ಒಮಿಕ್ರೋನ್‌ನ ಉಪತಳಿ ಬಿಎಫ್‌.7 ಹೊಸದಾಗಿ ಪತ್ತೆಯಾದ ತಳಿಯೇನೂ ಅಲ್ಲ. ಜೊತೆಗೆ ಈ ಉಪತಳಿ ಕಾಣಿಸಿಕೊಂಡ 91 ದೇಶಗಳ ಪೈಕಿ ಎಲ್ಲೂ ಇದು ಅನಾಹುತ ಸೃಷ್ಟಿಸಿಲ್ಲ. ಹೀಗಾಗಿ ಭಾರತದಲ್ಲಿ ಇದೀಗ ಈ ಉಪತಳಿ ಕುರಿತು ಹೆಚ್ಚಿನ ಆತಂಕ ಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಪುಣೆ: ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಸ್ಫೋಟಕ್ಕೆ ಕಾರಣವಾದ ಒಮಿಕ್ರೋನ್‌ನ ಉಪತಳಿ ಬಿಎಫ್‌.7 ಹೊಸದಾಗಿ ಪತ್ತೆಯಾದ ತಳಿಯೇನೂ ಅಲ್ಲ. ಇದು ಎರಡು ವರ್ಷಗಳ ಹಿಂದೆಯೇ ಕಾಣಿಸಿಕೊಂಡು ಈಗಾಗಲೇ ವಿಶ್ವದ 91 ದೇಶಗಳಲ್ಲಿ ಪತ್ತೆಯಾಗಿದೆ. 2021ರ ಫೆಬ್ರವರಿಯಲ್ಲಿ ಮೊದಲು ಕಾಣಿಸಿಕೊಂಡ (ಸುಮಾರು 2 ವರ್ಷ ಹಿಂದೆ) ಈ ಉಪತಳಿ ನಂತರ ವಿವಿಧ ದೇಶಗಳಲ್ಲಿ ಪತ್ತೆಯಾಗಿದೆ. ಆದರೆ ಇದುವರೆಗೂ ಜಿನೋಮ್‌ ಸೀಕ್ವೆನ್ಸಿಂಗ್‌ ವೇಳೆ ಖಚಿತಪಟ್ಟಪ್ರಕರಣಗಳ ಸಂಖ್ಯೆ 47881 ಮಾತ್ರ ಎಂದು ಅಂಕಿ ಅಂಶಗಳು ಹೇಳಿವೆ. ಜೊತೆಗೆ ಈ ಉಪತಳಿ ಕಾಣಿಸಿಕೊಂಡ 91 ದೇಶಗಳ ಪೈಕಿ ಎಲ್ಲೂ ಇದು ಅನಾಹುತ ಸೃಷ್ಟಿಸಿಲ್ಲ. ಹೀಗಾಗಿ ಭಾರತದಲ್ಲಿ ಇದೀಗ ಈ ಉಪತಳಿ ಕುರಿತು ಹೆಚ್ಚಿನ ಆತಂಕ ಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಆತಂಕ ಬೇಡ- ಬೆಂಗಳೂರು ವಿಜ್ಞಾನಿ: ಈ ನಡುವೆ, ಬಿಎಫ್‌.7ನಿಂದ ಭಾರತಕ್ಕೆ ಹೆಚ್ಚಿನ ಆತಂಕ ಇಲ್ಲ. ಆದರೆ ಕೋವಿಡ್‌ ನಿಯಮಗಳನ್ನು ನಿರ್ಲಕ್ಷಿಸಬಾರದು ಅಷ್ಟೇ ಎಂದು ಬೆಂಗಳೂರಿನ ಖ್ಯಾತ ವಿಜ್ಞಾನಿ ಡಾ. ರಾಕೇಶ್‌ ಮಿಶ್ರಾ ಹಾಗೂ ವೈರಾಣು ತಜ್ಞೆ ಗಗನ್‌ದೀಪ್‌ ಕಾಂಗ್‌ ಹೇಳಿದ್ದಾರೆ. ಈ ಮೂಲಕ ಮತ್ತೊಂದು ಅಲೆಯ ಆತಂಕದಲ್ಲಿದ್ದ ಜನತೆಗೆ ಭರವಸೆಯ ಅಭಯ ನೀಡಿದ್ದಾರೆ.

