ದಯಾಶಂಕರ ಮೈಲಿ

ಹಾಸನ [ನ.04]:  ‘ಮಣ್ಣೇ ಹೊನ್ನು ನಮಗೆಲ್ಲಾ’... ಎಂಬ ಕೃಷಿ ತತ್ವದಡಿ ಬದುಕುವ ಜಿಲ್ಲೆಯ ರೈತಾಪಿಗಳು ಭೂ ಒಡಲಿಗೆ ಬಿತ್ತಿದ್ದ ಮುಸುಕಿನ ಜೋಳ ಇನ್ನೇನು ಹಟ್ಟಿಗೆ ಸೇರಬೇಕು ಎನ್ನುವಷ್ಟರಲ್ಲಿ ಹಾನಿಗೆ ಈಡಾಗಿದೆ.

ಮುಂಗಾರು ಮಳೆಗಿಂತ ನಾನೇನು ಕಡಿಮೆ ಇಲ್ಲ ಎಂದು ಹಠಕ್ಕೆ ಬಿದ್ದಂತೆ ಸುರಿದ ಹಿಂಗಾರು ಮಳೆ ನಿರಂತರವಾಗಿ ಸುರಿದ ಪರಿಣಾಮ ಜಿಲ್ಲಾದ್ಯಂತ ಮುಸುಕಿನ ಜೋಳದ ತೆನೆಗಳು ನೆನೆದು ಶಿಲೀಂದ್ರ (ಪಂಗಸ್‌) ರೋಗ ಬಂದು, ತೆನೆಯೆಲ್ಲಾ ಕಪ್ಪಾಗುತ್ತಿದೆ. ಹೀಗೆ ಜೋಳಕ್ಕೆ ಪಂಗಸ್‌ ಆಗಲು ಆರಂಭಿಸಿದ ನಂತರ ಅಂದರೆ, 2 ದಿನಗಳಿಂದ ಮಳೆ ನಿಂತು ಸೂರ್ಯ ಬಾನಿನಲ್ಲಿ ಪ್ರಕಾಶಿಸುತ್ತಿದ್ದಾನೆ.

ಬಹಳ ದಿನಗಳಿಂದ ಮಳೆ ಸುರಿದ ಪರಿಣಾಮ ಪಂಗಸ್‌ ರೋಗ ತಗುಲಿರುವ ಮುಸುಕಿನಜೋಳ ಈಗ ಬಿಸಿಲಿನಿಂದ ಚೇತರಿಕೆ ಕಂಡುಕೊಳ್ಳುವುದು ಕಷ್ಟಕರವೇ ಎಂದು ಹೇಳಲಾಗುತ್ತಿದೆ. ಜೋಳದ ತೆನೆ ಒಡೆಯದೇ ಇರುವ ಕಡೆ ಪಂಗಸ್‌ ಬಂದಿಲ್ಲ. ಆದರೆ, ಒಡೆದಿರುವ ತೆನೆಗೆ ಮಳೆ ನೀರು ಸೇರಿ ಪಂಗಸ್‌ ಬಂದಿದೆ. ಇದರಿಂದ ಜೋಳ ಕಪ್ಪು ಬಣ್ಣಕ್ಕೆ ತಿರುಗು ಮುಗ್ಗಲು ವಾಸನೆ ಬರುತ್ತಿದೆ. ಇಂತಹ ಜೋಳಕ್ಕೆ ಹೆಚ್ಚಿನ ಬೆಲೆ ಸಿಗುವುದಿಲ್ಲ.

ಇದು ಒಂದು ರೀತಿ ಕೈ ಬಂದ ತುತ್ತು ಬಾಯಿಗೆ ಸೇರಲಿಲ್ಲ ಎಂಬ ನೋವಿನ ಸಂಗತಿ ರೈತರದ್ದಾಗಿದೆ. ಆಲೂಗಡ್ಡೆಗೆ ಅಂಗಮಾರಿ ರೋಗ ಎಂಬ ಹೆಮ್ಮಾರಿ ಬಂದ ನಂತರದ ದಿನಗಳಲ್ಲಿ ಜಿಲ್ಲೆಯ ರೈತರು ಮುಸುಕಿನ ಜೋಳ ಮೊರೆ ಹೋಗಿದ್ದರು. ಮುಂಗಾರಿನ ಮಳೆಯಿಂದ ಅತ್ಯುತ್ತಮವಾಗಿ ಬಂದಿದ್ದ ಜೋಳದ ಫಸಲು ಹಿಂಗಾರು ಮಳೆಯ ತೀವ್ರತೆಯಿಂದ ಹಾಳಾಗುತ್ತಿದೆ.

