ನಟ Dhanush Manager ಎಂದು ಹೇಳಿ ಅಸಭ್ಯ ಬೇಡಿಕೆ ಇಟ್ಟ: ಕನ್ನಡತಿ, ಕಿರುತೆರೆ ನಟಿ ಆರೋಪ!
ನಟ ಧನುಷ್ ಅವರ ಮ್ಯಾನೇಜರ್ ಎಂದು ಹೇಳಿಕೊಂಡ ಶ್ರೇಯಸ್ ಎನ್ನುವ ವ್ಯಕ್ತಿಯೊಬ್ಬ ಅಸಭ್ಯ ಬೇಡಿಕೆ ಇಟ್ಟದ್ದಾನೆ ಎಂದು ಕನ್ನಡದವರೇ ಆದ ನಟಿ ಮಾನ್ಯಾ ಆನಂದ್ ಅವರು ಸಂದರ್ಶನವೊಂದರಲ್ಲಿ ಆರೋಪ ಮಾಡಿದ್ದಾರೆ. ಹಾಗಾದರೆ ನಿಜಕ್ಕೂ ಏನಾಯ್ತು? ಏನಾಗಿದೆ?

ಧನುಷ್ ಮ್ಯಾನೇಜರ್ ಅಂದ್ರು
ಒಂದಾದ ಮೇಲೆ ಒಂದರಂತೆ ನಟ ಧನುಷ್ ಅವರ ವಿರುದ್ಧವೂ ಆರೋಪ ಕೇಳಿ ಬರುತ್ತಲೇ ಇದೆ. ಈಗ ತಮಿಳು ಕಿರುತೆರೆ ನಟಿ ಮಾನ್ಯಾ ಆನಂದ್ ಅವರು ಇತ್ತೀಚೆಗೆ 'ಸಿನಿಯುಲಗಮ್' (Cineulagam) ಎನ್ನುವ ಮಾಧ್ಯಮದ ಜೊತೆಗಿನ ಸಂದರ್ಶನದಲ್ಲಿ ಧನುಷ್ ಮ್ಯಾನೇಜರ್ ಎಂದು ಹೇಳಿರುವ ವ್ಯಕ್ತಿಯೊಬ್ಬರೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗುವಂತೆ ಮಾಡಿದ್ದರು ಎಂದಿದ್ದಾರೆ.
ಅಸಭ್ಯ ಬೇಡಿಕೆ ಇಟ್ಟರು
ನಟ ಧನುಷ್ ಅವರ ಮ್ಯಾನೇಜರ್ ಎಂದು ಹೇಳಿರುವ ಶ್ರೇಯಸ್ ವಿರುದ್ಧ 'ಕ್ಯಾಸ್ಟಿಂಗ್ ಕೌಚ್' ಆರೋಪ ಮಾಡಿದ್ದಾರೆ. ಮಾನ್ಯಾ ಹೇಳುವಂತೆ ಹೊಸ ಸಿನಿಮಾದ ಡಿಟೇಲ್ಸ್ ಪಡೆದು, ಅವರನ್ನು ಸಂಪರ್ಕಿಸಿದ ಶ್ರೇಯಸ್, ಅಸಭ್ಯವಾದ ಬೇಡಿಕೆಯೊಂದನ್ನು ಇಟ್ಟರು ಎಂದಿದ್ದಾರೆ. ಅಂದಹಾಗೆ ಶ್ರೇಯಸ್ ಎನ್ನುವವರು ಫೇಕ್ ಪರ್ಸನ್ ಎಂದು ಕೂಡ ಅವರು ಹೇಳಿದ್ದಾರೆ.
ಕಮಿಟ್‌ಮೆಂಟ್ ಯಾಕೆ?
ಶ್ರೇಯಸ್ ನಮಗೆ ಕಮಿಟ್‌ಮೆಂಟ್ ಇದೆ ಎಂದು ಹೇಳಿದರು ಎಂದಿದ್ದಾರೆ. ಇದು ವೃತ್ತಿಪರ ಮಿತಿಗಳನ್ನು ಮೀರಿದ ಲೈಂಗಿಕ ರಾಜಿ ಅಥವಾ ಅನೈತಿಕ ವ್ಯವಹಾರ ಎಂದು ಹೇಳಿದ್ದಾರೆ. ಶ್ರೇಯಸ್ ಅವರಿಗೆ ಏನು ಕಮಿಟ್‌ಮೆಂಟ್? ನಾನೇಕೆ ಕಮಿಟ್‌ಮೆಂಟ್ ಕೊಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಯಾವುದೇ ಅನೈತಿಕ ಬೇಡಿಕೆಗೆ ನಾನು ಒಪ್ಪೋದಿಲ್ಲ ಎಂದು ಮಾನ್ಯಾ ಹೇಳಿದ್ದರಂತೆ.
