ಹೊಸ ವರ್ಷದ ಆಫರ್, APK ಫೈಲ್ ಸೈಬರ್ ವಂಚನೆ: ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳಿಗೆ ಪೊಲೀಸರಿಂದ ಎಚ್ಚರಿಕೆ
ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಹಾನಿಕಾರಕ APK ಫೈಲ್‌ಗಳು ಮತ್ತು ಲಿಂಕ್‌ಗಳನ್ನು ಹರಿಬಿಡುತ್ತಿದ್ದಾರೆ. ಇಂತಹ ಫೈಲ್‌ಗಳನ್ನು ತೆರೆದರೆ ಅಥವಾ ಹಂಚಿಕೊಂಡರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು. ಸುರಕ್ಷಿತವಾಗಿರಿ ಮತ್ತು ಯಾವುದೇ ಅನಾಮಧೇಯ ಲಿಂಕ್‌ಗಳು ಅಥವಾ APK ಫೈಲ್‌ಗಳನ್ನು ಕ್ಲಿಕ್ ಮಾಡಬೇಡಿ.
ಅಂಥವುಗಳನ್ನು ಯಾವುದೇ ಸಾರ್ವಜನಿಕರು ಕ್ಲಿಕ್ ಮಾಡಬೇಡಿ. ಜೊತೆಗೆ ಅಂತಹ APK ಫೈಲ್‌ಗಳು ನಿಮ್ಮ ವಾಟ್ಸಾಪ್ ಗುಂಪಿಗೆ ಬಂದರೆ ಕೂಡಲೇ ಅವುಗಳನ್ನು ಸಂಬಂಧಪಟ್ಟ ಅಡ್ಮಿನ್‌ಗಳು ಡಿಲೀಟ್ ಮಾಡಬೇಕು. ಜೊತೆಗೆ, 1930 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಇಲಾಖೆಯಿಂದ ತಿಳಿಸಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ಈಗಾಗಲೇ ಶುರುವಾಗಿದ್ದು, ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದೇ ಸಮಯವನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿರುವ ಸೈಬರ್ ವಂಚಕರು ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಕೆಲವು APK ಫೈಲ್ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಾರೆ.
ಹೊಸ ವರ್ಷದ ಸಂಭ್ರಮದಲ್ಲಿರುವ ಯುವಜನರು ಸೇರಿದಂತೆ ಎಲ್ಲ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ನಿಮಗೆ ಪಾರ್ಟಿ ಮಾಡಲು ಟಿಕೆಟ್ ಕೊಡಿಸಲಾಗುವುದು. ಹೊಸ ವರ್ಷದ ಭಾರಿ ರಿಯಾಯಿತಿ ಅಡಿಯಲ್ಲಿ ನಿಮಗೆ ಕೇವಲ 500 ರೂ.ಗೆ ಗೋವಾ ಪ್ರವಾಸ ಕರೆದೊಯ್ಯಲಾಗುವುದು ಎಂದೆಲ್ಲಾ ಸಂದೇಶಗಳು, APK ಫೈಲ್ ಗಳು ಹಾಗೂ ಕ್ಯೂ ಆರ್ ಕೋಡ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತದೆ.
ಇನ್ನು ಕೇವಲ ನೀವು ಇಂತಹ ಫೈಲ್‌ಗಳನ್ನು ಓಪನ್ ಮಾಡುವುದರ ಜೊತೆಗೆ ಅವುಗಳನ್ನು ಶೇರ್ ಮಾಡಿಕೊಂಡರೆ ನಿಮಗೆ ರಿಯಾಯಿತಿ ನೀಡುವುದಾಗಿ ತಿಳಿಸಲಾಗುತ್ತದೆ. ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್‌ಗೆ ವೈರಸ್‌ಗಳನ್ನು ಸೇರಿಸಿ ನಿಮ್ಮ ಮೊಬೈಲ್‌ನ ಮಾಹಿತಿಗಳನ್ನು ಕೂಡ ಕದಿಯಬಹುದು. ಮೊಬೈಲ್‌ಗಳನ್ನು ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿ ಕದ್ದು, ನಿಮಗೆ ಬೆದರಿಕೆ ಹಾಕುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ನಿಮ್ಮ ಹೊಸ ವರ್ಷ ಮೆರುಗು ತರಲಿ; ವಂಚಕರು ಬೀಸಿದ ಮೋಸದ ಜಾಲವನ್ನಲ್ಲ..! ನಿಮ್ಮ ಪಾಸುಗಳನ್ನು ಪರಿಶೀಲಿಸಿ ಹಾಗೂ ಯಾವುದೇ ರೀತಿಯ ಅನಾಮಧೇಯ APK ಫೈಲ್ ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ. 2025ನ್ನು 'ಸೈಬರ್ ವಂಚನಾರಹಿತ ವರ್ಷ'ವನ್ನಾಗಿ ಆರಂಭಿಸಿ.
