- Home
- News
- World News
- ಗಾಜಾ ನೆರವು ಯಾತ್ರೆ ಹೊರಟ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್, ಜಲಗಡಿಯಲ್ಲಿ ಇಸ್ರೇಲ್‌ನಿಂದ ಅರೆಸ್ಟ್
ಗಾಜಾ ನೆರವು ಯಾತ್ರೆ ಹೊರಟ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್, ಜಲಗಡಿಯಲ್ಲಿ ಇಸ್ರೇಲ್‌ನಿಂದ ಅರೆಸ್ಟ್
ಗಾಜಾಕ್ಕೆ ನೆರವು ನೀಡಲು ಹೊರಟಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮತ್ತು ಅವರ ತಂಡವನ್ನು ಇಸ್ರೇಲಿ ಸೇನೆ ಬಂಧಿಸಿದೆ ಎಂದು ವರದಿಯಾಗಿದೆ. ವಿಹಾರ ನೌಕೆಯಲ್ಲಿ ಪ್ರಯಾಣಿಸುತ್ತಿದ್ದ ಗ್ರೆಟಾ ಮತ್ತು ಇತರರನ್ನು ಅಂತರರಾಷ್ಟ್ರೀಯ ಜಲಗಡಿಯಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇಸ್ರೇಲ್–ಪ್ಯಾಲೆಸ್ಟೈನ್ ಸಂಘರ್ಷದ ನಡುವೆ, ಗಾಜಾದಲ್ಲಿನ ನರಮೇಧವನ್ನು ವಿರೋಧಿಸಿ ಜಾಗತಿಕ ಮಟ್ಟದಲ್ಲಿ ಪ್ರತಿಭಟನೆಗಳು ವೇಗ ಪಡೆಯುತ್ತಿವೆ. ಇದೇ ಸಂದರ್ಭ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಗಾಜಾಕ್ಕೆ ಸಹಾಯ ನೀಡಲು ಪ್ರಯಾಣ ಬೆಳೆಸಿದರೂ, ಅವರ ಯಾತ್ರೆಗೆ ಇಸ್ರೇಲಿ ಸೇನೆಯಿಂದ ಅಡ್ಡಿಪಡಿಸಲಾಗಿದ್ದು, ಅವರ ತಂಡವನ್ನು ಬಂಧಿಸಿದೆ ಎಂದು ವರದಿಯಾಗಿದೆ.
ವಿಹಾರ ನೌಕೆ ವಶಪಡಿಸಿಕೊಂಡ ಇಸ್ರೇಲಿ ಕಮಾಂಡೋಗಳು
ಗ್ರೆಟಾ ಮತ್ತು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯೆ ರಿಮಾ ಹಸನ್ ಸೇರಿದಂತೆ ಹಲವರು “ಮೆಡೆಲೀನ್” ಹೆಸರಿನ ವಿಹಾರ ನೌಕೆಯಲ್ಲಿ ಇಟಲಿಯ ಸಿಸಿಲಿಯಿಂದ ಗಾಜಾಗೆ ಹೊರಟಿದ್ದರು. ಈ ನೌಕೆ “ಪ್ಯಾಲೆಸ್ಟೈನ್ ಪ್ರೋ-ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ” ಎಂಬ ಸಂಘಟನೆಯ ನೆರವಿನಿಂದ ಸಂಚರಿಸುತ್ತಿತ್ತು. ಆದರೆ, ಗಾಜಾ ಸಮೀಪ ಅಂತರರಾಷ್ಟ್ರೀಯ ನೀರಿನಲ್ಲಿ ಇಸ್ರೇಲಿ ಕಮಾಂಡೋಗಳು ನೌಕೆಯ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡರು.
ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ
ಈ ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಭಾರಿ ಆಕ್ರೋಶ ಉಂಟು ಮಾಡಿವೆ. ವೀಡಿಯೊಗಳಲ್ಲಿ ಎಲ್ಲ ಪ್ರಯಾಣಿಕರೂ ಲೈಫ್ ಜಾಕೆಟ್ ಧರಿಸಿ ಕೈಗಳನ್ನು ಮೇಲಕ್ಕೆತ್ತಿ ಕುಳಿತಿರುವುದು ಕಾಣಸಿಗುತ್ತದೆ. ಈ ಸಂಬಂಧ ರಿಮಾ ಹಸನ್ ತಮ್ಮ X (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. X ನಲ್ಲಿ ಹಸನ್ ಹಾಕಿರುವ ಸರಣಿ ಪೋಸ್ಟ್‌ಗಳಲ್ಲಿ, ಫ್ರೀಡಂ ಫ್ಲೋಟಿಲ್ಲಾದ ಸಿಬ್ಬಂದಿಯನ್ನು ಇಸ್ರೇಲಿ ಸೈನ್ಯವು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಂತರರಾಷ್ಟ್ರೀಯ ಜಲ ಗಡಿಯಲ್ಲಿ ಬಂಧಿಸಿದೆ ಎಂದು ಹೇಳಿದರು.
ಅಪಹರಣದ ಆರೋಪ
ಫ್ರೀಡಂ ಫ್ಲೋಟಿಲ್ಲಾದ ಸದಸ್ಯರು ಟೆಲಿಗ್ರಾಮ್ ಮೂಲಕ ತಮ್ಮ ಸಂಬಂಧಿಕರಿಗೆ, “ಇಸ್ರೇಲಿ ಸೇನೆ ನಮ್ಮನ್ನು ಅಪಹರಿಸಿ ಹೊರಗಿನ ಜಗತ್ತನ್ನು ಸಂಪರ್ಕಿಸಲು ಅವಕಾಶ ನೀಡುತ್ತಿಲ್ಲ” ಎಂದು ತಿಳಿಸಿದ್ದಾರೆ. ಇಸ್ರೇಲ್, ಗಾಜಾಗೆ ಅಗತ್ಯವಸ್ತುಗಳು, ಆಹಾರ ಮತ್ತು ಔಷಧಿಗಳನ್ನು ಕಳಿಸಲು ನಿರಾಕರಿಸುತ್ತಿರುವುದಾಗಿ ಹೇಳಿದ್ದಾರೆ.
ಇಸ್ರೇಲ್ ನಿಂದ ಟೀಕೆ
ಇದರ ವಿರುದ್ಧವಾಗಿ ಇಸ್ರೇಲ್ ವಿದೇಶಾಂಗ ಸಚಿವಾಲಯ “ಸೆಲೆಬ್ರಿಟಿ ಸೆಲ್ಫಿ ನೌಕೆ” ಎಂದು ಟೀಕಿಸುವ ಮೂಲಕ ಘಟನೆಯನ್ನು ಹಾಸ್ಯಮಾಡಿದೆ. ಗ್ರೆಟಾ ಮತ್ತು ಇತರರು ಮಾಧ್ಯಮದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಇತ್ತೀಚೆಗೆ 1,200 ಟ್ರಕ್‌ಗಳ ಮೂಲಕ ಗಾಜಾಗೆ ನೆರವು ತಲುಪಿಸಿರುವುದಾಗಿ ಇಸ್ರೇಲ್ ಹೇಳಿದೆ.
ವೈರಲ್ ವೀಡಿಯೋ ಮೂಲಕ ಗೂಢಚರ್ಯೆ ಆರೋಪ
ಗ್ರೆಟಾ ಥನ್ಬರ್ಗ್ ತಾವು ಇಸ್ರೇಲ್ ಸೇನೆಯಿಂದ “ ಅಪಹರಣ” ಎಂಬ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅವರು ತಮ್ಮ ಕುಟುಂಬ ಹಾಗೂ ಸ್ನೇಹಿತರು ಸ್ವೀಡನ್ ಸರ್ಕಾರದ ಮೇಲೆ ತನ್ನನ್ನು ಮತ್ತು ತಮ್ಮ ತಂಡವನ್ನು ಬಿಡುಗಡೆ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಇಸ್ರೇಲ್ ಹೇಳಿರುವಂತೆ, ಗಾಜಾದಲ್ಲಿ ಕಳೆದ ಎರಡು ವಾರಗಳಲ್ಲಿ 11 ಮಿಲಿಯನ್ ಊಟಗಳನ್ನು ಪೂರೈಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಸಮುದಾಯ ಈ ಮಾಹಿತಿಯನ್ನು ವಿರೋಧಿಸುತ್ತಾ, ಇಸ್ರೇಲ್‌ನ ದಾಳಿಯಿಂದ ಗಾಜಾದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಹೇಳುತ್ತಿದೆ.