ಹಾವೇರಿ[ಅ.31]: ಕಳೆದ ಕೆಲ ದಿನಗಳ ಬಳಿಕ ಜಿಲ್ಲೆಯಲ್ಲಿ ಬಿಸಿಲು ಮೂಡಿದೆ. ನಿರಂತರವಾಗಿ ಹೊಯ್ದ ಮಳೆಯಿಂದ ಕಟಾವು ಮಾಡಿದ್ದ ಬೆಳೆಗಳನ್ನು ಒಣಗಿಸಲಾಗದೇ ಪರದಾಡುತ್ತಿದ್ದ ರೈತರು ಈಗ ಎಲ್ಲೆಡೆ ರಸ್ತೆಯನ್ನೇ ಕಣವಾಗಿಸಿಕೊಂಡಿದ್ದಾರೆ. ಮಳೆ ನೀರಿಗೆ ಸಿಲುಕಿದ್ದ ಬೆಳೆಯನ್ನು ಒಣಗಿಸಲು ಹರಸಾಹಸ ಪಡುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ಮೆಕ್ಕೆಜೋಳ, ಸೋಯಾಬೀನ್‌, ಶೇಂಗಾ, ಈರುಳ್ಳಿ ಕಟಾವು ಆರಂಭವಾಗಿದೆ. ಆದರೆ, ಈ ಮಧ್ಯೆ ವಾರಗಳ ಕಾಲ ನಿರಂತರವಾಗಿ ಮಳೆಯಾದ್ದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಹೊಲದಲ್ಲಿಯೇ ಪೈರು ಕೊಳೆಯುತ್ತಿರುವುದು ಒಂದು ಕಡೆಯಾದರೆ, ಕಟಾವು ಮಾಡಿದ್ದ ಬೆಳೆಯನ್ನು ಒಣಗಿಸಲಾಗದೇ ತೊಂದರೆ ಪಡುವಂತಾಗಿತ್ತು. ಸೋಮವಾರದಿಂದ ಜಿಲ್ಲೆಯಲ್ಲಿ ಬಿಸಿಲು ಮನೆ ಮಾಡಿರುವುದು ರೈತರಿಗೆ ಕಾಳುಕಡಿಗಳನ್ನು ಒಣಗಿಸಲು ಅನುಕೂಲಕರ ವಾತಾವರಣ ಕಲ್ಪಿಸಿದೆ. ಆದರೆ, ರೈತರು ರಸ್ತೆಯನ್ನೇ ಕಣವನ್ನಾಗಿ ಮಾಡಿಕೊಂಡಿರುವುದರಿಂದ ವಾಹನ ಸವಾರರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ.

ಕೃಷಿ ಇಲಾಖೆಯು ರೈತರಿಗೆ ವೈಯಕ್ತಿಕ ಕಣ ಹಾಗೂ ಸಾಮೂಹಿಕ ಕಣ ನಿರ್ಮಾಣಕ್ಕೆ ಸೌಲಭ್ಯ ಕಲ್ಪಿಸುತ್ತಿದ್ದರೂ ಅದರ ಪ್ರಯೋಜನ ಹೆಚ್ಚಿನ ರೈತರು ಪಡೆಯುತ್ತಿಲ್ಲ. ಪಡೆದರೂ ಪ್ರವಾಹದಿಂದ ಕಣಗಳು ಹಾಳಾಗಿವೆ. ಮೆಕ್ಕೆಜೋಳ, ಶೇಂಗಾ, ಹೆಸರು, ಸೋಯಾ ಮುಂತಾದ ಬೆಳೆಗಳ ಕಾಳು ಬಿಡಿಸಲು ಮತ್ತು ಒಣ ಹಾಕಲು ರಸ್ತೆಯನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕಣವಾಗಿವೆ ಗ್ರಾಮೀಣ ರಸ್ತೆಗಳು:

