ಹಾಸನ [ಅ.12]:  ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೆ ಹಾನಿಯನ್ನುಂಟು ಮಾಡುವ 75 ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಬರುವಂತಹ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ದೀಪಾವಳಿ ಹಬ್ಬ ಆಚರಣೆ ಸಲುವಾಗಿ ತಾತ್ಕಾಲಿಕ ಪಟಾಕಿ ಮಾರಾಟ ಪರವಾನಗಿ ನೀಡುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಹೆಚ್ಚಿನ ಶಬ್ಧ ಬರುವ ಪಟಾಕಿಗಳ ಮಾರಾಟ ಮಾಡಿದ ವರ್ತಕರ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ ಮಳಿಗೆಗೆ ಅವಕಾಶ ಕಲ್ಪಿಸಿದ್ದು, ಅ.22 ರಿಂದ 29 ರ ವರೆಗೆ ಒಂದು ವಾರಗಳ ಕಾಲ ಮಾತ್ರ ಪಟಾಕಿ ಮಾರಾಟ ಮಾಡಬೇಕು. ಪ್ರತಿ ಮಳಿಗೆಗಳ ನಡುವೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಳಿಗೆಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆಗೆ ಕ್ರಮ ವಹಿಸುವಂತೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಟಾಕಿ ಮಾರಾಟವಾಗುವ ಒಂದು ವಾರಗಳ ಕಾಲ ನಿರಂತರವಾಗಿ ಪೌರಾಯುಕ್ತರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾಧಿ ಅಧಿಕಾರಿಗಳು ಕಡ್ಡಾಯವಾಗಿ ಮಳಿಗೆಗಳ ತಪಾಸಣೆ ನಡೆಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಪಟಾಕಿ ಖರೀದಿಗೆ ಬರುವ ಗ್ರಾಹಕರ ವಾಹನ ನಿಲುಗಡೆಯ ಶುಲ್ಕವನ್ನು ರದ್ದು ಪಡಿಸಲಾಗುವುದು ಎಂದರು.

ಪ್ರಭಾರ ಎಡಿಸಿ ಡಾ.ಎಚ್. ಎಲ್.ನಾಗರಾಜ್ ಮಾತನಾಡಿ, ಸಾರ್ವಜನಿಕರು ಅತಿ ಹೆಚ್ಚು ಪಟಾಕಿ ಸಿಡಿಸಿ ಹಣ ಪೋಲು ಮಾಡುವ ಬದಲು ಪಟಾಕಿ ಖರೀದಿಗೆ ಬಳಸುವ ಹಣವನ್ನು ರಾಜ್ಯದಲ್ಲಿನ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುವಂತೆ ಮನವಿ ಮಾಡಿದರು. ಸಾರ್ವಜನಿಕರು ಹಬ್ಬದ ದಿನ ಮಾತ್ರ ಸಂಜೆ 6ರಿಂದ 8ರ ವರೆಗೆ ಪಟಾಕಿ ಸಿಡಿಸಲು ಅವಕಾಶ ವಿರುತ್ತದೆ. ಹಬ್ಬದ ನಂತರದಲ್ಲಿ ಪಟಾಕಿ ಹೊಡೆದಲ್ಲಿ ಸಾರ್ವಜನಿಕರಿಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಸಭೆಯಲ್ಲಿ ಎಎಸ್ಪಿ ನಂದಿನಿ, ಪೌರಾಯುಕ್ತ ಕೃಷ್ಣಮೂರ್ತಿ, ಅಗ್ನಿ ಶಾಮಕ ಅಧಿಕಾರಿ ಮಂಜುನಾಥ್, ಜಿಲ್ಲಾ ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.