'ಮಾಜಿ ಸಿಎಂ ಕುಮಾರಸ್ವಾಮಿಯಿಂದ ಉತ್ತರ ಕರ್ನಾಟಕ ನಿರ್ಲಕ್ಷ್ಯ'
ಕಾಂಕ್ರೀಟ್ ರಸ್ತೆ, ಕಾಲುವೆ ನಿರ್ಮಾಣಕ್ಕೆ ಶಾಸಕ ಬಳ್ಳಾರಿ ಚಾಲನೆ|ದಕ್ಷಿಣ ಕರ್ನಾಟಕದ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು ಎಂದ ಶಾಸಕ ಬಳ್ಳಾರಿ|
ಬ್ಯಾಡಗಿ[ನ.13]: ಕಳೆದ ಒಂದೂವರೆ ವರ್ಷಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸಿದ ದುರಾಡಳಿತದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಾಗಿತ್ತು. ದಕ್ಷಿಣ ಕರ್ನಾಟಕದ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಆರೋಪಿಸಿದ್ದಾರೆ.
ಅವರು ತಾಲೂಕಿನ ಖುರ್ದಕೋಡಿಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 1.39 ಕೋಟಿ ವೆಚ್ಚದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿಅನುಷ್ಠಾನಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಮತ್ತು ಕಾಲುವೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ 28 ಜಿಲ್ಲೆಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬಿಜೆಪಿ ಎಂದರೆ ಅಭಿವೃದ್ಧಿ ಎಂಬುದನ್ನು ಕೇವಲ 3 ತಿಂಗಳಲ್ಲಿ ಸಾಬೀತು ಪಡಿಸಿದ್ದಾರೆ. ಅತೀವೃಷ್ಟಿ ಪರಿಹಾರಕ್ಕೆ ಕೇಂದ್ರದಿಂದ 1200 ಕೋಟಿ ಬಿಡುಗಡೆಯಾಗಿದ್ದು, ಜಿಲ್ಲೆಯ ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತದ ಮೂಲಕ ಪರಿಹಾರ ವಿತರಿಸಲಾಗುತ್ತಿದೆ ಎಂದರು.
ಎಸ್‌ಸಿಎಸ್‌ಟಿ ವರ್ಗದ ಜನರು ವಾಸವಿರುವ ತಾಲೂಕಿನ ಮೋಟೆಬೆನ್ನೂರ ಜಿಪಂ ವ್ಯಾಪ್ತಿಯ ಖುರ್ದಕೋಡಿಹಳ್ಳಿ ಗ್ರಾಮದಲ್ಲಿ 15 ಲಕ್ಷ, ಗುಂಡೇನಹಳ್ಳಿಯಲ್ಲಿ 25 ಲಕ್ಷ, ಕೆಂಗೊಂಡದಲ್ಲಿ 15 ಲಕ್ಷ, ಅರಬಗೊಂಡದಲ್ಲಿ 20 ಲಕ್ಷ ಅಳಲಗೇರಿಯಲ್ಲಿ 15 ಲಕ್ಷ, ಬುಡಪನಹಳ್ಳಿಯಲ್ಲಿ20 ಲಕ್ಷ ಹಾಗೂ ಅಂಗರಗಟ್ಟಿಯಲ್ಲಿ 29 ಲಕ್ಷ ವೆಚ್ಚದಲ್ಲಿ ಕಾಲನಿಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂಕಾಲುವೆಗಳ ನಿರ್ಮಾಣಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷಕರೇ ಗೌಡ್ರ, ಗ್ರಾಪಂ ಅಧ್ಯಕ್ಷೆ ರೇಣವ್ವ ಭರಡಿ, ಅಕ್ಕಮ್ಮಓಲೇಕಾರ, ಮುಖಂಡರಾದ ಶಿವಬಸಪ್ಪ ಕುಳೇನೂರ,ಶಿವಪ್ಪ ಹರಮಗಟ್ಟಿ, ಸುರೇಶ ಯತ್ನಳ್ಳಿ, ನಾಗಪ್ಪಯತ್ನಳ್ಳಿ, ತಂಗೌಡ್ರ, ತಿರಕಪ್ಪ ಮರಬಸಣ್ಣನವರ,ಚಂದ್ರಪ್ಪ ಗುಡಗೂರ, ದ್ಯಾಮನಗೌಡ್ರ ಪಾಟೀಲ, ಖಂಡೆಪ್ಪ ಹಾದಿಮನಿ, ಗೋಪಾಲ ಗುಡಿಹಿಂದಲ,ಶಿವಪುತ್ರಪ್ಪ ಎಂಜಿನಿಯರ್‌ಗಳಾದ ಆನಂದ ದೊಡ್ಡಮನಿ, ಕೆ. ರಾಜಪ್ಪ, ಎ.ಎಸ್. ಪಾಟೀಲ, ಗುತ್ತಿಗೆದಾರರಾದ ಪುಟ್ಟನಗೌಡ್ರ ಪಾಟೀಲ, ಸುಭಾಸ ಮಾಳಗಿ, ಬಶೀರಹ್ಮದ ತಳಗೇರಿ, ಈರಪ್ಪ ಮರಬಸಣ್ಣನವರ, ಗೋವಿಂದ ಪೂಜಾರ, ಹನುಮಂತಪ್ಪ ಹಾದಿಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.