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಆಗಸ್ಟ್‌ನಲ್ಲಿ ಬಿದ್ದ ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಒಣ ಬೇಸಾಯದ ಜಮೀನುಗಳಲ್ಲಿದ್ದ ಬೆಳೆ ಉಳಿದುಕೊಂಡಿದ್ದವು. ಈಗ ಅವುಗಳ ಕಟಾವು ನಡೆದಿದೆ. ರಾಣಿಬೆನ್ನೂರು ಭಾಗದಲ್ಲಿ ಈರುಳ್ಳಿ, ಶಿಗ್ಗಾಂವಿ, ಹಾವೇರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೆಕ್ಕೆಜೋಳ ಕಟಾವು ನಡೆದಿದೆ. ಆದರೆ, ಮಳೆಯಿಂದ ಹೊಲದಲ್ಲಿಯೇ ರಾಶಿ ಹಾಕಿಟ್ಟಿದ್ದ ರೈತರಿಗೆ ಒಣಗಿಸಲು ಅವಕಾಶವೇ ಸಿಕ್ಕಿರಲಿಲ್ಲ.

ಈಗ ಮಳೆ ನಿಂತಿದ್ದು, ಬಿಸಿಲು ಮೂಡಿದೆ. ಕಟಾವು ಮಾಡಿದ ತೆನೆಯನ್ನು ರಸ್ತೆ ಮಧ್ಯೆಯೇ ರಾಶಿ ಹಾಕಿಡಲಾಗುತ್ತಿದೆ. ತೆನೆಯಿಂದ ಕಾಳು ಬಿಡಿಸಿ ರಸ್ತೆ ಪೂರ್ತಿ ಹರಡಿ ಒಣಗಿಸಲಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ರಸ್ತೆಗಳಂತೂ ವಾಹನ ಸಂಚಾರ ಮಾಡಲು ಜಾಗವಿಲ್ಲದಂತೆ ಬೆಳೆ ಒಣಗಿಸಲಾಗುತ್ತಿದೆ. ಒಂದೊಂದು ಕಡೆ ಅರ್ಧ ಕಿಮೀ ಉದ್ದದವರೆಗೂ ಜೋಳ ಒಣಗಿಸಲಾಗುತ್ತಿದೆ. ಕೆಲವು ಕಡೆ ದ್ವಿಚಕ್ರ ವಾಹನ ಹೋಗುವಷ್ಟುಜಾಗ ಬಿಟ್ಟು ಬೆಳೆ ಒಣಗಿಸಲಾಗುತ್ತಿದೆ. ರಾತ್ರಿ ವೇಳೆ ಕಾಳು ಒಣಗಿಸುವುದು ಗೊತ್ತಾಗದೇ ಅನೇಕ ವಾಹನಗಳು ಅಪಘಾತಕ್ಕೀಡಾದ ಉದಾಹರಣೆಗಳೂ ಇವೆ.

ಹಾನಗಲ್ಲ ತಡಸ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯ ಸವೀರ್‍ಸ್‌ ರಸ್ತೆ, ಬಂಕಾಪುರ ಸವಣೂರು ರಸ್ತೆ, ರಾಣಿಬೆನ್ನೂರು ಹಿರೇಕೆರೂರು ರಸ್ತೆ, ಬ್ಯಾಡಗಿ ಮೋಟೆಬೆನ್ನೂರು, ಕಾಗಿನೆಲೆ ಹಂಸಭಾವಿ ರಸ್ತೆ ಸೇರಿದಂತೆ ಹಳ್ಳಿಗಳನ್ನು ಸಂಪರ್ಕಿಸುವ ಬಹುತೇಕ ಎಲ್ಲ ರಸ್ತೆಗಳೂ ಬೆಳೆ ಕಟಾವು ಆರಂಭವಾಗುತ್ತಿದ್ದಂತೆ ರೈತರ ಒಕ್ಕಣೆ ಕಣಗಳಾಗಿ ಮಾರ್ಪಡುತ್ತಿವೆ.

