ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳಲು ಮನೆ ಗೃಹ ಪ್ರವೇಶ ಬೇಗ ಮಾಡಿದ್ರಾ ನಾಗಿಣಿ ನಟಿ ನಮ್ರತಾ ಗೌಡ?
ನಾಗಿಣಿ 2 ಸೀರಿಯಲ್ ನಟಿ ನಮ್ರತಾ ಗೌಡ ನೂತನ ಮನೆಗೆ ಕಾಲಿಟ್ಟಿದ್ದು, ಗೃಹಪ್ರವೇಶಕ್ಕೆ ಕಿರುತೆರೆಯ ನಟರು, ಆಗಮಿಸಿ ಶುಭ ಕೋರಿದ್ದಾರೆ. ಇಲ್ಲಿದೆ ನೋಡಿ ನಮ್ರತಾ ಗೌಡ ಗೃಹಪ್ರವೇಶದ ಸಂಭ್ರಮದ ಕ್ಷಣಗಳು.
ನಾಗಿಣಿ 2 ಮತ್ತು ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ನಮ್ರತಾ ಗೌಡ (Namratha Gowda), ನೂತನ ಮನೆಗೆ ಕಾಲಿಟ್ಟಿದ್ದು, ಗೃಹಪ್ರವೇಶ ಅದ್ಧೂರಿಯಾಗಿ ಮಾಡಿದ್ದಾರೆ. ನಮ್ರತಾ ಸೀರೆ, ಆಭರಣ, ಮೆಹೆಂದಿಯಲ್ಲಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ಅದ್ಧೂರಿಯಾಗಿ ನಡೆದ ಗೃಹಪ್ರವೇಶ ಸಮಾರಂಭದಲ್ಲಿ ಕಿರುತೆರೆಯ ನಟ -ನಟಿಯರು, ಹಿನ್ನೆಲೆ ಗಾಯಕರು, ಟೆಕ್ನೀಶಿಯನ್ ಹೀಗೆ ಹಲವರು ಆಗಮಿಸಿ ಶುಭ ಕೋರಿದ್ದರು. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟಿಯ ಗೃಹಪ್ರವೇಶಕ್ಕೆ ಶುಭ ಕೋರಿದ್ದಾರೆ.
ನಮ್ರತಾ ಗೌಡ ನೂತನ ಗೃಹ ಪ್ರವೇಶಕ್ಕೆ ನಟಿ ನೇಹಾ ಗೌಡ, ಅನುಪಮಾ ಗೌಡ, ಕವಿತಾ ಗೌಡ, ಕಿಶನ್ ಬಿಳಗಲಿ, ಯಶಸ್ವಿನಿ ಕೆ ಸ್ವಾಮಿ, ಅನಿಕಾ ಸಿಂಧ್ಯಾ, ಸಿಂಧು ಕಲ್ಯಾಣ, ಕಾರ್ತಿಕ್ ಶರ್ಮಾ ಮುಂತಾದವರು ಆಗಮಿಸಿ, ಶುಭ ಕೋರಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social media)ಸದ್ದು ಮಾಡುತ್ತಿವೆ.
ಗೃಹಪ್ರವೇಶದ ಸಂದರ್ಭದಲ್ಲಿ ನಟಿ ನಮ್ರತಾ, ಮೊದಲಿಗೆ ಪೀಚ್ ಬಣ್ಣದ ಸೀರೆ ಬಳಿಕ ಗುಲಾಬಿ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮೆಹೆಂದಿ, ಟೆಂಪಲ್ ಜ್ಯುವೆಲ್ಲರಿ, ತಲೆಯಲ್ಲಿ ಮಲ್ಲಿಗೆ ಹೂವು ಮುಡಿದು ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದರು.
ನಮ್ರತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲಿನ ಪೂಜೆಯ ಫೋಟೋಗಳು, ತಂದೆ, ತಾಯಿ, ಸಂಬಂಧಿಕರು ಸ್ನೇಹಿತರೊಂದಿಗೆ ಸಂಭ್ರಮಿಸಿದ ಕ್ಷಣಗಳು, ಜೊತೆಗೆ ತಮ್ಮ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ನಟಿಯರಾದ ಅನುಪಮಾ ಗೌಡ ಮತ್ತು ನೇಹಾ ಗೌಡ, ಜೊತೆಯಾಗಿ ಬಂದು ನಮ್ರತಾ ಗೌಡ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದು, ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಜೊತೆಗೆ ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಅನುಪಮಾ ಗೌಡ (Anupama Gowda), ನಮ್ರತಾಗೆ ವಿಶ್ ಮಾಡಿದ್ದಾರೆ.
ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ನಮ್ರತಾ ಅತ್ತೆಯಾಗಿ ನಟಿಸಿದ್ದ ನಟಿ ಸಿಂಧು ಕಲ್ಯಾಣ್, ಜೊತೆ ನಮ್ರತಾ ಅತ್ಯುತ್ತಮ ಬಾಂಡಿಂಗ್ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸಿಂಧು ಗಂಡ ಮಕ್ಕಳು, ಹೀಗೆ ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಇನ್ನು ಬಿಗ್ ಬಾಸ್ ಕಂಟೆಸ್ಟೆಂಟ್ (Bigg Boss) ಮತ್ತು ಡ್ಯಾನ್ಸರ್ ಆಗಿರುವ ಕಿಶನ್ ಬಿಳಗಲಿ ಮತ್ತು ನಮ್ರತಾ ಅತ್ಯುತ್ತಮ ಸ್ನೇಹಿತರಾಗಿದ್ದು, ಇಬ್ಬರು ಜೊತೆಯಾಗಿ ಹಲವು ಡ್ಯಾನ್ಸ್ ರೀಲ್ಸ್ ಮಾಡಿದ್ದಾರೆ. ಗೃಹಪ್ರವೇಶದಂದೂ ಸಹ ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದು, ಕಿಶನ್ ಆ ರೀಲ್ಸ್ ಮೂಲಕವೇ ನಮ್ರತಾಗೆ ಶುಭ ಕೋರಿದ್ದಾರೆ.
ಸದ್ಯ ಯಾವುದೇ ಸೀರಿಯಲ್‌ಗಳಲ್ಲಿ ನಟಿ ನಮ್ರತಾ ಗೌಡ ನಟಿಸುತ್ತಿಲ್ಲ, ಆದರೆ, ಸದ್ಯದಲ್ಲೇ ಆರಂಭವಾಗಲಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೇಗನೆ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.