ಮಹೀಂದ್ರಾದಿಂದ ‘ವೀರೋ’ ಲಘು ವಾಣಿಜ್ಯ ವಾಹನ
ಮೋಹನ ಹಂಡ್ರಂಗಿ
ಪುಣೆ(ಸೆ.21): ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಬಹು ಇಂಧನ ಆಯ್ಕೆಯ ಹೊಸ ಪ್ಲಾಟ್ ಫಾರ್ಮ್‌ನಲ್ಲಿ ತಯಾರಿಸಿರುವ ‘ವೀರೋ’ ಹೆಸರಿನ ಲಘು ವಾಣಿಜ್ಯ ವಾಹನವನ್ನು (ಎಲ್‌ಸಿವಿ) ಲೋಕಾರ್ಪಣೆಗೊಳಿಸಿದೆ.
ಪುಣೆ ಹೊರವಲಯದ ಚಾಕಣ್ ಕೈಗಾರಿಕಾ ಪ್ರದೇಶದಲ್ಲಿನ ತಯಾರಿಕಾ ಘಟಕದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವೀರೋ’ ಲಘು ವಾಣಿಜ್ಯ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ವಾಹನವು ದೇಶದ ಲಘು ಸರಕು ಸಾಗಣೆ ವಾಹನಗಳ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿದ ಹೆಸರು ಮಾಡಲಿದೆ ಎಂದು ಕಂಪನಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹೀಂದ್ರಾ ವೀರೋ ಲಘು ಸರಕು ಸಾಗಣೆ ವಾಹನವು ಸದ್ಯ ಡೀಸೆಲ್ ಮತ್ತು ಸಾಂದ್ರಿಕೃತ ನೈಸರ್ಗಿಕ ಅನಿಲ(ಸಿಎನ್‌ಜಿ) ಇಂಧನ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 1.5 ಲೀಟರ್ ಎಂಜಿನ್, 1.6 ಟನ್ ತೂಕದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಎಲೆಕ್ಟ್ರಿಕ್ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ರಾಮ್ ನಕರಾ ಹೇಳಿದರು.
ಲಘು ಸರಕು ಸಾಗಣೆ ವಾಹನಗಳ ವಿಭಾಗದಲ್ಲಿ ಮಹೀಂದ್ರಾ ವೀರೋದಲ್ಲಿ ಚಾಲಕನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಏರ್‌ಬ್ಯಾಗ್ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಲಘು ಸರಕು ವಾಹನಗಳ ವಿಭಾಗದಲ್ಲಿ ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಮೊದಲ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವೀರೋ ವಾಹನದ ಕ್ಯಾಬಿನ್‌ನನ್ನು ಕಾರು ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪವರ್ ಸ್ಟೇರಿಂಗ್, 26.03 ಸೆಂ.ಮೀ. ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಪವರ್ ವಿಂಡೋಸ್, ಇಂಜಿನ್ ಸ್ಟಾರ್ಟ್ ಬಟನ್, ಫ್ಯೂಯೆಲ್ ಕೋಚಿಂಗ್, ಪವರ್ ಮೋಡ್, ಡಿ ಪ್ಲಸ್ 2 ಮಾದರಿ ಫೋಲ್ಡಿಂಗ್ ಆಸನಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವೀರೋ 1.5 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ 80 ಅಶ್ವಶಕ್ತಿ, 210 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟರ್ಬೋ ಸಿಎನ್‌ಜಿ ಎಂಜಿನ್ 90 ಅಶ್ವಶಕ್ತಿ ಮತ್ತು 210 ಟಾರ್ಕ್ ಉತ್ಪಾದಿಸುತ್ತದೆ.
ಪ್ರತಿ ಲೀಟರ್ ಡೀಸೆಲ್ ಗೆ ಗರಿಷ್ಠ 18.4 ಕಿ.ಮೀ ಮತ್ತು ಪ್ರತಿ ಕೆಜಿ ಸಿಎನ್‌ಜಿಗೆ 19.2 ಕಿ.ಮೀ ಮೈಲೇಜ್ ನೀಡಲಿದೆ. ವೀರೋ ಲಘು ಸರಕು ಸಾಗಣೆ ವಾಹನದ ಡೀಸೆಲ್ ಎಂಜಿನ್ ಎಕ್ಸ್ ಶೋರೂಂ ಬೆಲೆ 7.99 ಲಕ್ಷ ರು.ನಿಂದ 9.56ಲಕ್ಷದ ವರೆಗೆ ಇದೆ. ವಿ2, ವಿ4 ಮತ್ತು ವಿ6 ಮಾದರಿಗಳಲ್ಲಿ ಸದ್ಯ ಲಭ್ಯವಿದೆ.