ಹಾಸನ [ಅ.08]:   ಪ್ರಸಿದ್ಧ ಅಧಿದೇವತೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲು ಇನ್ನೆಷ್ಟುಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಆದರೆ, ನಗರದ ಬಹುತೇಕ ರಸ್ತೆಗಳು ಹದಗೆಟ್ಟಿದ್ದರೆ, ಇನ್ನು ಕೆಲವಡೆ ಕಸದ ರಾಶಿಗಳು ತುಂಬಿ ತುಳುಕುತ್ತಿವೆ.

ಕೇವಲ ದೇವಾಲಯದ ಆವರಣವನ್ನೆ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ, ಬೇರೆ ಬೇರೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಇರುವ ಕಸದ ರಾಶಿಗಳು ಬರುವ ಭಕ್ತರಿಗೆ ಸ್ವಾಗತ ಮಾಡಲು ಸಜ್ಜಾಗಿವೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತಿದೆ ಹಾಸನಾಂಬ ಜಾತ್ರಾತೋತ್ಸವದ ಸಿದ್ಧತಾ ಕಾರ್ಯಗಳು. ತಿಂಗಳ ಮುಂಚೆಯೇ ಸಿದ್ಧತಾ ಕಾರ್ಯ ನಡೆಸುವುದನ್ನು ಬಿಟ್ಟು, ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗುತ್ತಿದ್ದಾಗ ಸಿದ್ಧತೆ ನಡೆಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ರಸ್ತೆ ದುರಸ್ತಿ ಕಾರ್ಯ, ಕಸದ ವಿಲೇವಾರಿ ಕಾರ್ಯಗಳು ನಡೆಯುತ್ತಿವೆಯಾದರೂ ದಿನ ಬಿಟ್ಟು ದಿನ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳ ದುರಸ್ತಿ ಕಾರ್ಯಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿ ವರ್ಷಕ್ಕೊಮ್ಮೆ ಹಾಸನಾಂಬ ಬಾಗಿಲು ತೆಗೆದು ಲಕ್ಷಾಂತರ ಮಂದಿಗೆ ದರ್ಶನ ನೀಡುವ ತಾಯಿಗೆ ಭಕ್ತಾದಿಗಳಿಂದ ಕಾಣಿಕೆ ರೂಪದಲ್ಲಿ ಕೋಟ್ಯಂತರ ರು. ಆದಾಯ ತಂದುಕೊಡುತ್ತದೆ.

ಹಾಸನಾಂಬ ದೇವಾಲಯ ಎಂದರೇ ಹಾಸನಕ್ಕೆ ಒಂದು ಕಿರೀಟವಿದ್ದಂತೆ. ಭಕ್ತರು ಹಾಸನ ಜಿಲ್ಲೆಯಲ್ಲದೇ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಜನರು ಬಂದು ದೇವಿ ದರ್ಶನ ಪಡೆದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿಗೆ ಬರುವ ಭಕ್ತಾದಿಗಳಿಗೆ ಯಾವ ಸೌಲಭ್ಯಗಳಿಲ್ಲ.

ಉತ್ತಮವಾಗಿದ್ದ ಬಿ.ಎಂ.ಟಾರ್‌ ರಸ್ತೆಯನ್ನು ಕಿತ್ತಾಕಿ ಕಾಂಕ್ರೀಟ್‌ ರಸ್ತೆ ಮಾಡುವುದಾಗಿ, ವರ್ಷ ಕಳೆದರೂ ಪೂರ್ಣಗೊಳ್ಳದೆ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಪ್ರತಿನಿತ್ಯ ವಾಹನ ಚಾಲಕರು ಈ ಭಾಗದಲ್ಲಿ ಚಲಿಸಬೇಕಾದರೇ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ. ಇನ್ನು ಅಮೃತ ಯೋಜನೆಯ ನೀರು ಸರಬರಾಜು ಮಾಡುವ ಪೈಪ್‌ ಲೈನ್‌ ಕಾಮಗಾರಿ ಕೂಡ ಬರೋಬರಿ ಒಂದು ವರ್ಷವೇ ಕಳೆದಿದೆ.

ಹೊಸಲೈನ್‌ ರಸ್ತೆ ಸೇರಿದಂತೆ ಇತರೆ ನಾನಾ ರಸ್ತೆಯಲ್ಲಿ ಗುಂಡಿ ತೆಗೆದು ಈಗ ಈ ಭಾಗದಲ್ಲಿ ವಾಹನ ಸಂಚಾರ ಮಾಡದಷ್ಟುಹಾಳಾಗಿದೆ. ಮಳೆ ಬಂತೆಂದರೇ ಸಾಕು ಕೆಸರು ಗದ್ದೆಯ ಅನುಭವವಾಗುತ್ತದೆ. ಅದೇಷ್ಟೊವಾಹನ ಚಾಲಕರು ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇವರೆಡೆ ರಸ್ತೆ ಮಾತ್ರ ಹಾಳಾಗಿರುವುದಿಲ್ಲ. ಉಳಿದ ರಸ್ತೆ ಕೂಡ ಅವ್ಯವಸ್ಥೆಯಿಂದ ಕೂಡಿದೆ.

ಕಸ ಕೊಂಡೂಯ್ಯುವ ಆಪೆ ಆಟೋ ಕೆಲ ದಿನಗಳು ಮಾತ್ರ ಸದ್ದು ಮಾಡಿ ಹಾಗೇ ಸದ್ದು ಕೇಳಿಸದಾಗೆ ವಾಪಸ್‌ ಹೋಗಿದೆ. ಕೆಲ ವಾರ್ಡ್‌ಗಳಲ್ಲಿ ಮಾತ್ರ ಕಸದ ಆಪೆ ಆಟೋಗಳು ಕಾಣಿಸಿಕೊಂಡರೇ ಉಳಿದ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡಲು ಆಟೋಗಳಿಲ್ಲ. ಇದರಿಂದ ನಿವಾಸಿಗಳು ತಮ್ಮ ಮನೆ ಕಸವನ್ನು ರಸ್ತೆ ಬದಿ ಒಂದು ಕಡೆ ಎಸೆಯುವ ಪ್ರವೃತ್ತಿ ರೂಪಿಸಿಕೊಂಡಿದ್ದಾರೆ.

ಇಷ್ಟೊಂದು ಸಮಸ್ಯೆ

ಕಸ ಸಂಗ್ರಹಿಸುವ ನಗರಸಭೆ ಟ್ರ್ಯಾಕ್ಟರ್‌ ಕೂಡ ಪ್ರತಿನಿತ್ಯ ಬರುವುದಿಲ್ಲ. ಅವರಿಗೆ ಇಷ್ಟಬಂದಾಗೆ ಬಂದು ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಸನಾಂಬ ಬಾಗಿಲು ತೆಗೆಯಲು ಇನ್ನು ಕೇಲವ 10 ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಸನಾಂಬ ಬಾಗಿಲು ತೆಗೆಯುವ ಅಲ್ಪ ಸಮಯದಲ್ಲಿ ಇಷ್ಟೊಂದು ಕೆಲಸವನ್ನು ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಮಾಡಲು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ. ಇಷ್ಟೊಂದು ಸಮಸ್ಯೆಯನ್ನು ತಾತ್ಕಾಲಿಕವಾಗಿ ತೇಪೆ ಹಾಕುವ ಕೆಲಸ ಮಾಡಿ ಕೆಲಸ ಪೂರ್ಣವಾಗಿದೆ ಎಂದು ನಾಟಕದ ಕೆಲಸ ಮಾಡುತ್ತಾರಾ ಕಾದು ನೋಡಬೇಕಾಗಿದೆ.