ಹಿರೇಕೆರೂರು(ಅ.29): ನೆರೆ​ಯಿಂದಾಗಿ ಸಂಕಷ್ಟ ಎದು​ರಿ​ಸು​ತ್ತಿ​ರು​ವ​ ಕುಟುಂಬ​ದ​ವ​ರಿಗೆ ಎನ್‌ಡಿಆರ್‌ಎಫ್‌ ನಿಧಿಯಿಂದ ನೀಡುವ ಹಣ ಸಾಲುತ್ತಿಲ್ಲ. ಸ​ರ್ಕಾರ ಕೂಡಲೇ ಈ ನಿಯಮವನ್ನು ಕೈ ಬಿಟ್ಟು ವಿಶೇಷ ಯೋಜನೆಯಡಿಯಲ್ಲಿ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಲಾಗುವುದು ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಹೇಳಿ​ದ​ರು.

ಅವರು ಹಿರೇಕೆರೂರು ಪಟ್ಟಣದ ಸುಣ್ಣದ ಕಾಲುವೆಯಲ್ಲಿ ಅ. 21 ರಂದು ನೀರು ನೋಡಲು ಹೋದ ಸಂದ​ರ್ಭ​ದಲ್ಲಿ ಕೊಚ್ಚಿ ಹೋಗಿ ಮೃತ​ಪ​ಟ್ಟಿದ್ದ ಬಾಲಕನ ಮನೆಗೆ ಭೇಟಿ ನೀಡಿ ನಂತರ ಪ್ರವಾಸಿ ಮಂದಿ​ರ​ದಲ್ಲಿ ಸುದ್ದಿಗಾರರೊಂದಿಗೆ ಮಾತ​ನಾ​ಡಿ​ದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈತರು ಬಯಸುವ ರೀತಿಯಲ್ಲಿ ಪರಿಹಾರವನ್ನು ನೀಡಲು . 3 ರಿಂದ 4.5 ಸಾವಿರ ಕೋಟಿ ಬೇಕಾಗುತ್ತದೆ. ಇದು ಸರ್ಕಾ​ರಕ್ಕೆ ಏನು ದೊಡ್ಡ ಹಣವಲ್ಲ, ದೂರ ದೃಷ್ಟಿಯ ಯೋಜನೆ ಮೂಲಕ ಪರಿಹಾರ ನೀಡಬೇಕು. ಸಾಲ ಮನ್ನಾ ಹಣ ಕೆಲವೊಂದು ರೈತರ ಖಾತೆಗಳಿಗೆ ಜಮಾ ಆಗಿಲ್ಲ ಎಂಬ ಮಾತು ಸಹ ಕೇಳಿ ಬಂದಿದ್ದು ಕೂಡಲೇ ಹಿರಿಯ ಅಧಿಕಾರಗಳ ಜೊತೆ ಮಾತನಾಡಿ ಬಗೆಹರಿಸಲಾಗುವುದು. ರೈತರ ಶ್ರಯೊಭಿವೃದ್ಧಿಯೇ ನನ್ನ ಮುಖ್ಯ ಗುರಿಯಾಗಿ​ದೆ.

ಹಾವೇರಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಹಾಗೂ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಹಾನಿಗೊಳಗಾದ 13 ಜಿಲ್ಲೆಗಳಲ್ಲಿ ಹಾವೇರಿಯೂ ಸಹ ಒಂದು. ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರು ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾ​ರ​ದಿಂದ ನೀಡು​ತ್ತಿರುವ ಹಣ ಸಾಲುತ್ತಿಲ್ಲ ಇದರಿಂದ ನಾವು ಮೊದಲಿನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಸುಮಾರು 24 ಹಳ್ಳಿಗಳನ್ನು ಪುನರ್‌ ವಸತಿಗಾಗಿ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆಯನ್ನು ಸಹ ಸಾರ್ವಜನಿಕರು ಇಟ್ಟಿದ್ದಾರೆ. 17 ಹಳ್ಳಿಗಳಲ್ಲಿ ತಡೆ ಗೊಡೆಗಳ ನಿರ್ಮಾಣ ಆಗಬೇಕಿದೆ.

ಹಿರೇಕೆರೂರು ಹಾಗೂ ರಟೀಹಳ್ಳಿ ತಾಲೂಕುಗಳಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಪಾರ ಪ್ರಮಾಣದ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಬೆಳೆದು ನಿಂತ ಬೆಳೆಗಳು ಕೈಗೆ ಬಾರದೇ ದೀಪಾವಳಿ ಸಮಯದಲ್ಲಿ ರೈತರ ಬಾಳು ಕತ್ತಲಲ್ಲಿ ಮುಳುಗಿದಂತಾಗಿದೆ. ಸರ್ಕಾರ ಕೂಡಲೇ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ಪರಿಹಾರ ಹಣವನ್ನು ನೀಡುವ ಕಾರ್ಯವನ್ನು ಶೀಘ್ರಗತಿಯಲ್ಲಿ ಮಾಡಬೇಕಿದೆ ಎಂದರು.

ತಹ​ಸೀ​ಲ್ದಾರ್‌ ಆರ್‌.ಎಚ್‌. ಭಾಗವಾನ, ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರದ, ರಜಿಯಾ ಸಾಧಿ, ಫೀರಹಮ್ಮದ ಬೇವಿನಹಳ್ಳಿ, ಬಸವಗೌಡ ಸಿದ್ದಪ್ಪಗೌಡರ, ಮುಖೇಶ ಅಗಸಿಬಾಗಿಲು, ಎಂ.ಬಿ. ಸಾವಜ್ಜಿ, ಸಿದ್ದನಗೌಡ ಪಾಟೀಲ, ಚಂದ್ರು ಜೋಗಿಹಳ್ಳಿ, ಮಹೇಶ ಕೊಟ್ಟೂರ, ಮನೋಹರ ಗಿರಣಿ, ಉಜನೆಪ್ಪ ಕೋಡಿಹಳ್ಳಿ, ಶೋಭಾ ಚಕ್ರಸಾಲಿ, ಸಾವಿತ್ರಾ ಮಾರವಳ್ಳಿ, ಮೆಹಬೂಬ ರಟ್ಟೀಹಳ್ಳಿ, ಶಂಷಾದ ಕುಪ್ಪೇಲೂರ, ನಾಗರಾಜ ಮತ್ತಿಹಳ್ಳಿ ಇತರರಿದ್ದರು.

ತಾಲೂಕಿನಲ್ಲಿ ರಾಜಕಾಣ ಮಾಡಲು ನಾನು ಬಂದಿಲ್ಲ. ನಾನು ರೈತರ ಸಂಕಷ್ಟಆಲಿಸಲು ಬಂದಿದ್ದೇನೆ. ರಾಜಕೀಯ ಮಾಡಲು ಚುನಾವಣೆ ಸಂದರ್ಭದಲ್ಲಿ ಬರುತ್ತೇನೆ. ನಮ್ಮ ಪಕ್ಷದಿಂದ ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿಯನ್ನು ಹಾಕಲಾಗುವುದು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.