ಬಿಗ್ ಬಾಸ್ ಕನ್ನಡದ ಮೂಲಕ ಸ್ಟಾರ್ ಡಮ್ ಪಡೆದ ಸೆಲೆಬ್ರಿಟಿಗಳಿವರು…
ಬಿಗ್ ಬಾಸ್ ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದ್ದು ನಿಜ. ಇದರಲ್ಲಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದರೂ ಸಹ ಬಿಗ್ ಬಾಸ್ ಬಂದ ಮೇಲೆ ಕನ್ನಡ ಮನರಂಜನಾ ಜಗತ್ತಿನಲ್ಲಿ ದೊಡ್ಡ ಸ್ಥಾನವನ್ನೇ ಪಡೆದರು. ಅವರ ಬಗ್ಗೆ ತಿಳಿಯೋಣ..

ಹಲವು ವರ್ಷಗಳಿಂದ, ಬಿಗ್ ಬಾಸ್ ಕನ್ನಡವು (Bigg Boss Kannada) ಹೊಸ ಹೊಸ ಸ್ಪರ್ಧಿಗಳನ್ನು ಬೆಳಕಿಗೆ ತರುವ, ಅವರನ್ನು ಮನೆಮಾತಾಗಿಸುವ ವೇದಿಕೆಯಾಗಿ ಮೂಡಿಬಂದಿದೆ. ನಟರಿಂದ ಹಿಡಿದು ಸಾಮಾನ್ಯ ಜನರವರೆಗೆ, ಈ ಕಾರ್ಯಕ್ರಮವು ಅನೇಕರಿಗೆ ದೊಡ್ಡ ಅವಕಾಶಗಳ ಬಾಗಿಲನ್ನೇ ತೆರೆದುಕೊಟ್ಟಿದೆ. ಬಿಗ್ ಬಾಸ್ ಮೂಲಕ ಮನೆಮಾತಾದ, ನಂತರ ಕನ್ನಡ ಸಿನಿಮಾ ಅಥವಾ ಮನರಂಜನಾ ಜಗತ್ತಿನಲ್ಲಿ ಸ್ಟಾರ್ ಡಮ್ ಗಳಿಸಿದವರು ಯಾರ್ಯಾರಿದಾರೆ ನೋಡೋಣ.
ಅರವಿಂದ್ ಕೆಪಿ (Aravind KP)
ಮಂಗಳೂರು ಮೂಲದ ಇಂಟರ್ನ್ಯಾಷನಲ್ ಬೈಕ್ ಸೆನ್ಸೇಷನ್ ಅರವಿಂದ್ ಕೆಪಿ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಟಾರ್ಡಮ್ ಪಡೆದರು. ಮೊದಲ ರನ್ನರ್ ಅಪ್ ಸ್ಥಾನ ಪಡೆದರೂ, ಅರವಿಂದ್ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿದ್ದಾರೆ ಮತ್ತು ಅವರ ಸಾಧನೆಗಳು ಮತ್ತು ನಡವಳಿಕೆಯ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಇವರು ದಿವ್ಯಾ ಉರುಡುಗ ಜೊತೆ ನಟಿಸಿದ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.
ರೂಪೇಶ್ ಶೆಟ್ಟಿ (Roopesh Shetty)
ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿಜೇತ ರೂಪೇಶ್ ಶೆಟ್ಟಿಗೆ ಇಂದು ಯಾವುದೇ ಪರಿಚಯದ ಅಗತ್ಯವಿಲ್ಲ. ರಿಯಾಲಿಟಿ ಶೋನಲ್ಲಿ ಅವರು ಕೆಲವು ವಿವಾದಗಳನ್ನು ಹುಟ್ಟುಹಾಕಿದ್ದರೂ, ಬಿಗ್ ಬಾಸ್ ಮನೆಯ ಪ್ರತಿಯೊಂದು ಚಟುವಟಿಕೆಯಲ್ಲೂ ಅವರ ಸಕ್ರಿಯ ಭಾಗವಹಿಸುವಿಕೆ ಅನೇಕರ ಹೃದಯಗಳನ್ನು ಗೆದ್ದಿದೆ. ಸದ್ಯ ರೂಪೇಶ್ ಬೆಳ್ಳಿ ಪರದೆಯಲ್ಲಿ ಬ್ಯುಸಿಯಾಗಿದ್ದಾರೆ.