82,040 ಹೆಕ್ಟೇರ್‌ ಪ್ರದೇಶದ ಬಿತ್ತನೆ

ಜಿಲ್ಲಾದ್ಯಂತ ಸಕಲೇಶಪುರ ತಾಲೂಕು ಬಿಟ್ಟು ಉಳಿದ ಎಲ್ಲ 7 ತಾಲೂಕುಗಳ 82,040 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ. ಮುಂಗಾರು ಮಳೆ ತೆನೆ ಬರುವವರೆಗೂ ಉತ್ತಮವಾಗಿ ನಡೆಸಿಕೊಂಡ ಕಾರಣ ಭರ್ಜರಿಯಾಗಿ ಬೆಳೆ ಆಗಿತ್ತು. ಆದರೆ, ಹಿಂಗಾರು ಅತಿಯಾದ ಕಾರಣ ಆಲೂಗಡ್ಡೆಯಲ್ಲಿ ಕಳೆದುಕೊಂಡಿದ್ದನ್ನು ಮುಸುಕಿನ ಜೋಳದಲ್ಲಿ ಪಡೆದುಕೊಳ್ಳಬೇಕೆಂದಿದ್ದ ರೈತನಾಸೆ ಈಡೇರಲು ಆಗಿಲ್ಲ.

ಎಲ್ಲೆ ಎಷ್ಟುಹೆಕ್ಟೇರ್‌ನಲ್ಲಿ ಇದೆ ಮುಸುಕಿನ ಜೋಳ?

ತಾಲೂಕು ಹೆಕ್ಟೇರ್‌

ಹಾಸನ 28,630 ಹೆಕ್ಟೇರ್‌

ಅರಕಲಗೂಡು 16,510 ಹೆಕ್ಟೇರ್‌

ಅರಸೀಕೆರೆ 8000 ಹೆಕ್ಟೇರ್‌

ಬೇಲೂರು 13,940 ಹೆಕ್ಟೇರ್‌

ಹೊಳೆನರಸೀಪುರ 6435 ಹೆಕ್ಟೇರ್‌

ಚನ್ನರಾಯಪಟ್ಟಣ 5530 ಹೆಕ್ಟೇರ್‌

ಆಲೂರು 5000 ಹೆಕ್ಟೇರ್‌

ಕಟಾವಿಗೆ ಬಿಡುವು ನೀಡಿದ್ದರೇ..?

ವಾರದ ಹಿಂದೆ ಮಳೆ ಅಲ್ಪ ಬಿಡುವು ನೀಡಿದ್ದರೇ ಮುಸುಕಿನ ಜೋಳವನ್ನು ರೈತರು ಕಟಾವು ಮಾಡಿ ಮನೆಗೆ ಸಾಗಿಸುತ್ತಿದ್ದರು. ಆದರೆ, ಹಗಲು ರಾತ್ರಿಯೆನ್ನದೆ ಸುರಿದ ಕಾರಣ ಕಟಾವು ಮಾಡಲಾಗಲಿಲ್ಲ. ಕೆಲವು ಕಡೆ ಜೋಳದ ತೆನೆ ಬಿಡಿಸಿದ್ದರೂ ಒಣಗಿಸಲು ಕಷ್ಟಕರವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಮಳೆ ಇಲ್ಲದೆ ಒಣಗಿ ಹೋಗಿದ್ದ ಜೋಳ ಈಗ ಅದೇ ಮಳೆಯಿಂದ ಕರಗುವಂತಾಗಿರುವುದು ರೈತರ ಪಾಲಿಗೆ ದುರದೃಷ್ಟಕರ ಸಂಗತಿಯೇ ಸರಿ.

