ತೂಕ ಇಳಿಸಲು ತಣ್ಣೀರಿನ ಶವರ್ ಬಾತ್: ಹೇಗೆ? ಏಕೆ? ಫಿಟ್ನೆಸ್ ತಜ್ಞೆ ಶ್ವೇತಾ ಸುಲಭದ ಟಿಪ್ಸ್
ತೂಕವನ್ನು ಕಡಿಮೆ ಮಾಡಿಕೊಳ್ಳಲು ತಣ್ಣೀರಿನ ಸ್ನಾನ ಸಹಕಾರಿಯಾಗಲಿದೆ ಎಂಬ ಬಗ್ಗೆ ಫಿಟ್ನೆಸ್ ತಜ್ಞೆ ಶ್ವೇತಾ ಟಿಪ್ಸ್ ನೀಡಿದ್ದಾರೆ. ಅವರು ಹೇಳಿದ್ದೇನು?
ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಮೈಗೆ ಮನಸ್ಸಿಗೆ ಮುದ ಆಗುವುದು ಸಹಜವೇ. ಮಾತ್ರವಲ್ಲದೇ ಮೈಕೈ ನೋವನ್ನು ಕಡಿಮೆ ಆಗುತ್ತದೆ. ಆದರೆ ಆಯುರ್ವೇದದ ಪ್ರಕಾರ, ಸ್ನಾನಕ್ಕೆ ಬಿಸಿ ನೀರಿಗಿಂತಲೂ ತಣ್ಣೀರು ಒಳ್ಳೆಯದ್ದು. ತಣ್ಣೀರಿನ ಸ್ನಾನವು ತೂಕ ನಷ್ಟಕ್ಕೆ, ಖಿನ್ನತೆ, ಒತ್ತಡ, ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದೇ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ತಿಳಿಸಿರುವಂತೆ ತಣ್ಣೀರಿನ ಸ್ನಾನವು ದೇಹದ ಮೇಲೆ ಅನೇಕ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಹೃದಯ ಬಡಿತ, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ತಂಪಾದ ನೀರು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ತಣ್ಣನೆಯ ನೀರಿನ ಸ್ನಾನ ಚೈತನ್ಯ ಮತ್ತು ಜಾಗರೂಕತೆಯ ಭಾವವನ್ನು ಸೃಷ್ಟಿಸುತ್ತದೆ, ಇದು ವ್ಯಕ್ತಿಯನ್ನು ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರಲು ಪ್ರೇರೇಪಿಸುತ್ತದೆ ಎಂದು ತಿಳಿಸಿದೆ.
ಇದೀಗ ಇದೇ ವಿಷಯವನ್ನು ಫಿಟ್ನೆಸ್ ತಜ್ಞರಾದ ಶ್ವೇತಾ ಅವರೂ ವಿವರವಾಗಿ ತಿಳಿಸಿದ್ದಾರೆ. ಆ್ಯಂಕರ್ ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಕೆಲವೊಂದು ಆರೋಗ್ಯಕರ ಟಿಪ್ಸ್ಗಳನ್ನು ಹೇಳಿದ್ದಾರೆ. ಅದರಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ತಣ್ಣನೆಯ ಶವರ್ ಹೇಗೆ ಉಪಕಾರಿ ಎಂದು ಹೇಳಿದ್ದಾರೆ. ದೇಹದಲ್ಲಿ ಬ್ರೌನ್ ಫ್ಯಾಟ್ ಸೆಲ್ಸ್ ಎಂದು ಇರುತ್ತದೆ. ಅದು ಹೆಚ್ಚಾದಷ್ಟು ದೇಹದಲದ್ಲಿ ಮೆಟಪಾಲಿಸಮ್ ಹೆಚ್ಚಾಗುತ್ತದೆ. ಬ್ರೌನ್ ಫ್ಯಾಟ್ ಸೆಲ್ಸ್ ಹೆಚ್ಚು ಮಾಡಿಕೊಳ್ಳಬೇಕು. ಇದಕ್ಕೆ ಕೋಲ್ಡ್ ಶವರ್ ಪ್ರಯೋಜನಕಾರಿ ಎಂದಿದ್ದಾರೆ ಶ್ವೇತಾ. ಈ ಸೆಲ್ಸ್ ಇರುವುದು ಕತ್ತಿನ ಹಿಂಭಾಗದಲ್ಲಿ. ಅದು ಜಾಸ್ತಿಯಾಗುವುದು ನಡುಗಿದಾಗ. ಆದ್ದರಿಂದ ವೇಟ್ ಲಾಸ್ ಮಾಡಿಕೊಳ್ಳಬೇಕು ಎಂದುಕೊಳ್ಳುವವರು ವಾರಕ್ಕೊಮ್ಮೆಯಾದರೂ ಕೋಲ್ಡ್ ಶವರ್ ಮಾಡಬೇಕು. ಮೈ ನಡುಕ ಬರುವವರೆಗೆ ಅದರ ಅಡಿ ನಿಲ್ಲಬೇಕು. ಅದು ಎಷ್ಟು ಹೊತ್ತು ಬೇಕಾದರೂ ಆಗಬಹುದು. ಆದ್ದರಿಂದ ವೇಟ್ ಲಾಸ್ ಮಾಡಿಕೊಳ್ಳುವವರು ತಣ್ಣೀರಿನ ಸ್ನಾನ ಮಾಡಬೇಕು ಎನ್ನುತ್ತಾರೆ ಅವರು.
ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...
ತಣ್ಣೀರಿನ ಸ್ನಾನ ರಕ್ತದ ಹರಿವನ್ನು ಸುಧಾರಿಸಬಹುದು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಆರಂಭದಲ್ಲಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಒಂದು ಅಧ್ಯಯನದ ಪ್ರಕಾರ ವ್ಯಾಯಾಮದ ನಂತರ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಾಲ್ಕು ವಾರಗಳ ನಂತರ ಸ್ನಾಯುಗಳಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದೂ ಹೇಳಲಾಗುತ್ತದೆ.
ಅಧ್ಯಯನವೊಂದರ ಪ್ರಕಾರ ತಣ್ಣೀರು ಸ್ನಾನ ಮಾಡುವ ಜನರು ಅನಾರೋಗ್ಯಕ್ಕೆ ತುತ್ತಾಗುವುದು ಕಡಿಮೆ ಎಂದು ಹೇಳಲಾಗುತ್ತದೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನರಮಂಡಲಕ್ಕೆ ಕೂಡ ಇದು ಒಳ್ಳೆಯದು ಎನ್ನಲಾಗಿದೆ. ಇದು ನೋರಾಡ್ರೆನಲಿನ್ ಹಾರ್ಮೋನ್ ಹೆಚ್ಚಾಗಲು ಕಾರಣವಾಗುತ್ತದೆ. ಈ ಹಾರ್ಮೋನ್ ಹೃದಯ ಬಡಿತ ಮತ್ತು ರಕ್ತದ ವೇಗವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯವನ್ನು ಸಂಪೂರ್ಣವಾಗಿ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..