ಬಾಡಿ ಬಿಲ್ಡರ್ ಆಗಬೇಕೆಂದಿದ್ದವರು ಸೀರಿಯಲ್ ಹೀರೋ ಆದ ಒಲವಿನ ನಿಲ್ದಾಣದ ಸಿದ್ಧಾಂತ್!
ಒಲವಿನ ನಿಲ್ದಾಣ ಸೀರಿಯಲ್ ನಲ್ಲಿ ಸಿದ್ಧಾಂತ್ ಪಾತ್ರದ ಮೂಲಕ ಅತ್ಯುತ್ತಮ ಅಭಿನಯ ನೀಡಿ ಜನರನ್ನು ರಂಜಿಸುತ್ತಿರುವ ನಟ ಅಕ್ಷಯ್ ನಾಯಕ್, ಬಾಡಿ ಬಿಲ್ಡರ್ ಆಗಿದ್ದೋರು ನಾಯಕ ಆಗಿದ್ದು ಹೇಗೆ ನೋಡಿ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಾಯಕ ಸಿದ್ಧಾಂತ್ ಪಾತ್ರ ಜನರಿಗೆ ತುಂಬಾನೆ ಹಿಡಿಸಿದೆ. ಮನೆಯವರ ಬಗ್ಗೆ ಕಾಳಜಿ, ತಾರಿಣಿಯ ಮೇಲಿನ ಪ್ರೀತಿ, ಕಷ್ಟಪಟ್ಟು ದುಡಿಯುವ ಗುಣ ಎಲ್ಲವೂ ಜನರಿಗೆ ಇಷ್ಟವಾಗಿದೆ.
ಸಿದ್ಧಾಂತ್ ಪಾತ್ರದಲ್ಲಿ ನಟಿಸುತ್ತಿರುವ ನಟ ಅಕ್ಷಯ್ ನಾಯಕ್ (Akshay Nayak). ಬಾಲ್ಯದಿಂದಲೇ ನಟನಾಗುವ ಕನಸು ಕಂಡು, ನಂತರದಲ್ಲಿ ಹಲವಾರು ಅವಮಾನಗಳನ್ನು ಎದುರಿಸಿ, ಸದ್ಯ ಪ್ರಮುಖ ಸೀರಿಯಲ್ ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ ಈ ನಟ.
ಮಂಡ್ಯ ಮೂಲದ ಅಕ್ಷಯ್ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಮಂಡ್ಯದಲ್ಲಿ. ಮಂಡ್ಯ, ಮೈಸೂರು ಹಾಗೂ ಮೂಡುಬಿದಿರೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು ಅಮ್ಮ ಅಪ್ಪನ ಮುದ್ದಿನ ಮಗ ಅಂದ್ರೆ ತಪ್ಪಲ್ಲ.
ಬಾಲ್ಯದಲ್ಲಿಯೇ ನಟನೆಯತ್ತ ಒಲವಿದ್ದ ಇವರು ಮೊದಲ ಆಯ್ಕೆ ಮಾಡಿಕೊಂಡಿದ್ದು ಬಾಡಿ ಬಿಲ್ಡಿಂಗ್ ಕ್ಷೇತ್ರ. ತಾವೊಬ್ಬ ಬಾಡಿ ಬಿಲ್ಡರ್ (Body builder) ಆಗಬೇಕೆಂದು ಅವರು ಬಯಸಿದ್ದರು. ಆ ಸಮಯದಲ್ಲಿ ಡಬ್ ಸ್ಮಾಶ್ ಕೂಡ ಮಾಡುತ್ತಿದ್ದರಂತೆ. ಆ ಮೂಲಕವೇ ಇವರ ನಟನೆ ನೋಡಿ ಹೆಚ್ಚಿನ ಜನರು ನಟನೆಗೆ ಎಂಟ್ರಿ ಕೊಡುವಂತೆ ಸಲಹೆ ನೀಡಿದ್ರಂತೆ.