ರೈತರಿಗೆ ಅನಿವಾರ್ಯ:

ಜೋರಾಗಿ ಬರುವ ಕಾರ್‌, ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಎತ್ತರಕ್ಕೆ ಹರಡಿಟ್ಟಿರುವ ಬೆಳೆ ರಾಶಿ ಮೇಲೆ ಹೋಗಿ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸಿದ ಘಟನೆ ಅನೇಕ ಬಾರಿ ನಡೆದಿವೆ. ವಾಹನ ಸವಾರರು ಆತಂಕದಲ್ಲೇ ಗಾಡಿ ಓಡಿಸುವಂತಾಗಿದೆ. ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಈ ಪದ್ಧತಿಯನ್ನು ರೈತರು ಬಿಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೂ ಪ್ರಸ್ತುತ ಸಂದರ್ಭದಲ್ಲಿ ರೈತರಿಗೆ ತುರ್ತಾಗಿ ಬೆಳೆ ಒಣಗಿಸುವ ಅನಿವಾರ್ಯತೆಯಿದೆ. ಈಗಾಗಲೇ ಮಳೆಗೆ ಸಿಲುಕಿದ ಬೆಳೆ ತಕ್ಷಣ ಒಣಗಿಸಿ ಕಾಳು ಬೇರ್ಪಡಿಸದಿದ್ದರೆ ಮತ್ತಷ್ಟುನಷ್ಟಅನುಭವಿಸಬೇಕಾಗುತ್ತದೆ. ರೈತ ಕಣಗಳೆಲ್ಲ ಹಾಳಾಗಿವೆ. ಆದ್ದರಿಂದ ರೈತರು ರಸ್ತೆ ಮೇಲೆಯೇ ಒಣಗಿಸುತ್ತಿದ್ದಾರೆ.

ಹಂಸಭಾವಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೀವಗಿಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಸೂರ್ಯಕಾಂತಿ ಬೆಳೆ ಒಕ್ಕಲು ಮಾಡಲು ರಸ್ತೆಯ ಮೇಲೆ ಹಾಕಿರುವಾಗ ವಾಹನ ಅಪಘಾತ ಸಂಭವಿಸಿ ಮೂರು ಜನರು ಮೃತಪಟ್ಟಿರುವ ಘಟನೆ ನಡೆದಿತ್ತು. ಆದ್ದರಿಂದ ಸಂಚಾರ ಸುರಕ್ಷತೆ ಬಗ್ಗೆಯೂ ಸಂಬಂಧಪಟ್ಟವರು ಗಮನಹರಿಸಬೇಕಿದೆ.

ಹಲವು ದಿನಗಳ ಬಳಿಕ ಈಗ ಜಿಲ್ಲೆಯಲ್ಲಿ ಬಿಸಿಲು ಬಂದಿರುವುದರಿಂದ ರೈತರು ರಸ್ತೆಯನ್ನೇ ಕಣವಾಗಿಸಿಕೊಂಡು ಕಟಾವು ಮಾಡಿದ ಬೆಳೆ ಒಕ್ಕಲು ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸರ್ವೀಸ್ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಸಂಚಾರವೇ ಕಷ್ಟಕರವಾಗಿದೆ. ಆದ್ದರಿಂದ ಪೊಲೀಸ್‌ ಇಲಾಖೆ ಗಮನ ಹರಿಸಬೇಕು. ಅಲ್ಲದೇ ನೆರೆ ಹಾವಳಿಯಿಂದ ತೊಂದರೆಯಲ್ಲಿರುವ ರೈತರಿಗೂ ಒಕ್ಕಣೆಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮಣ್ಣೂರು ಗ್ರಾಮಸ್ಥ ಶಿವಪ್ಪ ಅರಳಿ  ಅವರು ತಿಳಿಸಿದ್ದಾರೆ.