ಹಿರೇಕೆರೂರು[ನ.3]: ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮದಿಂದ ತಾಲೂಕ ಗಡಿ ಕೋಡಮಗ್ಗಿ ಗ್ರಾಮದ ಮೂಲಕ ಹಾದು ಹೋಗಿರುವ 766 ಸಿಸಿ ಸಂಖ್ಯೆಯ ರಾಣಿಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡದಂತಹ ಗುಂಡಿಗಳು ಬಿದ್ದು ಪ್ರಯಾಣಿಕರು ಸಂಚರಿಸದಂತಹ ಪರಿಸ್ಥಿತಿ ಎದುರಾಗಿದೆ.

ರಾಣಿಬೆನ್ನೂರು ನಗರದಿಂದ ಬೈಂದೂರು ನಗರವನ್ನು ಸಂಪರ್ಕಿಸುವ 270 ಕಿ.ಮೀ. ಉದ್ದದ 766ಸಿ ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿ ರಟ್ಟೀಹಳ್ಳಿ ತಾಲೂಕಿನ ದೊಡ್ಡಗುಬ್ಬಿ, ರಟ್ಟೀಹಳ್ಳಿ, ಹಿರೇಮೊರಬ, ಮಾಸೂರು, ತಿಪ್ಪಾಯಿಕೊಪ್ಪ ಹಾಗೂ ಕೋಡಮಗ್ಗಿ ಗ್ರಾಮಗಳ ಮಾರ್ಗವಾಗಿ ಹಾದು ಹೋಗಿದೆ. ಆದರೆ ಸಮರ್ಪಕವಾಗಿ ಹೆದ್ದಾರಿ ದುರಸ್ತಿ ಕಾರ್ಯಗಳು ಆಗದೆ ಇರುವುದರಿಂದ ಮಾಸೂರು, ತಿಪ್ಪಾಯಿಕೊಪ್ಪ, ಕೋಡಮಗ್ಗಿ ಹಾಗೂ ತಾಲೂಕಿನ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಉದ್ದಗಲಕ್ಕೂ ಹೊಂಡದಾಕಾರದ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಈ ಹೆದ್ದಾರಿ ವಾಣಿಜ್ಯ ರಸ್ತೆಯಾಗಿರುವುದರಿಂದ ಪ್ರತಿನಿತ್ಯಇಲ್ಲಿ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಹೀಗೆ ಸಂಚಾರ ಮಾಡುವ ಪ್ರಯಾಣಿಕರ ವಾಹನಗಳು ಸೇರಿದಂತೆ ದ್ವಿಚಕ್ರ ಸವಾರರು, ಆಟೋ, ಗೂಡ್ಸ್‌ ವಾಹನಗಳು, ಲಾರಿ, ಬಸ್‌, ಟ್ರ್ಯಾಕ್ಟರ್‌ ಮುಂತಾದ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೆದ್ದಾರಿಗಳಲ್ಲಿ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಬೈಕ್‌ ಸವಾರರು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ. ಬಸ್ಸುಗಳು, ಲಾರಿಗಳು, ಇಲ್ಲಿ ಪ್ರತಿನಿತ್ಯ ಅಪಘಾತಕ್ಕೀಡಾಗುತ್ತಿವೆ. ಈ ಅಪಘಾತಗಳಿಂದ ಸಾವು-ನೋವುಗಳು ಸಂಭವಿಸಿವೆ. ಅನೇಕರು, ಕೈ- ಕಾಲುಗಳನ್ನು ಕಳೆದುಕೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಈ ಹೆದ್ದಾರಿ ಮೇಲೆ ಪ್ರಯಾಣಿಸುವ ಪ್ರಯಾಣಿಕರು ಜೀವ ಕಳೆದುಕೊಳ್ಳುವಂತಾಗಿದೆ.

ಜಿಲ್ಲಾ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ನಂತರ ಕಾಲಕಾಲಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ತಿಪ್ಪಾಯಿಕೊಪ್ಪ, ಮಾಸೂರು ಗ್ರಾಮಸ್ಥರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆದ್ದಾರಿಯಲ್ಲಿ ದೊಡ್ಡದೊಡ್ಡ ಗುಂಡಿಗಳು ಬಿದ್ದಿವೆ. ರಸ್ತೆಯಲ್ಲಿ ಸಂಚಾರ ಮಾಡಲು ಭಯವಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಹೆದ್ದಾರಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಹೆದ್ದಾರಿ ಪ್ರಯಾಣದ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಸೂರಿನ ಬೈಕ್‌ ಸವಾರ  ಶಂಭುಗೌಡ ಪಾಟೀಲ್‌ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎನ್‌.ಎಂ. ಕುಲಕರ್ಣಿ ಅವರು,   ಹೆದ್ದಾರಿಯಲ್ಲಿ ಈಗಾಗಲೇ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಟೆಂಡರ್‌ ಕರೆಯಲಾಗಿದೆ. ಇನ್ನು ವರ್ಕ್ ಆರ್ಡರ್‌ ದೊರೆತಿಲ್ಲ. ಮಳೆ ಕಡಿಮೆಯಾದ ತಕ್ಷಣ ಹೆದ್ದಾರಿ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)