ನಿವೇದಿತಾ ಗೌಡ (Nivedita Gowda)
ನಿವೇದಿತಾ ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದರು. ಸಾಮಾನ್ಯ ವ್ಯಕ್ತಿಯಾಗಿ ರಿಯಾಲಿಟಿ ಶೋಗೆ ಪ್ರವೇಶಿಸಿದ ಅವರು ಗಾಜಿನ ಮನೆಯಲ್ಲಿ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದರು. ನಿವೇದಿತಾ ಅವರ ವಿಶಿಷ್ಟ ಕಂಗ್ಲಿಷ್ ಉಚ್ಚಾರಣೆ ಮತ್ತು ಅವರ ಪತಿ (ಆಗ ಮದುವೆಯಾಗಿರಲಿಲ್ಲ. ಈ ರಿಯಾಲಿಟ್ ಶೋ ಮೂಲಕವೇ ಇಬ್ಬರ ಪರಿಚಯವಾಗಿ, ಪ್ರೇಮಕ್ಕೆ ತಿರುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು) ಚಂದನ್ ಶೆಟ್ಟಿ ಅವರೊಂದಿಗಿನ ಸಂಬಂಧವು ಜನರ ಗಮನ ಸೆಳೆಯಿತು. ಇದೀಗ ಹಲವು ವರ್ಷಗಳಿಂದ ನಿವೇದಿತಾ ಗೌಡ ರಿಯಾಲಿಟಿ ಟಿವಿ ಸ್ಟಾರ್ ಆಗಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ ಮತ್ತು ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಮತ್ತು ಇನ್ನೂ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಅವರು ಶೀಘ್ರದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಒಳ್ಳೆ ಹುಡುಗ ಪ್ರಥಮ್ (Olle Huduga Pratham)
ಮೈಸೂರು ಸಮೀಪದ ಸಣ್ಣ ಹಳ್ಳಿಯಿಂದ ಬಂದ ಪ್ರಥಮ್ 'ಬಿಗ್ ಬಾಸ್ ಕನ್ನಡ ಸೀಸನ್ 4' ಗೆಲ್ಲುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಅವರ ಸ್ಪರ್ಧಾತ್ಮಕ ಮನೋಭಾವ ಮತ್ತು ಮಾತು, ಟಾಸ್ಕ್ ಎಲ್ಲವೂ ಜನರಿಗೆ ಅಪಾರ ಮೆಚ್ಚುಗೆಯನ್ನು ಗಳಿಸಿತು. ಇತ್ತೀಚೆಗೆ, ಅವರು ಬಿಗ್ ಬಾಸ್ ಶೋನ ಪ್ರಸ್ತುತ ಸೀಸನ್ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಬಿಗ್ ಬಾಸ್ ಬಳಿಕ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ದಿವ್ಯಾ ಸುರೇಶ್ (Divya Suresh)
ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ದಿವ್ಯಾ ಸುರೇಶ್ ಸಾಕಷ್ಟು ಜನಪ್ರಿಯತೆ ಗಳಿಸಿದರು. ಅವರು ದೈಹಿಕ ಟಾಸ್ಕ್ ಗಳಲ್ಲಿ ನಿರಂತರವಾಗಿ ಉತ್ತಮ ಸಾಧನೆ ಮಾಡಿದರು, ಜೊತೆಗೆ ಆ ಸೀಸನ್ ನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಅವರ ಸ್ಪರ್ಧಾತ್ಮಕ ಸ್ವಭಾವ ಮತ್ತು ಸ್ನೇಹಪರ ವ್ಯಕ್ತಿತ್ವವು ವೀಕ್ಷಕರಿಂದ ಮೆಚ್ಚುಗೆಯನ್ನು ಗಳಿಸಿತು. ಬಿಗ್ ಬಾಸ್ ಕನ್ನಡ ಪ್ರಯಾಣದ ನಂತರ, ದಿವ್ಯಾ ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಧಾರವಾಗಿಯಾದ ತ್ರಿಪುರ ಸುಂದರಿ ಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ, ಮತ್ತಷ್ಟು ಜನಪ್ರಿಯತೆ ಗಳಿಸಿದರು.
