲವೂ ಫಟಾಫಟ್ ಆಗಬೇಕು. ಇದನ್ನೇ ಕಾಯುತ್ತಿರುವ ಕೆಲವು ಕಂಪೆನಿಗಳು ಜನರನ್ನು ಫಟಾಫಟ್ ಆಗಿ ಸಾವಿನ ಮನೆಯ ದಾರಿಯನ್ನೂ ತೋರಿಸುತ್ತಿದ್ದಾರೆ! ಬೆಳಿಗ್ಗೆ ವಾಕಿಂಗ್ಗೆ ಹೋದಾಗ, ಇಲ್ಲದಿದ್ದರೆ ನೀವು ತೀರಾ ಸಣ್ಣಗೆ ಅಥವಾ ದಪ್ಪಗೆ ಇರುವುದನ್ನು ನೋಡಿದ ತಕ್ಷಣ, ಒಂದಷ್ಟು ಮಂದಿ ಹಾದಿ ಬೀದಿಗಳಲ್ಲಿ ಓಡೋಡಿ ಬಂದು ಇದನ್ನು ತೆಗೆದುಕೊಳ್ಳಿ, ಇದನ್ನು ಕುಡಿಯಿರಿ ಎಂದೆಲ್ಲಾ ಹೇಳುವುದು ನಿಮ್ಮ ಗಮನಕ್ಕೂ ಬಂದಿರಲಿಕ್ಕೆ ಸಾಕು. ಇಲ್ಲವೇ, ತಮ್ಮ ಹಿಂದಿನ ಸ್ಟೋರಿಯನ್ನು, ಕಣ್ಣೀರ ಕಥೆಗಳನ್ನು ಹೇಳುವ ಇವರು ಕೊನೆಗೆ ಇದನ್ನು ಕುಡಿದು ನನ್ನ ಜೀವನ ಹೇಗೆ ಸಾರ್ಥಕವಾಯಿತು, ತೆಳ್ಳಗಾಗಿ ಎಷ್ಟು ಸುಂದರವಾದೆ, ಏನೇನೋ ರೋಗಗಳು ಹೇಗೆಲ್ಲಾ ಕಡಿಮೆಯಾದವು ಎಂದು ಕಥೆಗಳನ್ನು ಹೇಳಿ ನಿಮ್ಮನ್ನು ಅತಿ ಸುಲಭದಲ್ಲಿ ಮರಳು ಮಾಡುವುದನ್ನೂ ನೋಡಿರಬಹುದು. ಹರ್ಬಲ್ ಎನ್ನುವ ಹೆಸರಿನ ಇದನ್ನು ತೆಗೆದುಕೊಂಡರೆ, ನೀವು ತೆಳ್ಳಗೆ-ದಪ್ಪಗೆ ಆಗುವುದು ಮಾತ್ರವಲ್ಲದೇ ಲಕ್ಷಾಂತರ ರೂಪಾಯಿ ಸಂಪಾದನೆಯನ್ನೂ ಮಾಡಬಹುದು, ಸೈಡ್ ಬಿಜಿನೆಸ್ ಆಗಿ ಇದನ್ನು ಮಾಡಬಹುದು ಎಂದು ನಿಮಗೂ ಯಾರಾದ್ರೂ ಹೇಳಿರಬೇಕು ಅಲ್ಲವೆ?
ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಿಂದಲೇ ಮಹಿಳೆಯರೇ ಮೋಡಿಗೆ ಒಳಗಾಗಿರಲಿಕ್ಕೂ ಸಾಕು. ಇವರ ಮಾತುಗಳನ್ನು ನಂಬಿ ಈ ಜ್ಯೂಸ್ ಮೊರೆ ಹೋಗಿದ್ದೀರಾ? ಬೆಳಗ್ಗಿನ ಬ್ರೇಕ್ಫಾಸ್ಟ್ ಸ್ಕಿಪ್ ಮಾಡಿ ಈ ಜ್ಯೂಸ್ ಕುಡಿದು ತೆಳ್ಳಗೂ ಆಗಿರಬಹುದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ದಪ್ಪವೂ ಆಗಿರಬಹುದು ಇಲ್ಲವೇ ಕೆಲವೊಂದು ಸಮಸ್ಯೆಗಳಿಂದಲೂ ಆ ಕ್ಷಣದಲ್ಲಿ ಮುಕ್ತಿ ಹೊಂದಿ, ನಿಮ್ಮ ಸ್ನೇಹಿತೆಯರಿಗೂ ಇದನ್ನು ರೆಫರ್ ಮಾಡಿರಬಹುದು. ಒಂದು ವೇಳೆ ಇದನ್ನೇ ನೀವು ಮುಂದುವರಿಸಿದ್ದೇ ಆದಲ್ಲಿ, ಶೀಘ್ರದಲ್ಲಿಯೇ ನಿಮಗೆ ಕಿಡ್ನ ಅಥವಾ ಲಿವರ್ ದಾನ ಮಾಡುವವರನ್ನು ಈಗಲೇ ಹುಡುಕಿಟ್ಟುಕೊಳ್ಳಿ ಎನ್ನುತ್ತಾರೆ ಖ್ಯಾತ ವೈದ್ಯೆಯಾಗಿರುವ ಡಾ.ಮಾಲಿನಿ ಸುತ್ತೂರು. ಗೌರೀಶ್ ಅಕ್ಕಿ ಸ್ಟುಡಿಯೋಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಹೇಳಿದ್ದಾರೆ.
ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ: ಸದ್ಗುರು ಜಗ್ಗಿ ವಾಸುದೇವ ಟಿಪ್ಸ್ ಕೇಳಿ...
ಹರ್ಬಲ್ ಎಂದಾಕ್ಷಣ ಇದು ಸಸ್ಯಗಳಿಂದ ಮಾಡಿದ್ದು ಎಂದು ನಂಬುವವರೇ ಹೆಚ್ಚು. ಆದರೆ ಈ ಜ್ಯೂಸ್ಗಳಲ್ಲಿ ಇರುವ ಮಾರಣಾಂತಿಕ ವಿಷಕಾರಿ ಅಂಶಗಳು ಕೆಲವೇ ವರ್ಷಗಳಲ್ಲಿ ನಿಮ್ಮನ್ನು ನರಳುವಂತೆ ಮಾಡಿಸುತ್ತದೆ. ಮೂತ್ರಪಿಂಡ, ಯಕೃತ್ತು ಸಮಸ್ಯೆಗಳನ್ನು ತಂದುಕೊಡುತ್ತದೆ. ಕ್ಯಾನ್ಸರ್ನಂಥ ಮಹಾಮಾರಿ ನಿಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ಇದಾಗಲೇ ಈ ಜ್ಯೂಸ್ಗಳನ್ನು ಕುಡಿದು ಆಸ್ಪತ್ರೆಗಳಲ್ಲಿ ಒದ್ದಾಡುತ್ತಿರುವ ಜನರನ್ನು ಒಮ್ಮೆ ನೋಡಿ ಎಂದು ಎಚ್ಚರಿಕೆ ನೀಡುತ್ತಾರೆ ಡಾ.ಮಾಲಿನಿ.
ಇದಾಗಲೇ ಹರ್ಬಲ್ ಹೆಸರಿನ ಇಂಥ ಪ್ರಾಡಕ್ಟ್ಗಳ ಬಗ್ಗೆ ಹಲವಾರು ತಜ್ಞರು ಎಚ್ಚರಿಕೆ ಕೊಡುತ್ತಲೇ ಬಂದಿದ್ದಾರೆ. ಆದರೆ ಇದರ ಸೇವನೆ ಮಾಡಿದ ತಕ್ಷಣ ಪರಿಣಾಮ ಕಂಡುಕೊಂಡಿರುವ ಜನರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಈ ವಿಷದ ಸೇವನೆ ಮಾಡುತ್ತಿದ್ದಾರೆ. ಜಿಮ್ ಮಾಡುವುದು ಕಷ್ಟ, ಪ್ರತಿನಿತ್ಯ ವಾಕಿಂಗ್ಗೆ ಹೋಗಲು ಟೈಮ್ ಇಲ್ಲ. ಆದ್ದರಿಂದ ಹರ್ಬಲ್ ಹೆಸರಿನ ಈ ಡ್ರಿಂಕ್ಸ್ ಕುಡಿದು ತಮ್ಮ ಅಗತ್ಯವನ್ನು ಪೂರೈಸಿಕೊಳ್ಳುತ್ತಿದ್ದಾರೆ. ಕೆಲವು ಸಮಸ್ಯೆಗಳಿಗೂ ಆ ಕ್ಷಣದಲ್ಲಿ ಪರಿಹಾರವನ್ನೂ ಪಡೆಯುತ್ತಿದ್ದಾರೆ. ಜೊತೆಗೆ, ಮತ್ತಿಷ್ಟು ಮಂದಿಗೆ ರೆಫರ್ ಮಾಡಿ ಅದರಿಂದ ಒಂದಿಷ್ಟು ಗಳಿಕೆಯನ್ನೂ ಮಾಡುತ್ತಿದ್ದಾರೆ. ಆದರೆ ಈ ಗಳಿಕೆಗೆ ಹತ್ತಾರು ಪಟ್ಟು ಹಣವನ್ನು ಕೊಟ್ಟರೂ ಆರೋಗ್ಯವನ್ನು ಸರಿಪಡಿಸಿಕೊಳ್ಳಲಾಗದ ಸ್ಥಿತಿ ಬರುತ್ತದೆ ಎನ್ನುವುದು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಡಾ.ಮಾಲಿನಿ ಹೇಳುತ್ತಾರೆ.
ಗೊತ್ತಿಲ್ದೇ ಇರೋ ಹುಡುಗಿಗೆ ತಾಳಿ ಕಟ್ತೀವಿ, ಆಗ ಪ್ರೀತಿ ಅನ್ನೋದೇ ಇರಲ್ಲ... ಜೀವನದ ಬಗ್ಗೆ ಸುದೀಪ್ ಹೇಳಿದ್ದೇನು?