ಹಾಸನ [ಅ.11]:  ಆರ್ಥಿಕವಾಗಿ ದುರ್ಬಲವಿರುವ ಕುಟುಂಬಗಳಿಗೆ (ಆದ್ಯತಾ, ಬಿಪಿಎಲ್) ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನದ ಪಡಿತರ ವನ್ನು ಕೆಲವು ಆರ್ಥಿಕ ಸದೃಢ ಕುಟುಂಬದವರು ಸುಳ್ಳು ಮಾಹಿತಿ ನೀಡಿ ಆದ್ಯತಾ, ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿಯನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದ್ದಾರೆ.

ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿದ್ದಲ್ಲಿ ಅವರು ಪಡಿತರ ಚೀಟಿಗೆ ಅನರ್ಹರಾಗಿದ್ದು, ತಮ್ಮ ಪಡಿತರ ಚೀಟಿಯನ್ನು ಕೂಡಲೇ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಹಿಂದಿರುಗಿಸತಕ್ಕದ್ದು.

ನಿಬಂಧನೆಗಳು: ವೇತನ ಗಣನೆಗೆ ತೆಗೆದುಕೊಳ್ಳದೇ ಎಲ್ಲ ಕಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳ ಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು.ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ  ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬ ಗಳು. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿ ಹೊಂದಿದ ಕುಟುಂಬ ವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು ರು. 1. 20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು. ಒಂದು ಕೆಜಿ ಅಕ್ಕಿಗೆ ಅಂದಾಜು ರು. 35 ರಂತೆ ಸರ್ಕಾರ ಖರೀದಿಸಿ ಆರ್ಥಿಕ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿರುವ ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಸದೃಢವಾಗಿರುವವರು ಸುಳ್ಳು ಮಾಹಿತಿ ನೀಡಿ ಕಬಳಿಸುತ್ತಿರುವುದು ವಿಷಾದನೀಯ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ವಂಚಕರನ್ನು ವಿವಿಧ ಮೂಲಗಳಿಂದ ಪತ್ತೆ ಮಾಡಲಾಗುತ್ತಿದೆ.ಈ ಮೇಲಿನಂತೆ ಅನರ್ಹರು ಸರ್ಕಾರಕ್ಕೆ ವಂಚಿಸಿ ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಪಡೆದುಕೊಂಡಿರುವ ಆರ್ಥಿಕ ಸದೃಢ ಕುಟುಂಬಗಳು ಅ. 31 ರೊಳಗೆ ಇಲಾಖೆಗೆ ಹಿಂದಿರುಗಿ ಸತಕ್ಕದ್ದು. ಇಲ್ಲವಾದರೆ, ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿ ಪಡಿತರ ಚೀಟಿ ಪಡೆದ ದಿನದಿಂದ ಈವರೆಗೆ ಎಷ್ಟು ಪಡಿತರ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಮುಕ್ತ ಮಾರುಕಟ್ಟೆ ದರದಲ್ಲಿ ಹಣ ವಸೂಲಿ ಮಾಡುವುದರ ಜೊತೆಗೆ ಅಂತಹವರ  ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಲಾಗುವುದು. 

ಸ್ವ- ಇಚ್ಛೆಯಿಂದ ನಿಗದಿತ ಅವಧಿಯೊಳಗೆ ಅನರ್ಹ ಪಡಿತರ ಚೀಟಿಗಳನ್ನು ಹಿಂತಿರುಗಿಸುವವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಿದರು.