ದಸರಾ ಆನೆಗಳ ತೂಕ ರಿವೀಲ್ ಮಾಡಿದ ಅರಣ್ಯ ಇಲಾಖೆ!
ಮೈಸೂರು (ಆ.24): ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರಲ್ಲಿ ಪಾಲ್ಗೊಳ್ಳಲಿರುವ ಅಂಬಾರಿ ಹೊರುವ ಆನೆ ಅಭಿಮನ್ಯು ಸೇರಿದಂತೆ ಧನಂಜಯ, ವರಲಕ್ಷ್ಮೀ, ಲಕ್ಷ್ಮೀ, ಭೀಮ, ಗೋಪಿ, ಏಕಲವ್ಯ, ಕಂಜನ್ ಮತ್ತು ರೋಹಿತ್ ಆನೆಗಳ ತೂಕದ ವಿವರ ಇಲ್ಲಿದೆ ನೋಡಿ..
ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಈಗಾಗಲೇ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ಈಗಾಗಲೇ ಮೈಸೂರು ಅರಮನೆಗೆ ಲಗ್ಗೆಯಿಟ್ಟಿವೆ. ಅದರಲ್ಲಿ ಅಂಬಾರಿ ಹೊರುವ ಅಭಿಮನ್ಯು ಬರೋಬ್ಬರಿ 5,560 ಕೆ.ಜಿ. ತೂಕವನ್ನು ಹೊಂದಿದ್ದಾನೆ.
ಸದರಿ ವರ್ಷ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಲ್ಲಿ ಅಭಿಮನ್ಯು ಆನೆ ಅತಿಹೆಚ್ಚು ತೂಕ ಹೊಂದಿದ ಆನೆಯಾಗಿದೆ. ಇನ್ನು ಇತ್ತೀಚೆಗೆ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅಂಬಾರಿ ಆನೆ ಅರ್ಜುನ 6,000 ಕೆ.ಜಿ. ತೂಕವಿತ್ತು. ಮುಂದಿನ ವರ್ಷಕ್ಕೆ ಅಭಿಮನ್ಯು ಕೂಡ ಅರ್ಜುನ ತೂಕ ಮೀರಿಸಬಹುದು ಎಂದು ಲೆಕ್ಕಚಾರ ಹಾಕಲಾಗುತ್ತಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಿಂದ ಆ.21ರಂದು ದಸರಾ ಗಜಪಡೆ ಕಾಡಿನಿಂದ ನಾಡಿಗೆ ಆಗಮಿಸಿದೆ. ಇದರಲ್ಲಿ ಧನಂಜಯ ಆನೆ 5,155 ಕೆ.ಜಿ. ತೂಕವನ್ನು ಹೊಂದಿದೆ. ಅಭಿಮನ್ಯು ಬಿಟ್ಟರೆ ಇದೇ ಅತಿಹೆಚ್ಚು ತೂಕವನ್ನು ಹೊಂದಿದೆ.
ಮತ್ತಿಗೋಡು ಆನೆ ಶಿಬಿರದಿಂದ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಏಕಲವ್ಯ ಆನೆ (39) ವರ್ಷ 4,730 ಕೆ.ಜಿ. ತೂಕ ಹೊಂದಿದೆ. ಭವಿಷ್ಯದಲ್ಲಿ ಏಕಲವ್ಯ ಆನೆಗೆ ಭಾರಿ ಬೇಡಿಕೆ ಬರುವ ನಿರೀಕ್ಷೆಯಿದೆ.
ಅಂಬಾರಿ ಹೊರುವ ಆನೆ ಅಭಿಮನ್ಯುವಿನ ಅಕ್ಕಪಕ್ಕದಲ್ಲಿ ಸಾಥ್ ಕೊಡಲು ವರಲಕ್ಷ್ಮೀ ಅಥವಾ ಲಕ್ಷ್ಮೀ ಆನೆಗಳು ಸಾಥ್ ಕೊಡಲಿವೆ. ಇದರಲ್ಲಿ ವರಲಕ್ಷ್ಮೀ ಆನೆ 3,495 ಕೆ.ಜಿ. ತೂಕವಿದೆ.
ಮತ್ತೊಂದೆಡೆ ದಸರಾ ಮಹೋತ್ಸವಕ್ಕೆ ಮೊದಲ ಬ್ಯಾಚ್‌ನಲ್ಲಿ ಬಂದ ಹೆಣ್ಣಾನೆಗಳ ಪೈಕಿ ಮತ್ತೊಂದು ಹೆಣ್ಣಾನೆ ದೊಡ್ಡಹರವೆ ಲಕ್ಷ್ಮಿ 2,480 ಕೆ.ಜಿ. ತೂಕವನ್ನು ಹೊಂದಿದೆ. ಇದು ದಸರಾ ಆನೆಗಳಲ್ಲಿ ಅತಿಕಡಿಮೆ ತೂಕವನ್ನು ಹೊಂದಿದ ಆನೆಯಾಗಿದೆ.
ರಾಜ್ಯದಲ್ಲಿ ಆನೆಗಳ ಕಾರ್ಯಾಚರಣೆ ಮತ್ತು ಇತರೆ ಕಾರ್ಯಗಳಲ್ಲಿ ಬಲ ಪ್ರದರ್ಶನ ಮಾಡುವ ಆನೆಗಳಾದ ಭೀಮ ಆನೆ 4,945 ಕೆ.ಜಿ. ಹಾಗೂ ಗೋಪಿ 4,970 ಕೆ.ಜಿ. ತೂಕವನ್ನು ಹೊಂದಿವೆ.
ಉಳಿದಂತೆ ದಸರಾಕ್ಕೆ ಬಂದ ಮೊದಲ ಗಜಪಡೆಯಲ್ಲಿ ಕಂಜನ್ ಆನೆ 4,515 ಕೆ.ಜಿ. ಹಾಗೂ ರೋಹಿತ್ ಆನೆ 3,625 ಕೆ.ಜಿ. ತೂಕಗಳನ್ನು ಹೊಂದಿವೆ. ಎಲ್ಲ ಆನೆಗಳಿಗೂ ಪೌಷ್ಠಿಕ ಆಹಾರ, ಸ್ನಾನದೊಂದಿಗೆ ಉತ್ತಮವಾಗಿ ನೋಡಿಕೊಳ್ಳಲಾಗುತ್ತದೆ. ಮುಂದಿನ ತಿಂಗಳಲ್ಲಿ ನಗರದಲ್ಲಿ ದಸರಾ ತಾಲೀಮು ಮಾಡಲಿವೆ.