‘ಸಿಎಂ ಯಡಿಯೂರಪ್ಪಗೆ ಅವರ ಪಕ್ಷದಲ್ಲಿಯೇ ಬೆಂಬಲ ಇಲ್ಲ’

ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್‌ ಆದೇಶ ಕಾನೂನು ಬದ್ಧ ಎಂದ ಕೋಳಿವಾಡ| ಸುಪ್ರೀಂ ಕೋರ್ಟ್‌ ಕೆಲವೇ ದಿನಗಳಲ್ಲಿ ತೀರ್ಪು ನೀಡಲಿದೆ| ಸಾಂವಿಧಾನಿಕ ಪೀಠಕ್ಕೆ ಅಥವಾ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಸಾಧ್ಯತೆ|ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ರಾಜ್ಯ ಕಾಂಗ್ರೆಸ್‌ ಪಕ್ಷದ ಎರಡು ಕಣ್ಣುಗಳಿದ್ದಂತೆ|

Some BJP MLA's Not Support to CM Yediyurappa

ಹಾವೇರಿ[ನ.3]: ಶಾಸಕರ ಅನರ್ಹತೆ ವಿಚಾರದಲ್ಲಿ ಹಿಂದಿನ ಸ್ಪೀಕರ್‌ ರಮೇಶ ಕುಮಾರ್‌ ಅವರ ನಿರ್ಣಯ ಕಾನೂನು ಬದ್ಧವಾಗಿದೆ. ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಕೆಲವೇ ದಿನಗಳಲ್ಲಿ ತೀರ್ಪು ನೀಡಲಿದ್ದು, ಸಾಂವಿಧಾನಿಕ ಪೀಠಕ್ಕೆ ಅಥವಾ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ ಎಂದು ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರು ಅಭಿಪ್ರಾಯ ಪಟ್ಟಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಸ್ಪೀಕರ್‌ ಆಗಿ ತಮ್ಮ ಅನುಭವದ ಪ್ರಕಾರ ಶಾಸಕರ ಅನರ್ಹತೆಗೊಳಿಸುವ ಸ್ಪೀಕರ್‌ ಆದೇಶ ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ವಕೀಲರಾದ ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಕೋರ್ಟ್‌ ನಿರ್ಣಯವನ್ನು ಎಲ್ಲರೂ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ:

ಬಿಜೆಪಿಯಲ್ಲಿ ಆಂತರಿಕ ಕಲಹ ಶುರುವಾಗಿದ್ದು ಅವರಲ್ಲಿ ಒಗ್ಗಟ್ಟಿಲ್ಲ. ಒಳಗೊಳಗೆ ಅಸಮಾಧಾನ ಭುಗಿಲೆದ್ದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವರ ಪಕ್ಷದಲ್ಲಿಯೇ ಹಲವರ ಬೆಂಬಲ ಇಲ್ಲ. ಅವರಿಗೆ ಬಿಜೆಪಿ ಹೈಕಮಾಂಡ್‌ ಕೂಡ ಸಾಥ್‌ ನೀಡುತ್ತಿಲ್ಲ. ಇದನ್ನು ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಮುಂದೇನಾಗುತ್ತೋ ಎಂಬುದರ ಬಗ್ಗೆ ಸಂಶಯವಿದೆ. ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಧೋರಣೆ ಇಲ್ಲ. ಹಾಗಾಗಿ ಅವರಿಗೆ ಸಹಕಾರ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು 100 ದಿನಗಳಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಆಗಿಲ್ಲ. 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಕನಿಷ್ಠ 8 ಕ್ಷೇತ್ರದಲ್ಲಿ ಗೆದ್ದರೆ ಸರ್ಕಾರ ಉಳಿಯಬಹುದು. ಇದೊಂದು ಜನಾದೇಶ ಇಲ್ಲದ ಸರ್ಕಾರವಾಗಿದೆ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ರಾಜ್ಯ ಕಾಂಗ್ರೆಸ್‌ ಪಕ್ಷದ ಎರಡು ಕಣ್ಣುಗಳಿದ್ದಂತೆ. ನಮ್ಮಲ್ಲಿ ಮೊದಲು ಭಿನ್ನಾಭಿಪ್ರಾಯವಿತ್ತು. ಸಿದ್ದರಾಮಯ್ಯನವರ ವಿರುದ್ಧ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಆದರೆ, ಭಿನ್ನಾಭಿಪ್ರಾಯಗಳೆಲ್ಲ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದ್ದು ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಉಪಚುನಾವಣೆಗೆ ಸ್ಪರ್ಧಿಸಲು ತಮಗೆ ಟಿಕೆಟ್‌ ನೀಡಿದ್ದಾರೆ. ಕ್ಷೇತ್ರದಲ್ಲಿ ಆರ್‌. ಶಂಕರ್‌ ಶಾಸಕರಾಗಿದ್ದಾಗಿನ ಕಾರ್ಯವೈಖರಿ ನೋಡಿ ಜನರಿಗೆ ಪಶ್ಚಾತ್ತಾಪವಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲಿನ ನಡೆ ನನಗೆ ಈ ಉಪಚುನಾವಣೆಯಲ್ಲಿ ಕೈಹಿಡಿಯಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಮೆಡಿಕಲ್‌ ಕಾಲೇಜು ಸ್ಥಾಪನೆಗೆ ತಮ್ಮ ಸರ್ಕಾರದ ಅವಧಿಯಲ್ಲಿಯೇ ದೇವಗಿರಿಯಲ್ಲಿ ಸ್ಥಳ ನಿಗದಿಯಾಗಿದೆ. ಕಾಲೇಜಿನ ಹೆಸರಿನಲ್ಲಿ ಉತಾರ್‌ ಕೂಡ ಆಗಿದೆ. ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾದಿಂದ ಅನುಮೋದನೆಯೂ ಸಿಕ್ಕಿದೆ. ಈಗ ಉದ್ಘಾಟನೆಯೊಂದೇ ಬಾಕಿ ಇರುವಾಗ ಸ್ಥಳೀಯ ಶಾಸಕರು ನೆಲೋಗಲ್ಲ ಗುಡ್ಡದಲ್ಲಿ ಮೆಡಿಕಲ್‌ ಕಾಲೇಜು ಮಾಡುವುದಾಗಿ ಹೇಳುತ್ತಿದ್ದಾರೆ. ಅಲ್ಲಿ ಕ್ರಷರ್‌ಗಳಿದ್ದು, ಕಾನೂನಿನ ಪ್ರಕಾರ ಲೀಸ್‌ ಪಡೆದಿವೆ. ಅಲ್ಲಿ ಮಾಡಿದರೆ ಮೆಡಿಕಲ್‌ ಕಾಲೇಜು ಸ್ಥಾಪನೆ ವಿಳಂಬವಾಗಬಹುದು ಎಂದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮೆಡಿಕಲ್‌ ಕಾಲೇಜು ಎಲ್ಲಾದರೂ ಆಗಲಿ ಜಿಲ್ಲೆಯಲ್ಲಿಯೇ ಆಗಲಿ. ಸ್ಥಳ ಗೊಂದಲ ಏರ್ಪಟ್ಟು ವಿಳಂಬವಾಗಬಾರದು. ಒಟ್ಟಿನಲ್ಲಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂದರು.

ಮಾಯಕೊಂಡ ಕ್ಷೇತ್ರದ ಮಾಜಿ ಶಾಸಕ ಶಿವಮೂರ್ತಿ ಮಾತನಾಡಿ, 2017ರಲ್ಲಿ ರಾಷ್ಟ್ರಪತಿ ಅಂಕಿತ ಹಾಕಿದ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆ ಅನುಷ್ಠಾನ ಮಂದಗತಿಯಲ್ಲಿ ಸಾಗಿದ್ದು ಸರ್ಕಾರ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಕೋರಿದರು.
 

Latest Videos
Follow Us:
Download App:
  • android
  • ios