50 ವರ್ಷದ ಬಳಿಕ ಸಹಾರಾ ಮರುಭೂಮಿಯಲ್ಲಿ ಮಳೆ, ಭೀಕರ ಪ್ರವಾಹ; ಅರ್ಧ ಶತಮಾನದ ನಂತ್ರ ತುಂಬಿದ ಕೆರೆ
ಸಹಾರಾ ಮರುಭೂಮಿಯ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಒಣಗಿದ್ದ ಕೆರೆಗಳು ತುಂಬಿವೆ. ಈ ಪ್ರದೇಶದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಕಳವಳ ಹೆಚ್ಚಾಗಿದೆ. ಟ್ಯಾಗೌನೈಟ್ ಗ್ರಾಮದಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ. ಅರ್ಧ ಶತಮಾನದಿಂದ ಒಣಗಿದ್ದ ಇರಿಕಿ ಕೆರೆ ಮತ್ತೆ ತುಂಬಿದೆ.
ಆಗ್ನೇಯ ಮೊರಾಕೊದಲ್ಲಿ ಎರಡು ದಿನಗಳ ಭಾರೀ ಮಳೆಯ ನಂತರ ಸಹಾರಾ ಮರುಭೂಮಿಯ ಹಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಈ ಮಳೆ ಹಾಗೂ ಪ್ರವಾಹವನ್ನು ಕಂಡು ಹವಾಮಾನ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ರಬಾತ್‌ನಿಂದ 450 ಕಿ.ಮೀ ದಕ್ಷಿಣದಲ್ಲಿರುವ ಟ್ಯಾಗೌನೈಟ್ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ಮೊರಾಕೊದ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಧ ಶತಮಾನದಿಂದ ಝಾಗೋರಾ ಮತ್ತು ಟಾಟಾ ನಡುವೆ ಒಣಗಿದ್ದ ಇರಿಕಿ ಕೆರೆ ಪ್ರವಾಹದಿಂದ ಮತ್ತೆ ತುಂಬಿದೆ ಎಂದು ನಾಸಾದ ಉಪಗ್ರಹ ಚಿತ್ರಗಳು ತೋರಿಸಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಮಳೆಯಾಗುವುದು 30 ರಿಂದ 50 ವರ್ಷಗಳ ನಂತರ ಎಂದು ಮೊರಾಕೊದ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ 9 ಮಿಲಿಯನ್ ಚದರ ಕಿಲೋಮೀಟರ್‌ಗಳಿಗಿಂತ ಹೆಚ್ಚು ವಿಸ್ತಾರದಲ್ಲಿ ಹರಡಿರುವ ಸಹಾರಾ ಮರುಭೂಮಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಈ ಪ್ರದೇಶದಲ್ಲಿ ಭವಿಷ್ಯದಲ್ಲಿ ಭಾರೀ ಮಳೆ ಮತ್ತು ಚಂಡಮಾರುತಗಳು ಬರಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಹೆಚ್ಚುತ್ತಿರುವ ತಾಪಮಾನದಿಂದಾಗಿ ಜಲವಿಜ್ಞಾನ (Hydrological Cycle) ಚಕ್ರವು ವೇಗವಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ ಮಹಾ ಕಾರ್ಯದರ್ಶಿ ಸೆಲೆಸ್ಟೆ ಸೌಲೊ ಹೇಳಿದ್ದಾರೆ. ಇದು ಮುಂದೆ ಯಾವ ಹಂತದ ಅಪಾಯಕ್ಕೆ ಕಾರಣವಾಗಬಹುದು ಎಂಬುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.