ಕೊಣನೂರು [ನ.06]:  ಇಲ್ಲೊಬ್ಬ ಇದ್ದ ಪೊಲೀಸ್ ನೌಕರಿ ತ್ಯಜಿಸಿ, ಕೃಷಿ ಕಡೆ ಮುಖ ಮಾಡಿ ತಮ್ಮ ಜಮೀನಿ ನಲ್ಲಿ 20 ಕ್ಕೂ ಅಧಿಕ ಬೆಳೆ ಬೆಳೆಯುವ ಜೊತೆಗೆ, ಸಾವಯವ ಕೃಷಿಗೆ ಒತ್ತು ನೀಡುತ್ತಿರುವ ರೈತರೊಬ್ಬರು 2019 ರ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪಡೆದುಕೊಂಡರು.

ಹೋಬಳಿಯ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ತಮಗಿರುವ 12 ಎಕರೆ ಜಮೀನಿನಲ್ಲಿ ಸುಮಾರು 20ಕ್ಕೂ ಅಧಿಕ ಬೆಳೆ ಬೆಳೆಯುವ ನವೀನ್‌ ಕುಮಾರ್, ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಮಣ್ಣಿನ ಫಲವತ್ತತೆಗಾಗಿ ಕಾಂಪೋಸ್ಟ್ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವಾಗಿ ಸೆಣಬು ಬೆಳೆದು ಭೂಮಿಯ ಫಲವತ್ತತೆ ಹೆಚ್ಚಿಸಿ ಕೊಂಡಿದ್ದಾರೆ.

ಮಲ್ಲಿಗೆ, ಸೇವಂತಿಗೆ ಹೂ ಬೆಳೆಸುತ್ತಿದ್ದು, ಜೇನು ಹುಳು ಸಾಕಣೆ ಮಾಡುತ್ತಿ ದ್ದಾರೆ. 12 ಎಕರೆ ಪ್ರದೇಶದಲ್ಲಿ ಐದು ಪೆಟ್ಟಿಗೆಯಲ್ಲಿ ಹುಳು ಸಾಕಣೆ ಮಾಡುತ್ತಿದ್ದಾರೆ. ಕೃಷಿ ಹೊಂಡದಲ್ಲಿ ಮೀನು ಸಾಕಣೆ, 25 ಮೇಕೆ, 10 ಹಸು, 20ಕ್ಕೂ ಅಧಿಕ ನಾಟಿ ಕೋಳಿ ಸಾಕಣೆ ಮಾಡಿದ್ದಾರೆ. ಕಣಿವೆ ಮೇಲೆ ಅರಣ್ಯ ಗಿಡಗಳಾದ ಸಾಗುವಾನಿ, ಸಿಲ್ವರ್ ಒಕ್, ಹೆಬ್ಬೇವನ್ನು ನೆಟ್ಟಿದ್ದಾರೆ .ಯುವ ರೈತ ನವೀನ್‌ಗೆ ಪ್ರಾಣಿ ಸಾಕಣೆಯು ಮೆಚ್ಚಿನ ವಿಷಯವಾಗಿದ್ದು, ಮನೆ ಮುಂದೆ ತಂಬಾಕು ಬ್ಯಾರಲ್ಮನೆ ಸುತ್ತ ಮುತ್ತಲಿನ ಸ್ಥಳವನ್ನು ಪ್ರಾಣಿಪಕ್ಷಿ ಸಾಕಣೆಗೆ ಮೀಸಲಿಟ್ಟಿದ್ದಾರೆ. ಸದ್ಯ ಬಾತುಕೋಳಿ,  ಟರ್ಕಿ ಕೋಳಿಗಳು, ನಾಟಿ ಕೋಳಿಗಳು, ನರಿ, ವಿವಿಧ ಜಾತಿಯ ಪಕ್ಷಿಗಳನ್ನು ಮತ್ತು ತಮ್ಮ ಜಮೀನಿನ ಒಂದೆಡೆ ಮೀನು ಸಾಕಣೆ ಮಾಡಿದ್ದಾರೆ.