ರಾಗಿಗೂ ತೊಂದರೆ:

ಮುಸುಕಿನ ಜೋಳಕ್ಕೆ ಮಾತ್ರವೇ ಅಲ್ಲ ಮಳೆಯಿಂದ ರಾಗಿ ಬೆಳೆಗೂ ತೊಂದರೆ ಆಗುತ್ತಿದೆ. ಸುಮಾರು 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ರಾಗಿ ಶೇ.30 ರಿಂದ 40 ರಷ್ಟುಮಾತ್ರ ಕಟಾವಿಗೆ ಬಂದಿದೆ. ಕಟಾವು ಮಾಡಲು ಮಳೆ ವಾರದ ಮಟ್ಟಿಗಾದರೂ ಬಿಡುವು ನೀಡಬೇಕಿದೆ.

ಬೆಳೆ ನಷ್ಟಕ್ಕೆ ಇನ್ನೂ ಪರಿಹಾರ ನೀಡಿಲ್ಲ

ಜಿಲ್ಲಾದ್ಯಂತ 4 ತಿಂಗಳ ಹಿಂದೆ ಸುರಿದ ಭಾರೀ ಮುಂಗಾರು ಮಳೆಗೆ ಅನೇಕ ರೀತಿಯ ಹಾನಿಯಾಗಿದೆ. ಬೇರೆ ಬೇರೆ ಇಲಾಖೆಗಳ ಜೊತೆಗೆ ಕೃಷಿ ಇಲಾಖೆಯಲ್ಲೂ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಆದರೆ, ಮೊದಲ ನಷ್ಟದ ಪರಿಹಾರ ಇನ್ನೂ ಬಂದಿಲ್ಲ. ಮಳೆ ಭೋರ್ಗರೆದು ಹೋದ ನಂತರ ನಷ್ಟದ ಅಂದಾಜು ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ವರದಿ. ಅಷ್ಟೇ ಅಲ್ಲ, ಆನ್‌ಲೈನ್‌ ಮೂಲಕವೂ ದಾಖಲಾಗಿದೆ. ಆದರೂ ಪರಿಹಾರ ಬಂದಿಲ್ಲ. ಇದಕ್ಕಾಗಿ ಬರಿಗೈ ಆಗಿರುವ ರೈತರು ಕಾಯುತ್ತಿರುವಾಗಲೇ, ಮುಸುಕಿನ ಜೋಳಕ್ಕೆ ಪಂಗಸ್‌ ಬಂದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಸುಕಿನ ಜೋಳ ತೆನೆ ಒಡೆದಿರುವ ಕಡೆ ಮಳೆ ನೀರಿನಿಂದ ನೆನೆದು ಪಂಗಸ್‌ ಬಂದಿದೆ. ಎಲ್ಲ ಕಡೆಯೂ ಬಂದಿಲ್ಲ. ಅಲ್ಲಲ್ಲಿ ಬಂದಿದೆ. ಅದನ್ನು ತಡೆಯುವ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎರಡು ದಿನಗಳಿಂದ ಮಳೆ ಹೋಗಿ ಬಿಸಿಲು ಬಂದಿದೆ. ಇದರಿಂದ ಜೋಳ ಸುಧಾರಿಸಿಕೊಳ್ಳಬಹುದು. ಈ ಹಿಂದೆ ಆಗಿರುವ ಹಾನಿಗೆ ಆನ್‌ ಲೈನ್‌ ಮೂಲಕವೇ ಶೀಘ್ರ ಪರಿಹಾರ ಸಿಗಲಿದೆ. ಜಿಲ್ಲೆಯಲ್ಲಿ 3221 ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆ ನಾಶವಾಗಿದೆ ಎಂದು ವರದಿ ನೀಡಲಾಗಿದೆ. ಇದರಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ತಂಬಾಕು ಮೊದಲಾದ ಬೆಳೆ ಸೇರಿದ್ದು, 235 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ. ಪರಿಹಾರ ಸಿಗುವ ನಿರೀಕ್ಷೆ ಇದೆ.

- ಕೆ. ಮಧುಸೂದನ್‌ ಜಂಟಿ ನಿರ್ದೇಶಕರು. ಕೃಷಿ ಇಲಾಖೆ