ಸಿನಿಮಾ ಸ್ಕ್ರಿಪ್ಟ್ ಓದಿಲ್ಲ
“ಆಮೇಲೆ ಶ್ರೇಯಸ್ ಅವರು ಧನುಷ್ ಸರ್, ಆದರೂ ನೀವು ಒಪ್ಪುವುದಿಲ್ಲವೇ?" ಎಂದು ಕೇಳಿದರು. ನಾನು ಆಗೋದಿಲ್ಲ ಎಂದೆ. ಶ್ರೇಯಸ್ ಹಲವು ಬಾರಿ ನನ್ನ ಕಾಂಟ್ಯಾಕ್ಟ್ ಮಾಡಿದರು. ಧನುಷ್ ಅವರ ಪ್ರೊಡಕ್ಷನ್ ಸಂಸ್ಥೆ 'ವಂಡರ್‌ಬಾರ್ ಫಿಲ್ಮ್ಸ್'ನ ಲೊಕೇಶನ್, ವಿವರ, ಚಿತ್ರಕಥೆಯನ್ನು ಕೂಡ ಕಳುಹಿಸಿದ್ದರು. ನಾನು ಆ ಸಿನಿಮಾ ಸ್ಕ್ರಿಪ್ಟ್ ಓದಿಲ್ಲ ಮತ್ತು ಆ ಸಿನಿಮಾದಲ್ಲಿ ಕೆಲಸ ಮಾಡುವ ಯಾವುದೇ ಉದ್ದೇಶವಿಲ್ಲ” ಎಂದು ಮಾನ್ಯಾ ಹೇಳಿದ್ದಾರೆ.
ಬೇರೆ ನಿರೀಕ್ಷೆ ಬೇಡ
"ನಾನು ಆ ಸಿನಿಮಾವನ್ನು ಮಾಡುತ್ತಿಲ್ಲ. ನಾವು ಕಲಾವಿದರು, ಕೆಲಸ ಮಾಡುತ್ತಿದ್ದೇವೆ, ನಮ್ಮಿಂದ ಕೆಲಸವನ್ನು ತಗೊಳ್ಳಿ. ಆದರೆ ಅದಕ್ಕೆ ಬೇರೆ ಇನ್ನೇನನ್ನೋ ನಿರೀಕ್ಷಿಸಬೇಡಿ. ನಿಮ್ಮ ಬೇಡಿಕೆಗೆ ನಾವು ಒಪ್ಪಿಕೊಂಡರೆ, ನಮ್ಮನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಜನರು ಕೂಡ ಇದನ್ನು ಗುರುತಿಸಿ, ಅದನ್ನು ಸರಿಪಡಿಸುವುದು ಉತ್ತಮ" ಎಂದಿದ್ದಾರೆ.
ಅವಕಾಶ ಕೊಡ್ತೀನಿ ಅಂತಾರೆ
“ಇದೇ ಸಿನಿಮಾಕ್ಕೋಸ್ಕರ ಇನ್ನೊಬ್ಬ ಮ್ಯಾನೇಜರ್ ಕೂಡ ನನಗೆ ಇದೇ ರೀತಿಯ ಅಸಭ್ಯ ಬೇಡಿಕೆ ಇಟ್ಟು ಕಾಂಟ್ಯಾಕ್ಟ್ ಮಾಡಿದ್ದರು. ಇದು ಚಿತ್ರರಂಗದಲ್ಲಿನ ಆತಂಕಕಾರಿ ಪರಿಸ್ಥಿತಿ. ತಮಿಳು ಚಿತ್ರರಂಗದಲ್ಲಿ ಈ ಸಮಸ್ಯೆ ಮರುಕಳಿಸುತ್ತಿದೆ. ಕರಿಯರ್ ಅಥವಾ ಅವಕಾಶ ಕೊಡ್ತೀವಿ ಎಂದು ಕಲಾವಿದರಿಗೆ ರಾಜಿ ಮಾಡಿಕೊಳ್ಳಬೇಕು ಎಂದು ಹೇಳಬೇಡಿ ಅಥವಾ ಬೇರೆ ಡಿಮ್ಯಾಂಡ್ ಇಡಬಾರದು ಎಂದಿದ್ದಾರೆ.
ಮಾನ್ಯಾ ಆನಂದ್ ಯಾರು?
ಕನ್ನಡದವರೇ ಆದ ಮಾನ್ಯಾ ಆನಂದ್ ಅವರು ತಮಿಳು ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. 'ವಾನತ್ತೈ ಪೋಲ' (Vanathai Pola) ಎಂಬ ಸೀರಿಯಲ್‌ನಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿನ ಕಷ್ಟಗಳು, ಕಲಾವಿದರಿಗೆ ಇರುವ ಸವಾಲುಗಳ ಕುರಿತು ಅವರು ಮಾತನಾಡಿದ್ದಾರೆ.

