ನಿರೂಪಕಿಯಾಗಿ ಮೋಡಿ ಮಾಡಿದ್ದ ಪುಣ್ಯವತಿಯ ಬೆಡಗಿ, ನಟಿಯಾಗಿ ಫೇಮಸ್ ಆದ್ರು !
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಣ್ಯವತಿ ಸೀರಿಯಲ್ ನಲ್ಲಿ ನಾಯಕಿಯಷ್ಟೇ ಪ್ರಮುಖ ಪಾತ್ರವನ್ನು ಹೊಂದಿರುವ ಮತ್ತೊಂದು ಪಾತ್ರ ಎಂದರೆ ಅದು ತಂಗಿ ಪೂರ್ವಿಯದ್ದು. ಇಲ್ಲಿದೆ ಪೂರ್ವಿಯ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ.

ಹೊಸ ಹೊಸ ರೀತಿಯ ಕಥೆಗಳನ್ನು ನೀಡೋದ್ರಲ್ಲಿ ಕಲರ್ಸ್ ಕನ್ನಡ (Colors Kannada) ಎಂದಿಗೂ ಹಿಂದೆ ಬಿದ್ದಿಲ್ಲ. ಅಂತಹ ಒಂದು ವಿಭಿನ್ನ ಕಥೆಯ ಸೀರಿಯಲ್ ಪುಣ್ಯವತಿ. ತುಂಬಾನೆ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಈ ಸೀರಿಯಲ್, ಸದ್ಯ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಅಂದ್ರೆ ತಪ್ಪಿಲ್ಲ.
ಈ ಸೀರಿಯಲ್ ನ ಕಥೆ ಹೇಳೋದಾದ್ರೆ ಡ್ಯಾನ್ಸ್ ಅನ್ನು ತುಂಬಾನೆ ಇಷ್ಟಪಡುವ ನಾಯಕಿ ಪದ್ಮಿನಿ ಡ್ಯಾನ್ಸ್ ಆಯೋಜಕರ ಬ್ಲ್ಯಾಕ್ ಮೇಲ್ ಗೆ ಹೆದರಿ, ಮದುವೆ ದಿನಾನೇ ಡ್ಯಾನ್ಸ್ ಆಡಿಶನ್ ಗೆ ಹೋಗುವ ಸಂದರ್ಭ ಬಂದಿರುತ್ತೆ. ಅಕ್ಕನ ಅನುಪಸ್ಥಿತಿ ಯಾರಿಗೂ ಗೊತ್ತಾಗದಿರಲೆಂದು ತಂಗಿ ಪೂರ್ವಿ ವಧುವಿನಂತೆ ಡ್ರೆಸ್ ಮಾಡಿ, ಹಸೆ ಮಣೆ ಏರುತ್ತಾಳೆ. ಏನೂ ಗೊತ್ತಿಲ್ಲದ ನಂದನ್ ಪೂರ್ವಿಗೆ ತಾಳಿಯನ್ನೂ ಕಟ್ಟುತ್ತಾನೆ.
ನಂತರ ಕಥೆಯಲ್ಲಿ ಹಲವು ಟ್ವಿಸ್ಟ್ ಗಳು ಬಂದು, ಅಕ್ಕನನ್ನು ಮತ್ತು ಭಾವನನ್ನು ಒಂದು ಮಾಡಬೇಕೆಂದಿದ್ದ ಪೂರ್ವಿಯೇ ಈಗ ನಂದನ್ ನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಈಗ ಕಥೆಯಲ್ಲಿ ನಾಯಕ -ನಾಯಕಿ ಪಾತ್ರದ ಜೊತೆ ಪೂರ್ವಿ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪೂರ್ವಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ನಟಿ ಭುವನ ಮುರಳಿ.