ಹಸುಗಳ ಸಾಕಣೆಯನ್ನು ಉಪಕಸುಬಾಗಿ ಮುನ್ನಡೆಸುತ್ತಿದ್ದು, ಉತ್ತಮ ಆದಾಯಗಳಿಸುತ್ತಿದ್ದಾರೆ. ಹಸು, ಕೋಳಿ ಮತ್ತು ಮೀನುಗಳಿಗೆ ನೈಸರ್ಗಿಕ ಅಹಾರ ವಾಗಿ ಅಜೋಲಾ ಬೆಳೆಯುತ್ತಿದ್ದು, ಹಸುಗಳ ಸಗಣಿಯಿಂದ ಗೋಬರ್ ಗ್ಯಾಸ್ ಅಳವಡಿಸಿಕೊಂಡಿದ್ದು, ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಗತಿಪರ ರೈತನಾಗಿ ಮುನ್ನಡೆಯುತ್ತಿದ್ದಾರೆ. ಪದವಿ ಪಡೆದಿರುವ ನವೀನ್ 2007ರಲ್ಲಿ ಪೊಲೀಸ್ ಇಲಾಖೆಯಲ್ಲಿ
ನೌಕರಿಗೆ ಆಯ್ಕೆಯಾಗಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದನ್ನು ತ್ಯಜಿಸಿ ಕೃಷಿ ಕಡೆಗೆ ಮುಖಮಾಡಿದ್ದು ಇಂದು ಯಶಸ್ವಿ ರೈತನಾಗಿ ಹೊರಹೊಮ್ಮಿದ್ದಾರೆ. 2015ರಲ್ಲಿ ಅರಕಲಗೂಡು ತಾಲೂಕು ಆಡಳಿತ ಮಂಡಳಿಯಿಂದ  ಯುವ ಪ್ರಗತಿಪರ ರೈತ ಪ್ರಶಸ್ತಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ- 2017 ರಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ, ಜಿಕೆವಿಕೆಯಲ್ಲಿ ನಡೆದ 2019 ನೇ ಕೃಷಿ ಮೇಳದಲ್ಲಿ ಹಾಸನ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

ಬಿಗ್ ಬಾಸ್ ಅವಕಾಶ
ರೈತರು ಬಿಗ್‌ಬಾಸ್‌ನಲ್ಲಿ ಭಾಗವಹಿಸುವುದು ಬಹಳ ಕಡಿಮೆ. ಅದರಲ್ಲಿಯೂ ರೈತರನ್ನೇ ಆಯ್ಕೆ ಮಾಡಬೇಕೆಂದಾದರೆ ಲಕ್ಷಾಂತರ ಪ್ರಗತಿಪರ ರೈತರು ಸಿಗುತ್ತಾರೆ. ಆದರೂ, 2017ರ ಬಿಗ್ ಬಾಸ್ ಸೀಸನ್- 5ರಲ್ಲಿ ನವೀನ್ ಕುಮಾರ್ ಅವರಿಗೂ ಅವಕಾಶ ದೊರೆತಿತ್ತು. ಆದರೆ, ಕಾರಣಾಂತರಗಳಿಂದ ಹೋಗಿರಲಿಲ್ಲ. ಮುಂದಿನ ವರ್ಷ ನಡೆಯುವ ಬಿಗ್‌ಬಾಸ್‌ಗೆ ಭಾಗವಹಿಸಲು ಇಚ್ಛಿಸಿದ್ದಾರೆ. ಅಲ್ಲದೇ, ಜಮೀನಿನಲ್ಲಿ ಔಷಧ ಗಿಡ ಬೆಳೆಸಬೇಕೆಂದು ಚಿಂತಿಸಿ, ಪೂರಕ ಸಿದ್ಧತೆ ನಡೆಸುತ್ತಿದ್ದಾರೆ.