ಹಿರೇಕೆರೂರು[ನ.6]: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಒಂಥರಾ ಊಸರವಳ್ಳಿ ಇದ್ದ ಹಾಗೆ, ಅಧಿಕಾರಕ್ಕಾಗಿ ಹೇಗೆ ಬೇಕಾದರೂ ಬಣ್ಣ ಬದಲಾಯಿಸುತ್ತಾರೆ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಯಾವಾಗ ಯಾವ ತರಹ ಬಣ್ಣ ಬದಲಾಯಿಸುತ್ತಾರೋ ಗೊತ್ತಿಲ್ಲ. ಅವರು ಇಸ್ಪೀಟ್‌ ಆಟದಲ್ಲಿ ಜೋಕರ್‌ ಇದ್ದಂತೆ ಯಾವ ಕಡೆ ಆಟ ಆಗುತ್ತೋ ಆ ಕಡೆಗೆ ತಿರುಗುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಕೂಲಿಗಳಂತೆ ಬಳಸಿದರು:

ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಇಡೀ ವ್ಯವಸ್ಥೆಯಿಂದ ಸರ್ಕಾರ ಬಿದ್ದಿದೆ. ಮೈತ್ರಿ ಸರ್ಕಾರದ ಆಡಳಿತದಲ್ಲಿ ಕುಮಾರಸ್ವಾಮಿ, ಡಿಕೆಶಿ, ಗುಂಡೂರಾವ್‌ಗೆ ಮಾತ್ರ ಸೀಮಿತವಾಗಿತ್ತು. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಅಧಿಕಾರ ಇರಲಿಲ್ಲ. ಕಾಂಗ್ರೆಸ್‌ನಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಏಕೈಕ ಶಾಸಕನಾಗಿದ್ದರಿಂದ ಪಕ್ಷ ಸಂಘಟನೆ ದೃಷ್ಟಿಯಿಂದ ಮಂತ್ರಿ ಮಾಡಬೇಕಿತ್ತು. ರಾಜಕೀಯಕ್ಕೆ ಬಂದ ಮೇಲೆ ಎಲ್ಲರಿಗೂ ಅಧಿಕಾರ ಬೇಕು ಎಂಬುದಿರುತ್ತದೆ. ಆದರೆ, ನಮಗೆಲ್ಲ ಅನ್ಯಾಯ ಆಗಿದ್ದರಿಂದ ಪಕ್ಷ ಬಿಟ್ಟು ಬಂದಿದ್ದೇವೆ. ದಿನೇಶ್‌ ಗುಂಡೂರಾವ್‌ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್‌ ಸ್ಥಿತಿ ಏನಾಗಿದೆ ನೋಡಿಕೊಳ್ಳಬೇಕು. ಅವರಿಗೆ ಗ್ರೌಂಡ್‌ ರಿಯಾಲಿಟಿ ಗೊತ್ತಿಲ್ಲ. ನಾನು 10 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ನಮ್ಮನ್ನೆಲ್ಲ ಕೂಲಿಗಳಂತೆ ಬಳಸಿಕೊಂಡರು ಎಂದು ಹರಿಹಾಯ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುಪ್ರೀಂ ಕೋರ್ಟ್‌ನಲ್ಲಿ ಯಡಿಯೂರಪ್ಪ ಆಡಿಯೋ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ಆಡಿಯೋ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ತೆಗೆದುಕೊಂಡಿದೆ. ಯಡಿಯೂರಪ್ಪನವರಿಗೂ ನಮಗೂ ಸಂಬಂಧವಿಲ್ಲ. ನಾವು ಅವರನ್ನು ಪಾರ್ಟಿ (ಎದುರುದಾರರು) ಮಾಡಿಲ್ಲ. ನಾವು ಪಾರ್ಟಿ ಮಾಡಿದ್ದು ಸ್ಪೀಕರ್‌ ಅವರನ್ನು. ಸ್ಪೀಕರ್‌ ಆದೇಶದಿಂದ ಅನ್ಯಾಯವಾಗಿದೆ ಎಂದು ಕೋರ್ಟಿಗೆ ಹೋಗಿದ್ದೇವೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಅದಕ್ಕೂ ಮುನ್ನ ಯಾರಾರ‍ಯರು ಏನೇನೋ ಮಾತನಾಡಿದರೆ ನಮಗೇನು ಸಂಬಂಧ? ಅದೆಲ್ಲ ಪುರಾವೆ ಆಗುತ್ತಾ? ರಾಜಕೀಯ ಗಿಮಿಕ್‌ಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಮಾಡುತ್ತಿರುವ ನಾಟಕ ಇದು ಎಂದು ಬಿ.ಸಿ. ಪಾಟೀಲ ತಿರುಗೇಟು ನೀಡಿದರು.