ಈಗಾಗಲೇ ಹಲವು ಸೀರಿಯಲ್ ಗಳಲ್ಲಿ ನಟನೆ: ಪೂರ್ವಿ ಪಾತ್ರಧಾರಿ ಭುವನ ಈಗಾಗಲೇ ಸಾಕಷ್ಟು ಸೀರಿಯಲ್ ಗಳಲ್ಲಿ (serial) ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲಿಗೆ ವರಲಕ್ಷ್ಮೀ ಸ್ಟೋರ್ಸ್, ನಂತರ ದೊರೆಸಾನಿ ಸೀರಿಯಲ್ ನಲ್ಲಿ ತಂಗಿಯಾಗಿ ನಟಿಸಿದ್ದರು. ಯಡಿಯೂರು ಶ್ರೀ ಸಿದ್ಧಲಿಂಗೇಶ್ವರದಲ್ಲೂ ನಟಿಸಿದ್ದಾರೆ. ಆದರೆ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ಪುಣ್ಯವತಿ ಸೀರಿಯಲ್.
ನಿರೂಪಕಿಯಾಗಿ ಕರಿಯರ್ ಆರಂಭ: ಭುವನ ಮುರಳಿ ಅವರು ನಿರೂಪಕಿಯಾಗಿ (Anchor) ಕರಿಯರ್ ಆರಂಭಿಸಿದ್ದರು. ತುಂಬಾ ಸಣ್ಣ ವಯಸ್ಸಿನಲ್ಲೆ ಇವರು ಇಂಚರ ಚಾನೆಲ್ ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ನಟಿಯಾಗಿ ಸೈ ಎನಿಸಿಕೊಂಡಿದ್ದಾರೆ.
ಭರತನಾಟ್ಯ ಕಲಾವಿದೆ: ಭುವನ ಬಾಲ್ಯದಿಂದಲೇ ಕಲಾವಿದೆ ಎನ್ನಬಹುದು. ಯಾಕಂದ್ರೆ ಇವರು ಕ್ಲಾಸಿಕಲ್ ಡ್ಯಾನ್ಸರ್ (clasical dancer) ಆಗಿದ್ದು, ಬಾಲ್ಯದಿಂದಲೇ ಭರತನಾಟ್ಯವನ್ನು ಕಲಿತಿದ್ದಾರೆ. ಉದಯಟಿವಿ ಸೇರಿ ಹಲವೆಡೆ ಡ್ಯಾನ್ಸ್ ಕಾರ್ಯಕ್ರಮಗಳನ್ನು ಸಹ ಇವರು ನೀಡಿದ್ದಾರೆ.
ಟಿಕ್ ಟಾಕ್ , ರೀಲ್ಸ್ ನಲ್ಲಿ ಬ್ಯುಸಿ: ಭುವನ ಅವರು ತಮ್ಮ ಫ್ರೀ ಟೈಮ್ ನಲ್ಲಿ ಮೊದಲು ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಿದ್ದರು, ಈಗ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ತಮ್ಮ ಸೀರಿಯಲ್ ಟೀಮ್ ಜೊತೆ ಸಹ ರೀಲ್ಸ್ ಮಾಡುತ್ತಿರುತ್ತಾರೆ.
ಪೂರ್ವಿ ಪಾತ್ರ ಮೆಚ್ಚಿಕೊಂಡ ಜನರು: ಪುಣ್ಯವತಿ ಸೀರಿಯಲ್ ನಲ್ಲಿನ ಪೂರ್ವಿ ಪಾತ್ರದಿಂದಾಗಿ ಜನರು ಈಗ ನಾನು ಎಲ್ಲಿ ಹೋದರು ಗುರುತಿಸುವಂತಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭುವನಗೆ ತಾಳಿ ಬಿಚ್ಚಿ ಕೊಟ್ಟು, ಅಕ್ಕ ಪದ್ಮಿನಿಯನ್ನು ನಂದನ್ ಜೊತೆ ಮದುವೆ ಮಾಡಿಸು ಎಂದು ಎಲ್ಲರೂ ಸಲಹೆ ನೀಡುತ್ತಾರಂತೆ.