ಇನ್ನು ಹೊಸ ವರ್ಷಾಚರಣೆಗೆ ಬಡ್ಡಿರಹಿತ ಹಣ ನೀಡುವ ಲೋನ್ ಆಪ್ ಇದೆಯೆಂದು ತಿಳಿಸಿ ನಿಮಗೆ ಲೋನ್ ನೀಡುವ ಮೂಲಕ ಅಪಾಯವನ್ನು ತಂದೊಡ್ಡಬಹುದು. ಮೋಸಗಾರರು ನಿಮ್ಮ ಡೇಟಾವನ್ನು ದುರುಪಯೋಗಪಡಿಸಿ ಬೆದರಿಕೆ ಹಾಕಿ ಬ್ಲಾಕ್‌ಮೇಲ್ ಮಾಡುತ್ತಾರೆ. ಸುರಕ್ಷಿತವಾಗಿರಿ-1930ಕ್ಕೆ ಕರೆಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಬೆಂಗಳೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ವಾಟ್ಸಾಪ್ ಅಡ್ಮಿನ್‌ಗಳಿಗೆ ಸಂದೇಶ: ಹೊಸ ವರ್ಷದ ಶುಭಾಶಯಗಳು ಕೋರುವ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳ ಕುರಿತು ಎಚ್ಚರಿಕೆ. 2025ನೇ ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತು APK ಫೈಲ್ ಗಳನ್ನು ಕಳುಹಿಸಿ ಸಾರ್ವಜನಿಕರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ.
ನಂತರ ಹ್ಯಾಕ್ ಮಾಡಿದ ಮೊಬೈಲಿನಿಂದ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆಯಿದೆ. ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್‌ಗಳು ಮತ್ತು APK ಫೈಲ್‌ಗಳನ್ನು ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡಲ್ಲಿ ಅದನ್ನು ತಕ್ಷಣ ಡಿಲೀಟ್ ಮಾಡಿರಿ. ಯಾವುದೇ ಕಾರಣಕ್ಕೂ ಸದ್ರಿ ಹಾನಿಕರ ಲಿಂಕ್ ಮತ್ತು APK ಫೈಲ್ ಗಳನ್ನು ಯಾರಿಗೂ ಶೇರ್ ಮಾಡದಿರಿ.
ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ಯಾವುದಾದರೂ ವಾಟ್ಸಾಪ್ ಗ್ರೂಪ್ ಗಳಿಗೆ ನಿಮ್ಮ ಪರಿಚಿತ ವಾಟ್ಸಾಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದಲ್ಲಿ ಸದ್ರಿ ಗ್ರೂಪಿನ ಅಡ್ಮಿನ್ ಗಳು ಅಂತಹ ಲಿಂಕ್ ಮತ್ತು APK ಫೈಲ್ ಗಳನ್ನು ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಈ ಮೂಲಕ ಸೂಚಿಸಲಾಗಿದೆ. ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಕ್ಕೆ ಕರೆ ಮಾಡಿ ಅಥವಾ www.cybercrime.gov.in ಈ ವೆಬ್ ಸೈಟ್ ನಲ್ಲಿ ದೂರನ್ನು ದಾಖಲಿಸಿ ಎಂದು ಬೆಂಗಳೂರು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.