ಹಾವೇರಿ: ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ

ನಗರದಲ್ಲಿ ಒತ್ತುವರಿಗೊಂಡಿರುವ ರಾಜ ಕಾಲುವೆಗಳನ್ನು ತೆರವುಗೊಳಿಸಲು ಬಿಜೆಪಿ ಮುಖಂಡ ಬಾಬುಸಾಬ್‌ ಮೊಮಿನಗಾರ ಒತ್ತಾಯ| ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಕೆರೆ, ಚರಂಡಿಗಳನ್ನು ದುರಸ್ತಿಗೊಳಿಸಲು ಒತ್ತಾಯ|  

BJP Leader Babusab Momingar Demand to Clearance Sewage in Haveri

ಹಾವೇರಿ(ಅ.26): ನಗರದಲ್ಲಿ ಒತ್ತುವರಿಗೊಂಡಿರುವ ರಾಜ ಕಾಲುವೆಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಕೆರೆ, ಚರಂಡಿಗಳನ್ನು ದುರಸ್ತಿಗೊಳಿಸುವಂತೆ ಬಿಜೆಪಿ ಮುಖಂಡ ಬಾಬುಸಾಬ್‌ ಮೊಮಿನಗಾರ ಅವರು ಒತ್ತಾಯಿಸಿದ್ದಾರೆ. 

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾವೇರಿ ನಗರ ಜಿಲ್ಲಾ ಕೇಂದ್ರವಾಗಿದ್ದರೂ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬರುತ್ತಿದೆ. ನಗರದಲ್ಲಿರುವ ರಾಜ ಕಾಲುವೆ, ಕೆರೆ, ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಕೆಲ ಪ್ರಭಾವಿ ವ್ಯಕ್ತಿಗಳು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಬಹಳ ತೊಂದರೆಯಾಗಿ ನಗರದ ವಿವಿಧ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಕಳೆದ 10-15 ವರ್ಷಗಳಿಂದ ಈ ಸಮಸ್ಯೆ ಎದುರಾಗುತ್ತಿದ್ದು, ನಗರದ ಸೌಂದರ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಾವೇರಿಯ ವಿದ್ಯಾನಗರದ ಪಶ್ಚಿಮ ಬಡಾವಣೆ, ಶಿವಾಜಿನಗರ, ಅಶ್ವಿನಿ ನಗರ, ಹಾನಗಲ್ಲ ರೋಡ್‌, ಪೊಲೀಸ್‌ ವಸತಿ ನಿಲಯಗಳಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ರಾಜ ಕಾಲುವೆ ಮೂಲಕ ನೀರು ಹರಿದು ಹೋಗಿ ಅಕ್ಕಮಹಾದೇವಿ ಹೊಂಡ ಹಾಗೂ ಹೆಗ್ಗೇರಿ ಕೆರೆ ಸೇರುತ್ತದೆ. ಅದೇ ರೀತಿ ಇಜಾರಿಲಕಮಾಪುರದಲ್ಲಿಯೂ ಒಂದು ಕೆರೆ ಇದ್ದು ಅಲ್ಲಿ ಸಹ ರಾಜ ಕಾಲುವೆ ನಿರ್ಮಿಸಲಾಗಿದೆ. ಆದರೆ, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜ ಕಾಲುವೆಗಳನ್ನು ದುರಸ್ತಿಗೊಳಿಸದ ಪರಿಣಾಮ ನಗರದ ಕೆಲವು ಪ್ರಭಾವಿ ವ್ಯಕ್ತಿಗಳು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಕಾಲುವೆ ಇದ್ದ ಸ್ಥಳದಲ್ಲಿ ಮನೆ, ಅಂಗಡಿ, ಕಾಂಪ್ಲೆಕ್ಸ್‌ ನಿರ್ಮಿಸಿಕೊಂಡಿದ್ದಾರೆ ಎಂದು ದೂರಿದರು.

ನಗರದಲ್ಲಿದ್ದ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಮಳೆಗಾಲದಲ್ಲಿ ಕಾಲುವೆ ಮೂಲಕ ನೀರು ಹರಿದು ಹೋಗುವ ಬದಲು ರಸ್ತೆ, ಮನೆಗಳು ಹಾಗೂ ಅಂಗಡಿಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಇದರಿಂದ ನಗರದ ಸಾರ್ವಜನಿಕರ ಜೀವನ ದುರಸ್ತಗೊಂಡಿದ್ದು, ಕೂಡಲೇ ನಗರದಲ್ಲಿರುವ ರಾಜ ಕಾಲುವೆಗಳನ್ನು ಸರ್ವೇ ಮಾಡಿಸಿ ಒತ್ತುವರಿಗೊಂಡಿರುವ ಕಾಲುವೆಗಳನ್ನು ತೆರವುಗೊಳಿಸುವಂತೆ ಶಾಸಕರಿಗೆ, ನಗರಸಭೆಗೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವರಾಜ ಮತ್ತಿಹಳ್ಳಿ, ಶಿವಯೋಗಿ ಹುಲಿಕಂತಿಮಠ, ಜಗದೀಶ ಮಲಗೋಡ, ನಂಜುಂಡೇಶ ಕಳ್ಳೇರ, ಅಡವಯ್ಯ ಯಲವಗಿಮಠ, ಜಗದೀಶ ಕನವಳ್ಳಿ, ನಜೀರ ನದಾಫ ಇತರರು ಇದ್ದರು.
 

Latest Videos
Follow Us:
Download App:
  • android
  • ios