ಗುತ್ತಲ[ಅ.25]: ತುಂಬಿದ ವರದಾ ನದಿಯಲ್ಲಿ ಕಾಲು ಜಾರಿಬಿದ್ದು ಯುವಕನೋರ್ವ ಮುಳುಗುತ್ತಿದ್ದ ವೇಳೆ ಆತನನ್ನು ರಕ್ಷಿಸಲು ಹೋದ ವೃದ್ದನೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಸಮೀಪದ ಹಂದಿಗನೂರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಹಂದಿಗನೂರ ಗ್ರಾಮದ ಪ್ರಶಾಂತ ಸೋಮಪ್ಪ ಕೊಂಚಿಗೇರಿ (18) ಹಾಗೂ ಪರಮೇಶಪ್ಪ ಕಮ್ಮಾರ(62) ಎಂದು ಗುರ್ತಿಸಲಾಗಿದೆ.

ಬೆಳಗ್ಗೆ ಎತ್ತುಗಳು ಮೈಯನ್ನು ತೊಳೆಯಲು ನದಿಗೆ ತೆರಳಿದ್ದ ಪ್ರಶಾಂತ ಕೊಂಚಿಗೇರಿ ಕಾಲು ಜಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಪರಮೇಶಪ್ಪ ಕಮ್ಮಾರ ಕಾಪಾಡಲು ಮುಂದಾಗಿದ್ದಾನೆ. ಈ ವೇಳೆ ಪ್ರವಾಹದಿಂದಾ ಗಿನದಿಯಲ್ಲಿ ಕೆಸರು ಹಾಗೂ ಮುಳ್ಳುಗಳು ಪ್ರಾಣ ರಕ್ಷಣೆಗೆ ತೊಡಕಾಗಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಗ್ನಿಶಾಮಕ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞರು ಮೂರು ಗಂಟೆಗಳ ನಿರಂತರ ಹುಡುಕಾಟದ ನಂತರ ಶವಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಗೆ ಆಗಮಿಸಿದ್ದ ಎನ್‌ಡಿಆರ್‌ಎಫ್ ತಂಡ ಸಿದ್ಧತೆ ಮಾಡಿಕೊಂಡು ಇನ್ನೇನು ನದಿಗೆ ಇಳಿಯಬೇಕು ಎನ್ನುಷ್ಟರಲ್ಲಿಯೇ ಈಜು ತಜ್ಞರು ಎರಡೂ ಶವಗಳನ್ನು ನದಿಯಿಂದ ಹೊರಗಡೆ ತಂದರು.

ತಹಸೀಲ್ದಾರ್ ಶಂಕರ ಬಾರ್ಕಿ, ಪಿಎಸ್‌ಐ ಶಂಕರಗೌಡ ಪಾಟೀಲ್, ಎಎಸ್‌ಐ ಎಂ.ಕೆ.ಸೊರಟೂರ, ಪಿಡಿಒ ಸಿ.ಎಂ. ರೂಢಗಿ, ಉಪತಹಸೀಲ್ದಾರ್ ಅಪ್ಪಿನಕೊಪ್ಪ, ಗ್ರಾಮಲೆಕ್ಕಿಗ ಬಿ.ವಿ.ನಂದಿ, ಚನ್ನಬಸಪ್ಪ ಸಂಶಿ ಸೇರಿದಂತೆ ಸಾವಿರಾರು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.