ಮೂಗಿನ ಲಸಿಕೆ ಬೂಸ್ಟರ್‌ ಡೋಸ್‌ಗೆ ಕೇಂದ್ರ ಅಸ್ತು..!

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಡಾ.ಕಾಂಗ್‌ ಹಾಗೂ ‘ಟಾಟಾ ಇನ್‌ಸ್ಟಿಟ್ಯೂಟ್‌ ಫಾರ್‌ ಜೆನೆಟಿಕ್ಸ್‌ ಆ್ಯಂಡ್‌ ಸೊಸೈಟಿಯ’ (ಟಿಐಜಿಎಸ್‌) ನಿರ್ದೇಶಕ ಡಾ. ರಾಕೇಶ್‌ ಮಿಶ್ರಾ ‘ಚೀನಾದಲ್ಲಿ ಈಗ ಸೋಂಕು ಹರಡಲು ಕಾರಣವಾದ ಪರಿಸ್ಥಿತಿಯೇ ಬೇರೆ. ಆದರೆ ನಾಗರಿಕರು ಅನಗತ್ಯವಾಗಿ ಹೆಚ್ಚಿನ ಸಂದಣಿ ಇರುವ ಪ್ರದೇಶಕ್ಕೆ ತೆರಳುವುದು ಸೂಕ್ತವಲ್ಲ ಮತ್ತು ಮಾಸ್‌್ಕ ಧರಿಸುವುದು ಮುಂಜಾಗ್ರತಾ ಕ್ರಮವಾಗಿ ಅವಶ್ಯ’ ಎಂದು ಹೇಳಿದ್ದಾರೆ.

ಆತಂಕ ಏಕಿಲ್ಲ?
ಬಿಎಫ್‌.7 ಎಂಬುದು ಒಮಿಕ್ರೋನ್‌ನ ಉಪತಳಿ. ಕೆಲವು ಸಣ್ಣಪುಟ್ಟಬದಲಾವಣೆ ಹೊರತುಪಡಿಸಿದರೆ ಹೊಸ ತಳಿ ಬಹುತೇಕ ಒಮಿಕ್ರೋನ್‌ ಹೋಲುತ್ತದೆ. ಬಹುತೇಕ ಭಾರತೀಯರು ಈಗಾಗಲೇ ಒಮಿಕ್ರೋನ್‌ ಅಲೆಯನ್ನು ಪಾರಾಗಿ ಬಂದಿದ್ದಾರೆ. ಜೊತೆಗೆ ಬಹುತೇಕ ಭಾರತೀಯರು ಹೈಬ್ರಿಡ್‌ ಇಮ್ಯುನಿಟಿ ಪಡೆದುಕೊಂಡಿದ್ದಾರೆ. ಅಂದರೆ ಸೋಂಕಿನ ವಿರುದ್ಧ ಲಸಿಕೆ ಪಡೆಯುವುದರ ಮೂಲಕ ಲಭ್ಯವಾದ ರೋಗ ನಿರೋಧಕ ಶಕ್ತಿ ಮತ್ತು ನೈಸರ್ಗಿಕವಾಗಿ ಹಬ್ಬಿದ ಸೋಂಕಿನ ಬಳಿಕ ಅಭಿವೃದ್ಧಿಯಾದ ರೋಗ ನಿರೋಧಕ ಶಕ್ತಿಯ ಲಾಭವನ್ನೂ ಪಡೆದಿದ್ದಾರೆ. ಅಲ್ಲದೆ ಭಾರತದಲ್ಲಿ ಕೋವಿಡ್‌ ವಿರುದ್ಧ ನೀಡಲಾದ ಲಸಿಕೆಗಳು ಕೂಡಾ ಉತ್ತಮವಾಗಿದ್ದು, ಒಮಿಕ್ರೋನ್‌ನ ವಿವಿಧ ಉಪತಳಿಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಶಕ್ತಿ ಹೊಂದಿವೆ. ಈ ವರ್ಷದ ಆರಂಭದಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಒಮಿಕ್ರೋನ್‌ ಅಲೆ ಕಾಣಿಸಿಕೊಂಡಾಗಲೂ ಭಾರತದಲ್ಲಿ ಸೋಂಕು ಹೆಚ್ಚಿನ ಪರಿಣಾಮ ಬೀರಲಿಲ್ಲ. ಆಸ್ಪತ್ರೆ ದಾಖಲಾತಿ ಮತ್ತು ಸಾವು ಭಾರೀ ಕಡಿಮೆ ಇತ್ತು. ಹೀಗಾಗಿ ಭಾರತೀಯರಿಗೆ ಬಿಎಫ್‌.7 ಅಷ್ಟುಅಪಾಯಕಾರಿಯಾಗದು ಎಂದು ಡಾ.ಮಿಶ್ರಾ ಹೇಳಿದ್ದಾರೆ.