ಚೈತ್ರಾ ವಾಸುದೇವನ್ (Chaitra Vasudevan)
ಚೈತ್ರಾ ವಾಸುದೇವನ್ ಸ್ವಲ್ಪ ಸಮಯದವರೆಗೆ ಮನರಂಜನಾ ಉದ್ಯಮದ ಭಾಗವಾಗಿದ್ದರೂ, ಬಿಗ್ ಬಾಸ್ ಕನ್ನಡ ಸೀಸನ್ 7 ಅವರಿಗೆ ವ್ಯಾಪಕ ಖ್ಯಾತಿಯನ್ನು ತಂದುಕೊಟ್ಟಿತು. ರಿಯಾಲಿಟಿ ಶೋನಲ್ಲಿ ಸ್ವಲ್ಪ ಸಮಯ ಕಾಣಿಸಿಕೊಂಡರೂ ಸಹ, ಚೈತ್ರಾ ಬಿಗ್ ಬಾಸ್ ಮನೆಯೊಳಗೆ ತನ್ನ ಬಬ್ಲಿ ನೇಚರ್ ನಿಂದಾಗಿ ಜನರಿಗೆ ಇಷ್ಟವಾಗಿದ್ದರು.
ಕಿಶನ್ ಬಿಳಗಲಿ (Kishen Bilagali)
ವೃತ್ತಿಯಲ್ಲಿ ಡ್ಯಾನ್ಸರ್ ಆಗಿರುವ ಕಿಶನ್ ಬಿಳಗಲಿ ಅವರು 'ತಕಧಿಮಿತ' ಮತ್ತು 'ಬಿಗ್ ಬಾಸ್ ಕನ್ನಡ ಸೀಸನ್ 7' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಮನ್ನಣೆಯನ್ನು ಗಳಿಸಿದ್ದಾರೆ. ಬಿಬಿ ಕನ್ನಡ 7 ರಲ್ಲಿ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬರೆಂದು ಕರೆಯಲ್ಪಡುತ್ತಿದ್ದ ಕಿಶನ್ ಈಗ ಸಾತ್ವಿಕಾ ಗೌಡ ಅವರೊಂದಿಗೆ ಕನ್ನಡ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಶಮಂತ್ ಗೌಡ (Shamanth Gowda)
ಡಿಜಿಟಲ್ ಮೀಡಿಯಾ ಸೆನ್ಸೇಷನ್ ನಿಂದ ಬಿಗ್ ಬಾಸ್ ಕನ್ನಡ ಸೀಸನ್ 8 ಗೆ ಪ್ರವೇಶಿಸಿದ ಶಮಂತ್ ಪ್ರಸ್ತುತ ದೈನಂದಿನ ಧಾರಾವಾಹಿ 'ಲಕ್ಷ್ಮಿ ಬಾರಮ್ಮ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ, ಶಮಂತ್ ತಮ್ಮ ರ್ಯಾಪ್ ಮ್ಯೂಸಿಕ್ ಕಂಪೋಸಿಶನ್ ಗಳಿಗೆ ಪ್ರಸಿದ್ಧರಾದರು, ಅದು ಎಲ್ಲರನ್ನೂ ಮೋಡಿ ಮಾಡಿತು. ಸದ್ಯ ಇವರು ಜನಮೆಚ್ಚಿನ ನಾಯಕನೂ ಆಗಿದ್ದಾರೆ.