ಬೆಂಗಳೂರಲ್ಲಿ ಕಸಿನ್ ಮನೆಯಲ್ಲಿ ಇದ್ದುಕೊಂಡು ಫಿಲಂ ಇನ್ಸ್ಟಿಟ್ಯೂಟ್ ಗೆ ಸೇರಿ, ನಂತರ ಸೀರಿಯಲ್, ಸಿನಿಮಾಗಳಿಗೆ ಆಡಿಶನ್ ಕೊಟ್ಟು, ಹಲವೆಡೆ ಅವಮಾನ ಸಹ ಅನುಭವಿಸಿದ್ದರಂತೆ ಅಕ್ಷಯ್. ಕೆಲವೆಡೆ ಚಾನ್ಸ್ ಇದೆ ಎಂದು ಕರೆಯಿರಿ ಮತ್ತೆ ಹಾಗೆ ಮನೆಗೆ ಕಳುಹಿಸಿದ್ದರೆ, ಇನ್ನು ಕೆಲವೆಡೆ, ಮೇಕಪ್ ಡ್ರೆಸ್ ಎಲ್ಲಾ ಮಾಡಿಸಿ, ಇವತ್ತಿಲ್ಲ ಶೂಟಿಂಗ್ ಎಂದು ಕಳಿಸಿದ್ದು ಇದೆಯಂತೆ.
ನಂತರ ತಮಿಳು ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಅಕ್ಷಯ್ ಅವರು ಇದೇ ಮೊದಲ ಬಾರಿ ಕನ್ನಡ ಸೀರಿಯಲ್ ನಲ್ಲಿ ನಟಿಸಿದ್ದಲ್ಲ, ಅವರು ಐದು ವರ್ಷಗಳ ಹಿಂದೆಯೇ ಜನಪ್ರಿಯ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದ ಮೂಲಕ ಜನಮೆಚ್ಚುಗೆ ಕೂಡ ಪಡೆದಿದ್ದರು.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಸ್ತೂರಿ ನಿವಾಸ ಸೀರಿಯಲ್ ನಲ್ಲೂ ಇವರು ನಟಿಸಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್ ಗೆ ಇವರನ್ನು ಮೊದಲ ಬಾರಿ ಸಂಪರ್ಕಿಸಿದಾಗ, ಬೇರೆ ಕೆಲಸದ ಹಿನ್ನೆಲೆಯಲ್ಲಿ ಇದನ್ನ ರಿಜೆಕ್ಟ್ ಮಾಡಿದ್ದರಂತೆ, ಎರಡು ತಿಂಗಳ ನಂತರ ಮತ್ತೆ ಅದೇ ಸೀರಿಯಲ್ ಗೆ ನಾಯಕನ ಪಾತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ ಎನ್ನುವ ಪೋಸ್ಟ್ ನೋಡಿ ಮತ್ತೆ ಆಯ್ಕೆಯಾಗಿದ್ದು ಮಾತ್ರ ಅದೃಷ್ಟವೇ ಸರಿ.
ಕಿರುತೆರೆ ಮಾತ್ರವಲ್ಲ ಹಿರಿತೆರೆಯಲ್ಲೂ ಸಹ ಮಿಂಚುತ್ತಿರುವ ಅಕ್ಷಯ್ ಧಾರಾವಾಹಿ ಮಾತ್ರವಲ್ಲದೇ ಫೆಬ್ರವರಿ 30 ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ಮತ್ತೆರಡು ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡಿದ್ದಾರೆ. ಆ ಮೂಲಕ ಅಕ್ಷಯ್ ನಾಯಕ ಕನ್ನಡ ಸಿನಿಮಾರಂಗದ ನಾಯಕನಾಗಿ ಮೂಡಿ ಬರೋ ಭರವಸೆ ಮೂಡಿಸಿದ್ದಾರೆ.