Corona Virus: ಕೋವಿಡ್‌ ಸೋಂಕಿಗೆ ರುಚಿ ಮತ್ತು ವಾಸನೆಯ ನಷ್ಟವಾಗೋದು ಯಾಕೆ ?

ಚೀನಾದಲ್ಲಿ ಏನಾಯ್ತು?
ಚೀನಿಯರು ಭಾರತೀಯರು ಎದುರಿಸಿದಷ್ಟುಅಲೆಯನ್ನು ಎದುರಿಸಿಲ್ಲ. ಚೀನಾ ಮೊದಲಿನಿಂದಲೂ ಕೋವಿಡ್‌ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಪ್ರದರ್ಶಿಸಿತು. ಹೀಗಾಗಿ ಒಂದು ಕೇಸು ಪತ್ತೆಯಾದರು ಕೋಟ್ಯಂತರ ಜನರನ್ನು ಲಾಕ್ಡೌನ್‌ಗೆ ಒಳಪಡಿಸಿತು. ಈ ಹಂತದಲ್ಲಿ ಜನರಿಗೆ ನೈಸರ್ಗಿಕವಾಗಿ ಸೋಂಕು ತಗುಲಿ ಅದರಿಂದ ಲಭ್ಯವಾಗಬಹುದಾದ ರೋಗ ನಿರೋಧಕ ಶಕ್ತಿ ಸಿಗಲಿಲ್ಲ. ಮತ್ತೊಂದೆಡೆ ವೃದ್ಧರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವುದು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಇದೀಗ ವೃದ್ಧರೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಸೋಂಕಿನ ತೀವ್ರತೆ ಹೆಚ್ಚಿದ್ದು, ಭಾರೀ ವೇಗವಾಗಿ ಹಬ್ಬುತ್ತಿದೆ ಎಂದು ಡಾ. ರಾಕೇಶ್‌ ಮಿಶ್ರಾ ಹೇಳಿದ್ದಾರೆ.

ಜೊತೆಗೆ ಇನ್ನು ಕೆಲವು ತಜ್ಞರು, ಜನರನ್ನು ಶೂನ್ಯ ಸಹಿಷ್ಣು ವಾತಾವರಣದಿಂದ ಏಕಾಏಕಿ ಮುಕ್ತ ವಾತಾವರಣಕ್ಕೆ ಬಿಟ್ಟಿದ್ದು ಮತ್ತು ಚೀನಾದಲ್ಲಿ ನೀಡಲಾಗುತ್ತಿರುವ ದೇಶೀಯ ಕೋವಿಡ್‌ ಲಸಿಕೆಯ ಸಾಮರ್ಥ್ಯ ಅಷ್ಟುಇಲ್ಲದಿರುವುದು ಕೂಡಾ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.